ಉದ್ಯೋಗ ಮೇಳದಿಂದ ನಿರುದ್ಯೋಗಿಗಳಿಗೆ ಅನುಕೂಲ : ಸಲೀಂ ಅಹ್ಮದ್

ಬೆಂಗಳೂರು : ಉದ್ಯೋಗ ಮೇಳಗಳಿಂದ ಗ್ರಾಮೀಣ ಮತ್ತು ಪಟ್ಟಣ ಪ್ರದೇಶದ ನಿರುದ್ಯೋಗಿ ಯುವಕ, ಯುವತಿಯರಿಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಅನುಕೂಲವಾಗಲಿದೆ ಎಂದು ವಿಧಾನಪರಿಷತ್ತಿನ ಸರಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಅಭಿಪ್ರಾಯಪಟ್ಟರು.
ಶುಕ್ರವಾರ ನಗರದ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಆಲ್ ಇಂಡಿಯಾ ಕೇರಳ ಮುಸ್ಲಿಮ್ ಕಲ್ಚರಲ್ ಸೆಂಟರ್(ಎಐಕೆಎಂಸಿಸಿ) ಹಾಗೂ ಶಿಹಾಬ್ ತಂಙಳ್ ಸೆಂಟರ್ ಫಾರ್ ಹ್ಯೂಮಾನಿಟಿ ವತಿಯಿಂದ ಹಮ್ಮಿಕೊಂಡಿದ್ದ ‘ಬೃಹತ್ ಉದ್ಯೋಗ ಮೇಳ’(ಮೆಗಾ ಜಾಬ್ ಫೈರ್)ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವಕ-ಯುವತಿಯರು ಉದ್ಯೋಗ ಗಿಟ್ಟಿಸಿಕೊಳ್ಳಬೆಕಾದರೆ ಅವರಲ್ಲಿ ಶಿಸ್ತು, ಕೆಲಸದ ಬದ್ಧತೆ, ಕಠಿಣ ಪರಿಶ್ರಮ, ಉದ್ಯೋಗದ ಮೇಲೆ ನಿಷ್ಠ ಮತ್ತು ಪ್ರಾಮಾಣಿಕತೆ ಅತೀ ಅವಶ್ಯಕವಾಗಿದೆ. ಅಂತಹ ಗುಣಗಳನ್ನು ಬೆಳೆಸಿಕೊಂಡಾಗ ಭವಿಷ್ಯದಲ್ಲಿ ಉತ್ತಮ ಅವಕಾಶಗಳು ಒದಗಿ ಬರುತ್ತವೆ ಎಂದು ಸಲೀಂ ಅಹ್ಮದ್ ಕಿವಿ ಮಾತು ಹೇಳಿದರು.
ಎಐಕೆಎಂಸಿಸಿ ಸಂಸ್ಥೆಯು ಉದ್ಯೋಗ ಮೇಳ, ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ನಿರುದ್ಯೋಗಿ ಯುವಕ, ಯುವತಿಯರು ಇಂದು ಉದ್ಘಾಟಿಸಿರುವ ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಈ ಉದ್ಯೋಗ ಮೇಳದಲ್ಲಿ ಸುಮಾರು 100ಕ್ಕಿಂತ ಹೆಚ್ಚು ಕಂಪನಿಗಳು ಪಾಲ್ಗೊಂಡಿದ್ದು, ಒಟ್ಟು 5 ಸಾವಿರಕ್ಕಿಂತ ಹೆಚ್ಚು ಉದ್ಯೋಗ ಆಕಾಂಕ್ಷಿಗಳು ತಮ್ಮ ಹೆಸರು ನೋಂದಣಿ ಮಾಡಿಸಿದ್ದಾರೆ ಎಂದು ಸಲೀಂ ಅಹ್ಮದ್ ಹೇಳಿದರು.
ಈ ಸಂದರ್ಭದಲ್ಲಿ ಎಐಕೆಎಂಸಿಸಿ ಬೆಂಗಳೂರು ಸೆಂಟ್ರಲ್ ಅಧ್ಯಕ್ಷ ಟಿ.ಉಸ್ಮಾನ್, ಪ್ರಧಾನ ಕಾರ್ಯದರ್ಶಿ ಎಂ.ಕೆ. ನೌಶದ್, ಮುಖಂಡರಾದ ವಿ.ಕೆ.ನಾಸಿರ್ ಹಾಜಿ, ಮುನೀರ್ ಹೆಬ್ಬಾಳ್, ಸಿದ್ದೀಕ್ ತಂಙಳ್, ರಹೀಂ, ಅಬ್ದುಲ್ಲಾ ಮತ್ತಿತರರು ಉಪಸ್ಥಿತರಿದ್ದರು.







