ಸತೀಶ್ ಜಾರಕಿಹೊಳಿ ಮೇಲಿನ ಈಡಿ ದಾಳಿಗೆ ಖಂಡನೆ: ರಾಜ್ಯವ್ಯಾಪಿ ಹೋರಾಟಕ್ಕೆ ಸಮಾನ ಮನಸ್ಕರ ನಿರ್ಧಾರ

ಬೆಂಗಳೂರು : ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲಿನ ಜಾರಿ ನಿರ್ದೇಶನಾಲಯದ (ಈಡಿ) ಕ್ರಮ ಖಂಡನೀಯ. ಕೇಂದ್ರ ಸರಕಾರ ಸ್ವಾಯತ್ತ ಕೇಂದ್ರ ತನಿಖಾ ಸಂಸ್ಥೆಗಳನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿರುವುದರ ವಿರುದ್ಧ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ರೂಪಿಸಲು ಸಮಾನ ಮನಸ್ಕರರು ನಿರ್ಧರಿಸಿದ್ದಾರೆ.
ಬುಧವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲೆ ರಾಜಕೀಯ ದ್ವೇಷದ ಈಡಿ ದಾಳಿ ವಿರೋಧಿಸಿ ಸಮಾನ ಮನಸ್ಕರರು ಹಮ್ಮಿಕೊಂಡಿದ್ದ ಖಂಡನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ವಕೀಲ ಅನಂತ ನಾಯ್ಕ್, ಕೇಂದ್ರ ಸರಕಾರವು ಈಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯಂತಹ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಈ ಹಿಂದೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವ ಝಮೀರ್ ಅಹ್ಮದ್, ಹ್ಯಾರಿಸ್, ನಾಗೇಂದ್ರ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರನ್ನು ಗುರಿಯಾಗಿಸಿಕೊಂಡು ಈ ಸಂಸ್ಥೆಗಳನ್ನು ಬಳಸಿಕೊಳ್ಳಲಾಗಿದೆ. ತನಿಖಾ ಸಂಸ್ಥೆಗಳನ್ನು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಬಿಡಬೇಕು. ರಾಜಕೀಯ ದುರುದ್ದೇಶದಿಂದ ಇತರರಿಗೆ ತೊಂದರೆ ನೀಡುವ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಮುಖಂಡರಾದ ಡಾ.ಭೀಮಣ್ಣ ಮೇಟಿ, ಹನುಮೇಗೌಡ, ಡಾ.ರಾಜನಾಯಕ್, ತೋಳಿ ಭರಮಣ್ಣ ಸೇರಿದಂತೆ ಹಲವರು ಇದ್ದರು.






