ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಎಸ್.ರವಿಕುಮಾರ್ ರಾಜೀನಾಮೆ

ಬೆಂಗಳೂರು: ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಎಸ್.ರವಿಕುಮಾರ್ ರಾಜೀನಾಮೆ ಸಲ್ಲಿಸಿದ್ದಾರೆ.
ಎಸ್.ರವಿಕುಮಾರ್ ವಿರುದ್ಧ ಭೂ ಒಡೆತನ ಯೋಜನೆಯ ಫಲಾನುಭವಿಗಳಿಂದ ಕಮಿಷನ್ ವಸೂಲಿ ಮಾಡಿದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿರುವುದಾಗಿ ಬುಧವಾರ ರವಿಕುಮಾರ್ ಹೇಳಿದ್ದರು. ಅದರಂತೆ ಇಂದು ಅವರು ಮುಖ್ಯಮಂತ್ರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ತನ್ನ ಅಧಿಕಾರಾವಧಿಯಲ್ಲಿ ಸರ್ಕಾರದ ಕಾರ್ಯಕ್ರಮಗಳನ್ನು ನಿಗಮದ ಮೂಲಕ ಕಾರ್ಯಗತಗೊಳಿಸಿದ್ದೇನೆ. ನನ್ನ ಅವಧಿಯಲ್ಲಿ ನಿಗಮದಲ್ಲಿ ಯಾವುದೇ ಆಕ್ರಮಗಳು ನಡೆದಿರುವುದಿಲ್ಲ ಎಂಬುದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ ಎಂದು ಮುಖ್ಯಮಂತ್ರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಅವರು ಹೇಳಿದ್ದಾರೆ.
ಹಿಂದಿನ ಸರಕಾರದ ಅವಧಿಯಲ್ಲಿ ನಡೆದಿದ ಅಕ್ರಮಗಳ ಬಗ್ಗೆ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿರುವುದು ಸರಿಯಷ್ಟ. ನಿಗಮದಲ್ಲಿ ಹಿಂದಿನಿಂದ ನಡೆದುಕೊಂಡು ಬರುತ್ತಿದ್ದ ಕೆಲವು ಅನುಚಿತ ವ್ಯವಹಾರ ಮತ್ತು ಅಶಿಸ್ತನ್ನು ತಾನು ಪತ್ತೆ ಹಚ್ಚಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಕ್ಕೇ ತನ್ನ ವಿರುದ್ಧ ಪಿತೂರಿ ನಡೆದು ತನ್ನ ತೇಜೋವಧೆ ಮಾಡುವ ಪ್ರಯತ್ನ ನಡೆದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧದ ಅಗತ್ಯ ಕ್ರಮಕ್ಕೆ ಕೆಗೊಳ್ಳುವಂತೆ ರವಿಕುಮಾರ್ ಅವರು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.
ಸೈಬರ್ ಪೊಲೀಸರು ಮತ್ತು ಎಫ್ಎಎಲ್ ತಂಡದಿಂದ ತನಿಖೆ ನಡೆಸಿ ತಾಂತ್ರಿಕ ಸಲಕರಣೆಗಳನ್ನು ಬಳಸಿ ತನ್ನ ತೇಜೋವಧೆಗೆ ವೀಡಿಯೋ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದವರು ಒತ್ತಾಯಿಸಿದ್ದಾರೆ.







