ಗ್ಯಾರಂಟಿ ಯೋಜನೆಗಳಿಗೆ ಎಸ್ಸಿಎಸ್ಪಿ-ಟಿಎಸ್ಪಿ ಹಣ ಬಳಕೆ ಬೇಡ : ದಲಿತ ಸಂಘಟನೆಗಳ ಒಕ್ಕೂಟ ಆಗ್ರಹ

ಸಾಂದರ್ಭಿಕ ಚಿತ್ರ
ಬೆಂಗಳೂರು : ಪ್ರಸ್ತುತ ಸಾಲಿನ ರಾಜ್ಯ ಸರಕಾರದ ಬಜೆಟ್ನಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್ಸಿಎಸ್ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಗೆ (ಟಿಎಸ್ಪಿ) ಒದಗಿಸಿದ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡದಂತೆ ದಲಿತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ಶನಿವಾರ ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ದಲಿತ ಸಂಘಟನೆಗಳ ಒಕ್ಕೂಟದ ದುಂಡು ಮೇಜಿನ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷ ಎಂ.ವೆಂಕಟಸ್ವಾಮಿ, ಎಸ್ಸಿಎಸ್ಪಿ-ಟಿಎಸ್ಪಿ ಅನುದಾನವನ್ನು ಗ್ಯಾರಂಟಿ ಸೇರಿದಂತೆ ಇತರೆ ಯಾವುದೇ ಯೋಜನೆಗಳಿಗೆ ಬಳಕೆ ಮಾಡಬಾರದು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪರಿಶಿಷ್ಟರ ಹಣ ಆ ಸಮುದಾಯವನ್ನು ಒಳಗೊಳ್ಳದ ಇತರೆ ಯಾವುದೇ ಅನ್ಯ ಯೋಜನೆಗಳಿಗೆ ಬಳಸದಂತೆ ತಿದ್ದುಪಡಿ ತಂದಿರುವುದು ಶ್ಲಾಘನೀಯ. ಆದರೆ, ಗ್ಯಾರಂಟಿ ಯೋಜನೆಯಲ್ಲಿ ಪರಿಶಿಷ್ಟ ಫಲಾನುಭವಿಗಳೂ ಇದ್ದಾರೆ ಎಂಬ ಲೆಕ್ಕಾಚಾರದಲ್ಲಿ ಸುಮಾರು 11 ಸಾವಿರ ಕೋಟಿ ಬಳಸಿಕೊಳ್ಳಲಾಗಿದೆ. ಬಜೆಟ್ನಲ್ಲಿ ಗ್ಯಾರಂಟಿಗೆ ಪ್ರತ್ಯೇಕ ಅನುದಾನ ಮೀಸಲಿಟ್ಟ ಮೇಲೆ ಪರಿಶಿಷ್ಟರ ನಿಧಿ ಬಳಕೆ ಸಲ್ಲದು ಎಂದರು.
ಈ ಸಂದರ್ಭದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವೆಂಕಟರಾಮಣಪ್ಪ, ಬೆಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷ ಗೋಪಾಲ್, ರಾಮಚಂದ್ರರೆಡ್ಡಿ ಸೇರಿದಂತೆ ಪ್ರಮುಖರಿದ್ದರು.







