ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಡಿ.ಕೆ.ಶಿವಕುಮಾರ್ ಬಳಿಯೆ ಕೇಳಬೇಕು : ಸತೀಶ್ ಜಾರಕಿಹೊಳಿ

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರವಾಗಿ ಡಿ.ಕೆ.ಶಿವಕುಮಾರ್ ಅವರ ಬಳಿಯೆ ಕೇಳಬೇಕು. ಹೈಕಮಾಂಡ್ ಹೇಳಿದರೆ ಅವರು ಆ ಸ್ಥಾನದಲ್ಲಿ ಮುಂದುವರೆಯುತ್ತಾರೆ, ಇಲ್ಲದಿದ್ದರೆ ಇಲ್ಲ. ಈ ವಿಚಾರಕ್ಕೂ ನಮಗೂ ಸಂಬಂಧವಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿ ಎಂಟು ವರ್ಷ ಕಾರ್ಯನಿರ್ವಹಿಸಿದ್ದಾರೆ. ಯಾರಿಗೂ ಗೊತ್ತು ಶಿವಕುಮಾರ್ ಅವರು ಎಂಟು ವರ್ಷ ಒಂದು ದಿನದವರೆಗೆ ಅಧ್ಯಕ್ಷರಾಗಿರಬಹುದು ಎಂದು ಹೇಳಿದರು.
ನವೆಂಬರ್ ಕ್ರಾಂತಿ ಬಗ್ಗೆ ನಮ್ಮ ಪಕ್ಷದ ಕೆಲವು ನಾಯಕರು, ಮುಖಂಡರು ಹೇಳಿಕೆಗಳನ್ನು ಕೊಡುತ್ತಿದ್ದರು. ನಾಳೆ ನ.21ನೆ ತಾರೀಖು ಆಗಲಿದೆ. ಆದರೆ, ಯಾವ ನವೆಂಬರ್ ಕ್ರಾಂತಿಯೂ ನಮಗೆ ಕಾಣಿಸುತ್ತಿಲ್ಲ ಎಂದು ಸತೀಶ್ ಜಾರಕಿಹೊಳಿ ನುಡಿದರು.
ರಾಜ್ಯದಲ್ಲಿ ನಾಯಕತ್ವದ ಕುರಿತು ಈಗಾಗಲೆ ಹಲವು ಬಾರಿ ಮಾತನಾಡಿದ್ದೇನೆ. ಪುನಃ ಅದೇ ವಿಚಾರ ಪ್ರಸ್ತಾವಿಸಲು ನನಗೆ ಇಷ್ಟ ಇಲ್ಲ. ನಾಯಕತ್ವದ ವಿಚಾರದಲ್ಲಿ ಯಾರೋ ನೀಡುವ ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸುವುದು ಸೂಕ್ತವಲ್ಲ. ಇಂದಿಗೆ ಸರಕಾರ ಎರಡೂವರೆ ವರ್ಷ ಪೂರ್ಣಗೊಳಿಸಿದೆ. ಈ ಅವಧಿಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದ್ದೇವೆ. ಮುಂದೆಯೂ ಉತ್ತಮ ಆಡಳಿತ ನೀಡುತ್ತೇವೆ ಎಂದು ಅವರು ಹೇಳಿದರು.







