ಕರ್ನಾಟಕ ವಿಧಾನ ಪರಿಷತ್ ನೂತನ ಸಭಾಪತಿಯಾಗಿ ಸಲೀಂ ಅಹ್ಮದ್ ಆಯ್ಕೆ

ಬೆಂಗಳೂರು: ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನದ ಎರಡನೇ ದಿನವಾದ ಶುಕ್ರವಾರ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆನಡೆದ ಚುನಾವಣೆಯಲ್ಲಿ ಸಲೀಂ ಅಹ್ಮದ್ ಅವರು ಆಯ್ಕೆಯಾಗಿದ್ದಾರೆ.
ಧ್ವನಿಮತದ ಮೂಲಕ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸಲೀಂ ಅಹ್ಮದ್ ಪರವಾಗಿ 38 ಮತಗಳು ಚಲಾವಣೆಯಾದರೆ, ಪಿ.ಎಚ್.ಪೂಜಾರ್ ಪರವಾಗಿ 30 ಮತಗಳು ಚಲಾವಣೆಯಾದವು.
ಬಸವರಾಜ ಹೊರಟ್ಟಿ ಅವರ ರಾಜೀನಾಮೆಯಿಂದ ತೆರವಾಗಿರುವ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಸಲೀಂ ಅಹ್ಮದ್ ಹಾಗೂ ಮೈತ್ರಿಕೂಟದಿಂದ ಬಿಜೆಪಿಯ ಪಿ.ಎಚ್.ಪೂಜಾರ್ ಕಣದಲ್ಲಿದ್ದರು. ವಿಧಾನ ಪರಿಷತ್ ನಲ್ಲಿ ಒಟ್ಟು 75 ಸ್ಥಾನಗಳ ಪೈಕಿ ಕಾಂಗ್ರೆಸ್ 38, ಬಿಜೆಪಿ 25, ಜೆಡಿಎಸ್ 6, ಪಕ್ಷೇತರ-1 ಸ್ಥಾನಗಳಿವೆ. ಐದು ಸದಸ್ಯ ಸ್ಥಾನಗಳು ಖಾಲಿಯಿವೆ.
ಸಭಾಪತಿ ಸ್ಥಾನಕ್ಕೆ ಏಳು ಪ್ರಸ್ತಾವಗಳು ಬಂದಿದ್ದವು. ಈ ಪೈಕಿ ಐದು ಪ್ರಸ್ತಾವಗಳು ಸಲೀಂ ಅಹ್ಮದ್ ಪರ ಬಂದಿದ್ದವು. ಈ ಹಿನ್ನೆಲೆಯಲ್ಲಿ ಹಂಗಾಮಿ ಸಭಾಪತಿ ಪುಟ್ಟಣ್ಣ ಅವರು ಪ್ರಸ್ತಾವವನ್ನು ಮತಕ್ಕೆ ಹಾಕಿದರು. ಧ್ವನಿಮತದ ಮೂಲಕ ನಡೆದ ಚುನಾವಣೆಯಲ್ಲಿ ಸಲೀಂ ಅಹ್ಮದ್ ಬಹುಮತ ಪಡೆದು ಸಭಾಪತಿಯಾಗಿ ಆಯ್ಕೆಯಾದರು.
ಸಲೀಂ ಅಹ್ಮದ್:
ಕರ್ನಾಟಕ ವಿಧಾನ ಪರಿಷತ್ತಿನ ಸರಕಾರಿ ಮುಖ್ಯ ಸಚೇತಕರಾಗಿರುವ ಸಲೀಂ ಅಹ್ಮದ್ ಅವರು ನಾಲ್ಕು ದಶಕಗಳಿಗೂ ಅಧಿಕ ಅವಧಿಯಿಂದ ಸಾರ್ವಜನಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಲೀಂ ಅಹ್ಮದ್ ಅವರ ತಂದೆ ಅಝೀಝ್ ಅಹ್ಮದ್. ಸಲೀಂ ಅವರು 01-01-1964ರಂದು ಜನಿಸಿದ್ದು, ಎಂ.ಎ ಪದವಿ ಪಡೆದಿದ್ದಾರೆ.
ಕರ್ನಾಟಕದಾದ್ಯಂತ ಯುವ ಸಮಾವೇಶಗಳು, ತರಬೇತಿ ಶಿಬಿರಗಳು ಹಾಗೂ ರ್ಯಾಲಿಗಳನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಕಾಂಗ್ರೆಸ್ ಪಕ್ಷದ ಸಮರ್ಪಿತ ಕಾರ್ಯಕರ್ತರಾಗಿ ತಮ್ಮ ರಾಜಕೀಯ ಪಯಣ ಆರಂಭಿಸಿದರು.
1982ರಿಂದ 1986ರವರೆಗೆ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು. 1983-1984ರಲ್ಲಿ ಕಾಲೇಜು NSUI ಘಟಕದ ಅಧ್ಯಕ್ಷ ಹಾಗೂ NSUI ಬ್ಲಾಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 1983ರಲ್ಲಿ ಬೆಂಗಳೂರು ನಗರ NSUI ಉಪಾಧ್ಯಕ್ಷರಾಗಿದ್ದ ಅವರು, 1983ರಿಂದ 1987ರವರೆಗೆ ಕರ್ನಾಟಕ ರಾಜ್ಯ NSUI ಉಪಾಧ್ಯಕ್ಷರಾಗಿದ್ದರು.
1987ರಿಂದ 1993ರವರೆಗೆ ಕರ್ನಾಟಕ ರಾಜ್ಯ NSUI ಅಧ್ಯಕ್ಷರಾಗಿದ್ದ ಸಲೀಂ ಅಹ್ಮದ್, 1993ರಿಂದ 1997ರವರೆಗೆ NSUI ರಾಷ್ಟ್ರೀಯ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದರು. 1997-1998ರಲ್ಲಿ ಭಾರತೀಯ ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. 2002ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಸದಸ್ಯರಾದರು.
2018ರಿಂದ 2020ರವರೆಗೆ AICC ಕಾರ್ಯದರ್ಶಿಯಾಗಿ ತೆಲಂಗಾಣ ರಾಜ್ಯದ ಉಸ್ತುವಾರಿ ವಹಿಸಿದ್ದರು. 2020ರಿಂದ 2024ರವರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ಕಾರ್ಯಾಧ್ಯಕ್ಷರಾಗಿದ್ದರು.
1996ರಿಂದ 2002ರವರೆಗೆ ವಿಧಾನಸಭೆಯಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ಮೊದಲ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿ, ವಿವಿಧ ಸಮಿತಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದರು. 2000ರಿಂದ 2007ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಸರಕಾರದ ಮುಖ್ಯ ಸಚೇತಕರಾಗಿ ಕಾರ್ಯನಿರ್ವಹಿಸಿದರು.
2002ರಿಂದ 2008ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಎರಡನೇ ಅವಧಿಗೆ ಮರು ಆಯ್ಕೆಯಾದರು. 2017-2018ರಲ್ಲಿ ರಾಜ್ಯ ಸರಕಾರದಿಂದ ಭಾರತ ಸರಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದರು.
2022ರಲ್ಲಿ ಹುಬ್ಬಳ್ಳಿ-ಧಾರವಾಡ, ಹಾವೇರಿ ಹಾಗೂ ಗದಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾದರು. 2023ರಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸರಕಾರದ ಮುಖ್ಯ ಸಚೇತಕರಾಗಿ ನೇಮಕಗೊಂಡರು.
ರಾಷ್ಟ್ರೀಯ ಜವಾಬ್ದಾರಿ :
2012ರಿಂದ 2014ರವರೆಗೆ ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ನೆಹರು ಯುವ ಕೇಂದ್ರ ಸಂಘಟನೆಯ (NYKS) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
1984ರಲ್ಲಿ ಸೋವಿಯತ್ ಒಕ್ಕೂಟದ ಮಾಸ್ಕೋದಲ್ಲಿ ನಡೆದ ಅಂತರರಾಷ್ಟ್ರೀಯ ಯುವ ಸಮ್ಮೇಳನಕ್ಕೆ ಭಾರತೀಯ ಪ್ರತಿನಿಧಿಯಾಗಿ ಭೇಟಿ ನೀಡಿದರು. 1989ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ಅಂತರರಾಷ್ಟ್ರೀಯ ಯುವ ಸಮ್ಮೇಳನದಲ್ಲಿ ಭಾರತೀಯ ಪ್ರತಿನಿಧಿಯಾಗಿ ಭಾಗವಹಿಸಿದರು.
2001ರಲ್ಲಿ American Council of Young Political Leaders (ACYPL) ಆಯೋಜಿಸಿದ್ದ ರಾಜಕೀಯ ಅಧ್ಯಯನ ನಿಯೋಗದಲ್ಲಿ ಭಾರತೀಯ ಪ್ರತಿನಿಧಿಯಾಗಿ ಅಮೆರಿಕಕ್ಕೆ ಭೇಟಿ ನೀಡಿದರು.
ವಿದ್ಯಾರ್ಥಿ ಚಳವಳಿಯಿಂದ ಆರಂಭಿಸಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ರಾಷ್ಟ್ರೀಯ ಸಂಘಟನೆಯವರೆಗೆ ವಿವಿಧ ನಾಯಕತ್ವದ ಹುದ್ದೆಗಳನ್ನು ಸಲೀಂ ಅಹ್ಮದ್ ನಿರ್ವಹಿಸಿದ್ದಾರೆ. ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಸರ್ಕಾರದ ಮುಖ್ಯ ಸಚೇತಕರಾಗಿ ಎರಡು ಬಾರಿ ಸೇವೆ ಸಲ್ಲಿಸಿರುವ ಅವರು, ವಿಧಾನ ಪರಿಷತ್ತಿನ ಸದಸ್ಯರಾಗಿ ಎರಡು ಅವಧಿ ಸೇವೆ ಸಲ್ಲಿಸಿ, 2022ರಲ್ಲಿ ಮತ್ತೆ ಚುನಾಯಿತರಾಗಿ ಮೂರನೇ ಬಾರಿ ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದಾರೆ.






