ವಿಜ್ಞಾನ, ತಂತ್ರಜ್ಞಾನ ಜನರ ಶ್ರೇಯೋಭಿವೃದ್ಧಿಗೆ ಬಳಕೆಯಾಗಬೇಕು: ಮಾಜಿ ಇಸ್ರೋ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್

ಎ.ಎಸ್. ಕಿರಣ್ ಕುಮಾರ್
ಬೆಂಗಳೂರು: ‘ವಿಜ್ಞಾನ, ತಂತ್ರಜ್ಞಾನ ಜನಸಾಮಾನ್ಯರ ಶ್ರೇಯೋಭಿವೃದ್ಧಿಗೆ ಬಳಕೆಯಾಗಬೇಕು. ಇಲ್ಲವಾದಲ್ಲಿ ತಂತ್ರಜ್ಞಾನ ತನ್ನ ಮಹತ್ವ ಕಳೆದುಕೊಳ್ಳುತ್ತದೆ’ ಎಂದು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಹೇಳಿದ್ದಾರೆ.
ಗುರುವಾರ ಕೆಇಬಿ ಇಂಜಿನಿಯರ್ ಗಳ ಸಂಘದಿಂದ ಕೆ.ಆರ್.ವೃತ್ತದ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಂತ್ರಿಕ ಡೈರಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಇಸ್ರೋ ಚಟುವಟಿಕೆಗಳು ದೇಶದ ಸಾಮಾಜಿಕ, ಆರ್ಥಿಕ ಬೆಳವಣಿಗೆಗೆ ಪೂರಕವಾಗಿವೆ. ಕೃಷಿ, ಶಿಕ್ಷಣ ಸೇರಿದಂತೆ ಎಲ್ಲ ವಲಯಗಳಿಗೂ ಅನುಕೂಲಕರವಾಗಿವೆ ಎಂದು ಪ್ರತಿಪಾದಿಸಿದರು.
‘ಇಸ್ರೋ ಆರು ದಶಕಗಳ ತನ್ನ ಯಾನದಲ್ಲಿ ಮಹತ್ವದ ಸಾಧನೆ ಮಾಡಿದೆ. ಪ್ರತಿ ಬಾರಿ ಉಪಗ್ರಹಗಳು ನಭೋಮಂಡಲಕ್ಕೆ ಚಿಮ್ಮಿದಾಗ ಭೂಮಂಡಲದ ಶ್ರೇಯೋಭಿವೃದ್ಧಿಯೇ ಪ್ರಮುಖ ಉದ್ದೇಶವಾಗಿರುತ್ತದೆ. ಭಾರತದಲ್ಲಿ ಮಾತ್ರ ಬಾಹ್ಯಾಕಾಶ ಕಾರ್ಯಕ್ರಮಗಳು ಮಿಲಿಟರಿಯೇತರ ಉದ್ದೇಶಕ್ಕೆ ಬಳಕೆಯಾಗುತ್ತಿವೆ ಎಂದು ಅವರು ಹೇಳಿದರು.
ಇಂಧನ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತ ಮಾತನಾಡಿ, ‘ಕೋವಿಡ್ ನಂತರ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಇಂಧನ ಬಳಕೆಯಲ್ಲಿ ದಾಖಲೆ ನಿರ್ಮಾಣವಾಗಿದೆ. ಚೀನಾ ಸೇರಿದಂತೆ ಜಗತ್ತಿನ ಇತರೆ ಅಭಿವೃದ್ದಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಭಾರತ ಇಂಧನ ಬಳಕೆಯಲ್ಲಿ ಹಿಂದಿದೆ. ಇಂಧನ ಮಿತವ್ಯಯ ವಲಯದಲ್ಲಿ ವ್ಯಾಪಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೃಷಿ ಪಂಪ್ ಸೆಟ್ಗಳು ಶೇ.40ರಷ್ಟು ವಿದ್ಯುತ್ ಬಳಸುತ್ತಿದ್ದು, ಇದೀಗ ವಿದ್ಯುತ್ ಚಾಲಿತ ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಬಳಕೆ ಹೆಚ್ಚಾಗುತ್ತಿದೆ ಎಂದರು.
ಸಂಘದ ಅಧ್ಯಕ್ಷ ಕೆ.ಶಿವಣ್ಣ ಮಾತನಾಡಿ, ಇಂಧನ ವಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಆದ್ಯತೆ ನೀಡುವ ಜೊತೆಗೆ ನೇಮಕಾತಿ ಘಟಕವನ್ನು ಸ್ಥಾಪಿಸಬೇಕು. ಇಂಜಿನಿಯರ್ ಗಳಿಗೆ ಬಡ್ತಿ ಮತ್ತಿತರೆ ಸೌಲಭ್ಯಗಳನ್ನು ಕಲ್ಪಿಸಬೇಕು. ಇಂಜಿನಿಯರ್ ಗಳ ಮೇಲಿನ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಿ ಪೂರ್ಣಗೊಳಿಸಬೇಕು. ವಿದ್ಯುತ್ ಅಪಘಾತಗಳ ಬಗ್ಗೆ ಲೋಕಾಯುಕ್ತ ಸಂಸ್ಥೆ ಮಧ್ಯಪ್ರವೇಶ ಸರಿಯಲ್ಲ. ಇದನ್ನು ಸರಕಾರ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.







