ಸ್ಯಾಂಡಲ್‌ವುಡ್ ಹಿರಿಯ ನಟಿ ಬಿ. ಸರೋಜಾ ದೇವಿ ನಿಧನ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ. ಸರೋಜಾ ದೇವಿ ಅವರು ಇಂದು (ಜುಲೈ 14) ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.
ಕಳೆದ ಕೆಲವು ವರ್ಷಗಳಿಂದ ಸರೋಜಾ ದೇವಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಆರೂವರೆ ದಶಕಗಳ ಕಾಲ ಅವರು ಚಿತ್ರರಂಗದಲ್ಲಿ ಇದ್ದರು.
2019ರಲ್ಲಿ ಬಿಡುಗಡೆಯಾದ ಪುನೀತ್ ರಾಜ್‍ಕುಮಾರ್ ನಟನೆಯ 'ನಟಸಾರ್ವಭೌಮ' ಚಿತ್ರದಲ್ಲಿ ಅವರು ಕೊನೆಯದಾಗಿ ನಟಿಸಿದ್ದರು.
ಸರೋಜಾ ಅವರು 1967ರಲ್ಲಿ ಹರ್ಷ ಅವರನ್ನು ವಿವಾಹ ಆದರು. 1986ರಲ್ಲಿ ಪತಿ ನಿಧನ ಹೊಂದಿದರು. ಈಗ ಪತಿ ಹರ್ಷ ಸಮಾಧಿ ಪಕ್ಕದಲ್ಲೇ ಸರೋಜಾ ಅವರ ಅಂತ್ಯಕ್ರಿಯೆ ನಡೆಯಲಿದೆ. ಕೊಡಿಗೆಹಳ್ಳಿಯ ತೋಟದಲ್ಲಿ ಒಕ್ಕಲಿಗೆ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.
1938ರ ಜನವರಿ 7ರಂದು ಪೊಲೀಸ್ ಅಧಿಕಾರಿಯಾಗಿದ್ದ ಬೈರಪ್ಪ, ರುದ್ರಮ್ಮಾ ದಂಪತಿಯ ಪುತ್ರಿಯಾಗಿ ಸರೋಜಾ ದೇವಿ ಬೆಂಗಳೂರಿನಲ್ಲಿ ಜನಿಸಿದರು. ಡ್ಯಾನ್ಸ್ ಕಲಿಯುವಂತೆ ಪ್ರೋತ್ಸಾಹಿಸಿದ್ದ ಭೈರಪ್ಪ ಅವರ ಬೆಂಬಲದಿಂದಲೇ ಸರೋಜಾ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು.
ಮೃತರು ಇಬ್ಬರು ಮಕ್ಕಳ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಚಂದನವನದ ಶ್ರೇಷ್ಠ ನಟಿ:
ಕನ್ನಡ ಚಲನಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಮಹಾನ್ ನಟಿ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿರುವ ಬಿ.ಸರೋಜಾದೇವಿ ದಕ್ಷಿಣ ಭಾರತದ ಧೀಮಂತ ಅಭಿನೇತ್ರಿ. ಸುಮಾರು 6 ದಶಕಗಳ ಕಾಲ ಚಿತ್ರರಂಗದ ಸೇವೆ ಮಾಡಿರುವ ಇವರು 5 ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಇನ್ನೂ, 1969ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು 1992ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಮತ್ತು ತಮಿಳುನಾಡಿನಿಂದ ಕಲೈಮಾಮಣಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಸರೋಜಾದೇವಿ ಅವರು 1955ರಿಂದ 1984ರವರೆಗೆ ಸತತವಾಗಿ 161 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಮಹಾಕವಿ ಕಾಳಿದಾಸ, ಕಿತ್ತೂರು ಚೆನ್ನಮ್ಮ, ಅಣ್ಣಾ ತಮ್ಮ, ಭಕ್ತ ಕನಕದಾಸ, ಬಾಳೇ ಬಂಗಾರ, ನಾಗಕನ್ಯ ಸೇರಿದಂತೆ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು. ನಾಡೋಡಿ ಮನ್ನನ್, ಕರ್ಪೂರ ಕರಸಿ, ಪಾಂಡುರಂಗ ಮಹಾತ್ವಂ, ತಿರುಮಣಂ ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದರು.
ಸರೋಜಾದೇವಿ ಅವರು ಕನ್ನಡದಲ್ಲಿ ಕಥಾಸಾಗರ, ಬಬ್ರುವಾಹನ, ಭಾಗ್ಯವಂತರು, ಆಷಾಡಭೂತಿ, ಶ್ರೀರಾಮಪೂಜಾ, ರತ್ನಗಿರಿ ರಹಸ್ಯ, ಕೋಕಿಲವಾಣಿ, ಸ್ಕೂಲ್ ಮಾಸ್ಟರ್, ಪಂಚರತ್ನ, ಲಕ್ಷ್ಮೀಸರಸ್ವತಿ, ಚಿಂತಾಮಣಿ, ಭೂಕೈಲಾಸ, ಅಣ್ಣತಂಗಿ, ಜಗಜ್ಯೋತಿ ಬಸವೇಶ್ವರ, ದೇವಸುಂದರಿ, ವಿಜಯನಗರದ ವೀರಪುತ್ರ, ಮಲ್ಲಮ್ಮನ ಪವಾಡ, ಶ್ರೀಕೃಷ್ಣರುಕ್ಕಿಣಿ ಸತ್ಯಭಾಮ, ಪೂರ್ಣಿಮಾ, ಗೃಹಿಣಿ, ಪಾಪಪುಣ್ಯ, ಸಹಧರ್ಮಿಣಿ, ಶ್ರೀನಿವಾಸಕಲ್ಯಾಣ, ಚಾಮುಂಡೇಶ್ವರಿ ಮಹಿಮೆ, ಚಿರಂಜೀವಿ, ಶನಿಪ್ರಭಾವ, ಹಿಂದಿಯ ಆಶಾ, ಮೆಹಂದಿ ಲಗ ಕೆ ರಖನಾ, ಮಲಯಾಳಂನ ಮುತ್ತು ಮಿಂತ್ರೋ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಸರೋಜಾದೇವಿ ಅವರು ಡಾ.ರಾಜ್‍ಕುಮಾರ್, ತಮಿಳಿನಲ್ಲಿ ಜೆಮಿನಿ ಗಣೇಶನ್, ಶಿವಾಜಿ ಗಣೇಶನ್ ಮತ್ತು ಎಂ.ಜಿ.ರಾಮಚಂದ್ರನ್ ಅವರೊಂದಿಗೆ ಅನೇಕ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದರು. ಅವರು ಹಿಂದಿಯಲ್ಲಿ ದಿಲೀಪ್ ಕುಮಾರ್, ರಾಜೇಂದ್ರ ಕುಮಾರ್, ಶಮ್ಮಿ ಕಪೂರ್, ಮತ್ತು ಸುನೀಲ್ ದತ್ ಅವರೊಂದಿಗೆ ನಟಿಸಿದ್ದಾರೆ.







