ಏಮ್ಸ್ ಆಸ್ಪತ್ರೆಯಲ್ಲಿ ಸತೀಶ್ ಸೈಲ್ ಆರೋಗ್ಯ ತಪಾಸಣೆ; ಚರ್ಚಿಸಿ ದಿನ-ಸಮಯ ನಿರ್ಧರಿಸುವಂತೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ಶಾಸಕ ಸತೀಶ್ ಸೈಲ್ ಅವರನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ಯಾವ ದಿನ ಹಾಗೂ ಯಾವ ಸಮಯಕ್ಕೆ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು ಎಂಬ ಬಗ್ಗೆ ಸೈಲ್ ಹಾಗೂ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಚರ್ಚಿಸಿ ನಿರ್ಧರಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.
ಇಡಿ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನೀಡಲಾಗಿದ್ದ ಮಧ್ಯಂತರ ವೈದ್ಯಕೀಯ ಜಾಮೀನು ರದ್ದುಪಡಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಸತೀಶ್ ಸೈಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ ಇಡಿ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ. ಅರವಿಂದ್ ಕಾಮತ್ ಅವರು, ಬೆಂಗಳೂರಿನ ಇಡಿ ಸಹಾಯಕ ನಿರ್ದೇಶಕರಿಗೆ ಏಮ್ಸ್‌ನ ಮೇಲ್ವಿಚಾರಕರು ಪತ್ರ ಬರೆದಿದ್ದು, ಜಠರ ಕರುಳಿನ ತಜ್ಞರು ಡಿಸೆಂಬರ್ 19ರ ಮಧ್ಯಾಹ್ನ 12.30 ಅಥವಾ ಡಿಸೆಂಬರ್ 20ರ ಬೆಳಗ್ಗೆ 8.30ರ ವೇಳೆಗೆ ಏಮ್ಸ್ ನಿಯಂತ್ರಣ ಕೊಠಡಿಗೆ ಸತೀಶ್ ಸೈಲ್ ಕರೆತರುವಂತೆ ಸೂಚಿಸಿದ್ದಾರೆ. ಇದರ ಜತೆಗೆ ಈಗಾಗಲೇ ನಡೆಸಿರುವ ವೈದ್ಯಕೀಯ ತಪಾಸಣೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆಗೆ ತರಲು ತಿಳಿಸಿದ್ದಾರೆ ಎಂದರು.
ಆಗ ಸತೀಶ್ ಸೈಲ್ ಪರ ವಕೀಲರು, ದೆಹಲಿಯಲ್ಲಿ ವಾಯುಗುಣಮಟ್ಟ ಸರಿ ಇಲ್ಲ. ಇದರಿಂದ ವಿಮಾನಗಳ ಹಾರಾಟ ಏರುಪೇರಾಗುತ್ತಿವೆ. ವೈದ್ಯಕೀಯ ತಪಾಸಣೆಗೆ ಒಳಗಾಗಲು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಇದು ನಮಗೆ ಸಂಬಂಧಿಸಿದ್ದಲ್ಲ. ಇಡಿ ಅಧಿಕಾರಿಗಳು ಹಾಗೂ ಸತೀಶ್ ಸೈಲ್ ಒಟ್ಟಾಗಿ ಚರ್ಚಿಸಿ, ವೈದ್ಯರ ಅನುಕೂಲ ನೋಡಿಕೊಂಡು ತೀರ್ಮಾನಿಸಬಹುದು ಎಂದು ಹೇಳಿತು.
ಅಂತಿಮವಾಗಿ, ದೆಹಲಿಯ ಏಮ್ಸ್‌ಗೆ ಯಾವತ್ತು ಮತ್ತು ಯಾವ ಸಮಯಕ್ಕೆ ಹೋಗಬೇಕು ಎಂಬುದನ್ನು ನಿರ್ಧರಿಸಲು ಅರ್ಜಿ ವಿಚಾರಣೆ ಮುಂದೂಡಲಾಗದು. ದಿನಾಂಕದ ಕುರಿತು ಜಾರಿ ನಿರ್ದೇಶನಾಲಯದ ಜತೆ ಕುಳಿತು ಸೈಲ್ ಅವರು ತೀರ್ಮಾನಿಸಬಹುದು ಎಂದು ತಿಳಿಸಿ, ವಿಚಾರಣೆಯನ್ನು 2026ರ ಜನವರಿ 13ಕ್ಕೆ ಮುಂದೂಡಿದ ನ್ಯಾಯಪೀಠ, ಸೈಲ್ ಅವರಿಗೆ ನೀಡಿರುವ ವೈದ್ಯಕೀಯ ಮಧ್ಯಂತರ ಜಾಮೀನನ್ನು ಮುಂದಿನ ವಿಚಾರಣೆವರೆಗೆ ವಿಸ್ತಿರಿಸಿತು.







