ಡಾ.ಅಂಬೇಡ್ಕರ್ ಸರ್ವ ಕಾಲಕ್ಕೂ ಪ್ರಸ್ತುತ : ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು : ಇತಿಹಾಸವನ್ನು ತಿರುಚುವ ಪ್ರಯತ್ನಗಳು ದೇಶದಲ್ಲಿ ಹೆಚ್ಚಾಗಿದೆ. ಡಾ.ಅಂಬೇಡ್ಕರ್, ಗಾಂಧಿಯವರ ಹೆಸರಿನಲ್ಲಿರುವ ಯೋಜನೆಗಳನ್ನು ಬದಲಾಯಿಸುವ ಮೂಲಕ ಅವರ ಸಾಧನೆಗಳನ್ನು ಇತಿಹಾಸದ ಪುಟದಿಂದ ಅಳಿಸಿ ಹಾಕಲಾಗುತ್ತಿದೆ. ಈ ಭೂಮಿ ಇರುವವರೆಗೂ ಅಂಬೇಡ್ಕರ್ ಹೆಸರು ಉಳಿದಿರುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬುಧವಾರ ನಗರದ ಜ್ಞಾನಭಾರತಿ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಿದ್ದ ಐತಿಹಾಸಿಕ ಭೀಮಾ ಕೋರೆಗಾಂವ್ ಯುದ್ದದ ವಿಜಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ಸಂವಿಧಾನ ಇರದಿದ್ದರೆ ಈ ಸಮ ಸಮಾಜ ನಿರ್ಮಾಣವಾಗುತ್ತಿರಲಿಲ್ಲ. ಅನೇಕರು ಸಂವಿಧಾನ ಕೇವಲ ದಲಿತರಿಗೆ ಅಥವಾ ಒಂದು ವರ್ಗಕ್ಕೆ ಸೀಮಿತ ಎಂದು ಭಾವಿಸಿದ್ದಾರೆ. ಸಂವಿಧಾನದಿಂದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮಾನತೆ ದೊರೆತಿದೆ ಎಂದರು.
ಸಂವಿಧಾನ ಎಲ್ಲರಿಗೂ ಅನ್ವಯ. ಭೀಮಾ ಕೋರೆಗಾಂವ್ ರೀತಿಯ ಕಾರ್ಯಕ್ರಮ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿದೆ. ಎಲ್ಲ ಸಮುದಾಯಗಳು ಈ ರೀತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಇತಿಹಾಸವನ್ನು ನೆನೆಯಬೇಕು. ಜನರು ಧಾರವಾಹಿ, ಸಿನಿಮಾಗಳಲ್ಲಿ ಬರುವ ಪಾತ್ರ, ಸನ್ನೀವೇಶಗಳಿಗೆ ಕಣ್ಣೀರಿಡುತ್ತಾರೆ. ಆದರೆ ದಲಿತರ ಮೇಲೆ ನಡೆಯುವ ಅಸ್ಪೃಶ್ಯ, ಅಸಮಾನತೆ ಘಟನೆಗಳಿಗೆ ಕಣ್ಣೀರಿಡುವುದಿಲ್ಲ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಗೃತಿ, ಸಂವಿಧಾನದ ಅರಿವನ್ನು ಎಲ್ಲರಲ್ಲೂ ಮೂಡಿಸಬೇಕು ಎಂದು ಸತೀಶ್ ಜಾರಕಿಹೊಳಿ ಕರೆ ನೀಡಿದರು.
ಜಾನಪದ ಅಕಾಡೆಮಿ ಅಧ್ಯಕ್ಷ ಡಾ.ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಈ ದೇಶದಲ್ಲಿ ಹೆಣ್ಣು, ಹೊನ್ನು, ಮಣ್ಣು, ಅಧಿಕಾರಕ್ಕಾಗಿ ಯುದ್ದಗಳು ನಡೆದಿದೆ. ಆದರೆ ಸ್ವಾಭಿಮಾನಕ್ಕಾಗಿ ನಡೆದ ಯುದ್ದ ಭೀಮಾ ಕೋರೆಗಾಂವ್. ಭೀಮಾ ಕೋರೆಗಾಂವ್ ಎಲ್ಲ ಯುದ್ದಗಳ ಸಾಲಿಗೆ ಸೇರುವುದಿಲ್ಲ. ಮರಾಠರ ಸೈನ್ಯದಲ್ಲಿ ದಲಿತರಿಗೆ ಅವಕಾಶ ಸಿಗದಿದ್ದಾಗ, ಅಸ್ಪೃಶ್ಯತೆಯಿಂದ ಅವಮಾನವಾದಗ ಅಸಮಾನತೆಯ ವಿರುದ್ದ ನಡೆದ ಯುದ್ದವೇ ಭೀಮಾ ಕೋರೆಗಾಂವ್. ಮಹರ್ ಸೈನಿಕರು 28 ಸಾವಿರ ಪೇಶ್ವೇ ಸೈನಿಕರನ್ನು ಬಗ್ಗು ಬಡಿದು ಯುದ್ದದಲ್ಲಿ ಗೆದ್ದು ಬೀಗಿದರು ಎಂದು ಹೇಳಿದರು.
ಬಾಬಾಸಾಹೇಬರು ಭೀಮಾ ಕೋರೆಗಾಂವ್ ಯುದ್ದದ ಬಗ್ಗೆ ತಿಳಿಸದಿದ್ದರೆ, ಕೋರೆಗಾಂವ್ ಇತಿಹಾಸದ ಪುಟದಿಂದ ಮರೆಯಾಗಿ ಕಳೆದು ಹೋಗುತ್ತಿತ್ತು. ನಮ್ಮೊಳಗಿನ ಕಥೆ, ವ್ಯಥೆ ಕೋರೆಗಾಂವ್ ಇತಿಹಾಸದಿಂದ ನೆನೆಯಬೇಕು. ಮನುಷ್ಯ ಮನುಷ್ಯನನ್ನು ಭೇದ-ಭಾವವಿಲ್ಲದೆ ಕಾಣಬೇಕು. ಎಲ್ಲ ಅಸ್ಪೃಶ್ಯತೆಗಳನ್ನು ದೂರಗೊಳಿಸಿ, ಸಮಾನತೆ ಸಂದೇಶ ಸಾರಿದವರು ಅಂಬೇಡ್ಕರ್. ಬುದ್ದ, ಬಸವ, ಅಂಬೇಡ್ಕರ್ ಇರದಿದ್ದರೆ ಭಾರತ ಬೆಳಕಿಲ್ಲದೆ, ಕತ್ತಲಲ್ಲಿ ಕಳೆದುಹೋಗುತ್ತಿತ್ತು. ಭೀಮಾ ಕೋರೆಗಾಂವ್ ಯುದ್ದ ಈಗಲೂ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರ ಆದರ್ಶವಾಗಬೇಕು. ಸಂವಿಧಾನವನ್ನು ಉಳಿಸಿಕೊಳ್ಳದಿದ್ದರೆ ಭವಿಷ್ಯ ಕಠಿಣವಾಗುತ್ತದೆ ಎಂದು ಗೊಲ್ಲಹಳ್ಳಿ ಶಿವಪ್ರಸಾದ್ ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಬೆಂವಿವಿ ಕುಲಪತಿ ಡಾ.ಜಯಕರ ಎಸ್.ಎಂ, ಕುಲಸಚಿವ(ಮೌಲ್ಯಮಾಪನ) ಪ್ರೊ.ಸಿ.ಎಸ್. ಕರಿಗಾರ್, ಪ್ರಧ್ಯಾಪಕರಾದ ಪ್ರೊ.ಜಿ.ಕೃಷ್ಣಮೂರ್ತಿ, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿರ್ದೇಶಕ ಪ್ರೊ.ಪಿ.ಸಿ. ನಾಗೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.







