ಫೆ.5ರಂದು ಸಅದಿಯಾ ಫೌಂಡೇಶನ್ ಘಟಿಕೋತ್ಸವ
85 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ:ಮೌಲಾನಾ ಎನ್.ಕೆ.ಎಂ.ಶಾಫಿ ಸಅದಿ

ಮೌಲಾನಾ ಎನ್.ಕೆ.ಎಂ.ಶಾಫಿ ಸಅದಿ
ಬೆಂಗಳೂರು: ಬೆಂಗಳೂರಿನ ಸಅದಿಯಾ ಎಜುಕೇಷನಲ್ ಫೌಂಡೇಶನ್ 20 ವರ್ಷ ಪೂರ್ಣಗೊಳಿಸುತ್ತಿದ್ದು, ಫೆ.5ರಂದು ಸಂಜೆ 5 ಗಂಟೆಗೆ ಅರಮನೆ ಮೈದಾನದ ಕಿಂಗ್ಸ್ಕೋರ್ಟ್ನಲ್ಲಿ ಆಯೋಜಿಸಿರುವ ಘಟಿಕೋತ್ಸವ(ದಸ್ತಾರ್ ಬಂದಿ)ಸಮಾರಂಭದಲ್ಲಿ 85 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ಸಅದಿಯಾ ಎಜುಕೇಷನಲ್ ಫೌಂಡೇಶನ್ ಸಂಸ್ಥಾಪಕ ಹಾಗೂ ಪ್ರಧಾನ ಕಾರ್ಯದರ್ಶಿ ಮೌಲಾನಾ ಎನ್.ಕೆ.ಎಂ.ಶಾಫಿ ಸಅದಿ ತಿಳಿಸಿದರು.
ಮಂಗಳವಾರ ನಗರದ ಅರಮನೆ ಮೈದಾನದ ಕಿಂಗ್ಸ್ಕೋರ್ಟ್ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇರಳ, ಕರ್ನಾಟಕ, ಒಡಿಶಾ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಮದ್ರಸಾಗಳಲ್ಲಿ ಮೌಲ್ವಿ ಕೋರ್ಸ್ ಪೂರ್ಣಗೊಳಿಸಿದ ಮಕ್ಕಳಿಗೆ ನಮ್ಮ ಸಂಸ್ಥೆಯಲ್ಲಿ ಮೂರು ವರ್ಷಗಳ ಮುಫ್ತಿ ಕೋರ್ಸ್ ಕಲಿಸಲಾಗುತ್ತಿದೆ ಎಂದು ಹೇಳಿದರು.
ಈ ವರ್ಷ 22 ಮಕ್ಕಳು ಮುಫ್ತಿ, 45 ಮಕ್ಕಳು ಆಲಿಮ್, 13 ಮಕ್ಕಳು ಹಾಫಿಝ್, 25 ಹೆಣ್ಣು ಮಕ್ಕಳು ಆಲಿಮಾ ಆಗುತ್ತಿದ್ದಾರೆ. ಇವರೆಲ್ಲರಿಗೂ ಕೇರಳದ ಕಾಸರಗೋಡಿನ ಜಾಮಿಯಾ ಸಅದಿಯಾ ಅರಬಿಯಾ ಹಾಗೂ ಸಅದಿಯಾ ಎಜುಕೇಷನಲ್ ಫೌಂಡೇಶನ್ ಅಧ್ಯಕ್ಷ ಸೈಯದ್ ಕೆ.ಎಸ್.ಅಟ್ಟಕೋಯ ತಂಙಳ್ ನೇತೃತ್ವ ವಹಿಸಲಿರುವ ಈ ಕಾರ್ಯಕ್ರಮದಲ್ಲಿ ಪದವಿ ಪ್ರದಾನ ಮಾಡಲಾಗುವುದು ಎಂದು ಶಾಫಿ ಸಅದಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಫ್ತಿ ಅಸ್ಲಂ ಮಿಸ್ಬಾಹಿ, ಮುಫ್ತಿ ಮುಹಮ್ಮದ್ ಝಬೀಉಲ್ಲಾ, ಮುಫ್ತಿ ಶಬ್ಬೀರ್ ಅಹ್ಮದ್ ರಝ್ವಿ, ಖಾರಿ ಝುಲ್ಫಿಖಾರ್ ನೂರಿ, ಮೌಲಾನಾ ಕೆ.ಸಿ.ರೋಡ್ ಹುಸೇನ್ ಸಅದಿ, ಡಾ.ಎಂ.ಎಸ್.ಅಬ್ದುಲ್ ರಶೀದ್ ಝೈನಿ, ಸಚಿವರಾದ ಝಮೀರ್ ಅಹ್ಮದ್ ಖಾನ್, ರಹೀಮ್ ಖಾನ್, ಶಾಸಕ ರಿಝ್ವಾನ್ ಅರ್ಶದ್, ಪರಿಷತ್ ಸದಸ್ಯರಾದ ಸಲೀಮ್ ಅಹ್ಮದ್, ಅಬ್ದುಲ್ ಜಬ್ಬಾರ್, ಬಿ.ಎಂ.ಫಾರೂಕ್ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
2004ರಲ್ಲಿ ಪ್ರಾರಂಭವಾದ ಸಅದಿಯಾ ಎಜುಕೇಷನಲ್ ಫೌಂಡೇಶನ್ ಬಡ ಮಕ್ಕಳಿಗೆ ಲೌಕಿಕ ಹಾಗೂ ಧಾರ್ಮಿಕ ಶಿಕ್ಷಣವನ್ನು ನೀಡುತ್ತಾ ಬಂದಿದೆ. ದಾವ ಕಾಲೇಜು ಆರಂಭಿಸಿ ಅದರಲ್ಲಿ ಎಸೆಸೆಲ್ಸಿ ನಂತರ 5 ವರ್ಷ ಶಿಕ್ಷಣ ನೀಡಿ, ಅವರನ್ನು ಪದವೀಧರರನ್ನಾಗಿ ಮಾಡುವುದರ ಜೊತೆಗೆ ಧಾರ್ಮಿಕ ಶಿಕ್ಷಣವನ್ನು ನೀಡುತ್ತಿದ್ದೇವೆ ಎಂದು ಅವರು ಹೇಳಿದರು.
ಬೆಂಗಳೂರಿನ ಕೊಳಚೆ ಪ್ರದೇಶಗಳಲ್ಲಿ ಇರುವ ಮಕ್ಕಳಿಗಾಗಿ ಬನ್ನೇರುಘಟ್ಟ ಬಳಿ ಕ್ಯಾಂಪಸ್ ಮಾಡಿ, ಐದನೇ ತರಗತಿ ಉತ್ತೀರ್ಣರಾದ ಮಕ್ಕಳಿಗೆ ಪ್ರವೇಶ ನೀಡಿ, 12ನೇ ತರಗತಿವರೆಗೆ ಲೌಕಿಕ ಶಿಕ್ಷಣ ನೀಡಲಾಗುತ್ತಿದೆ. ಜೊತೆಗೆ, ಅವರನ್ನು ಹಾಫಿಝ್ ಹಾಗೂ ಹೆಣ್ಣು ಮಕ್ಕಳಿಗೆ ಹಾಫಿಝಾರನ್ನಾಗಿ ಮಾಡಲಾಗುತ್ತಿದೆ ಎಂದು ಶಾಫಿ ಸಅದಿ ವಿವರಿಸಿದರು.
ಸಅದಿಯಾ ಎಜುಕೇಷನಲ್ ಫೌಂಡೇಶನ್ 20 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಯುವ ಸಮುದಾಯಕ್ಕೆ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಸ್ಪೂರ್ತಿಯಾಗಿರುವ ಕೆ.ಜಿ.ಎಫ್.ಬಾಬು ಅವರಿಗೆ ‘ಸಅದಿಯಾ ಬಿಸಿನೆಸ್ ಮ್ಯಾಗ್ನೆಟ್ ಅವಾರ್ಡ್-2025’ ಅನ್ನು ಇದೇ ಕಾರ್ಯಕ್ರಮದ ವೇಳೆ ಪ್ರದಾನ ಮಾಡಲು ಪ್ರಶಸ್ತಿ ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ಮೌಲಾನಾ ಎನ್.ಕೆ.ಎಂ.ಶಾಫಿ ಸಅದಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಅದಿಯಾ ಎಜುಕೇಷನಲ್ ಫೌಂಡೇಶನ್ ವ್ಯವಸ್ಥಾಪಕರಾದ ಮೌಲಾನಾ ಇಸ್ಮಾಯಿಲ್ ಸಅದಿ ಕಿನ್ಯಾ, ಮೌಲಾನಾ ಬಶೀರ್ ಸಅದಿ, ನಿವೃತ್ತ ಡಿಸಿಪಿ ಜಿ.ಎ.ಬಾವಾ, ಡಾ.ಬಿ.ಎಂ.ಉಮರ್ ಉಪಸ್ಥಿತರಿದ್ದರು.