ವೈದ್ಯಕೀಯ ಕ್ಷೇತ್ರದಲ್ಲಿ ಸ್ವಾವಲಂಬನೆ ಮತ್ತಷ್ಟು ಹೆಚ್ಚಿದೆ : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಬೆಂಗಳೂರು: ವೈದ್ಯಕೀಯ ಸೇವೆಯು ಮಾನವ ಮತ್ತು ದೈವಿಕ ಸೇವೆ. ವೈದ್ಯರನ್ನು ದೇವರ ರೂಪವೆಂದು ಪರಿಗಣಿಸಲಾಗುತ್ತದೆ. ಎಂತಹ ಸ್ಥಿತಿಯಲ್ಲಿಯೂ, ವೈದ್ಯರು ನೈತಿಕ ಜವಾಬ್ದಾರಿ ಅರ್ಥ ಮಾಡಿಕೊಳ್ಳುವುದರ ಜೊತೆಗೆ ಮಾನವ ಮೌಲ್ಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದ್ದಾರೆ.
ಮಂಗಳವಾರ ನಗರದ ನಿಮ್ಹಾನ್ಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಾಚೀನ ಕಾಲದಿಂದಲೂ ವೈದ್ಯಕೀಯ ವಿಜ್ಞಾನದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಸ್ವಾತಂತ್ರ್ಯ ನಂತರ, ದೇಶವು ವೈದ್ಯಕೀಯ ಕ್ಷೇತ್ರ ಸಹಿತ ಎಲ್ಲ ಕ್ಷೇತ್ರಗಳಲ್ಲಿ ಅಭೂತಪೂರ್ವ ಪ್ರಗತಿಯನ್ನು ಸಾಧಿಸಿದೆ. ಇದು ಭಾರತೀಯರ ಕಠಿಣ ಪರಿಶ್ರಮ, ನಾವೀನ್ಯತೆ-ಉದ್ಯಮಶೀಲತೆಯ ಪ್ರತಿಬಿಂಬ ಎಂದು ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರ ವಿಶ್ವ ಆರೋಗ್ಯ ಸಂಸ್ಥೆ ಮಾನದಂಡಗಳ ಪ್ರಕಾರ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಸಕ್ರಿಯ ಪ್ರಯತ್ನಗಳನ್ನು ಮಾಡುತ್ತಿದೆ. ಕೇಂದ್ರವು ದೇಶದ ಜನರಿಗೆ ಆರೋಗ್ಯ ಸೇವೆಗಳನ್ನು ಹೆಚ್ಚಿಸಲು ಅನೇಕ ಯೋಜನೆಗಳನ್ನು ಮಾಡಿದೆ ಮತ್ತು ಜಾರಿಗೆ ತಂದಿದೆ. ದೇಶದ ಹಲವು ರಾಜ್ಯಗಳಲ್ಲಿ ಏಮ್ಸ್ ರೀತಿಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಪ್ರಸ್ತುತ ದಿನಮಾನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆ ಮತ್ತಷ್ಟು ಹೆಚ್ಚಿದೆ ಎಂದರು.
ದೇಶದಲ್ಲಿ ಚಿಕಿತ್ಸೆಯ ಜೊತೆಗೆ, ವೈದ್ಯಕೀಯ ವಿಜ್ಞಾನವು ಹೊಸ ತಂತ್ರಜ್ಞಾನಗಳ ಮೂಲಕ ಹಳೆಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯ ಮಾಡುತ್ತಿದೆ. ದೇಶದಲ್ಲಿ ಒಟ್ಟು 706 ವೈದ್ಯಕೀಯ ಕಾಲೇಜುಗಳಿದ್ದು, ಇದರಲ್ಲಿ ಒಟ್ಟು 1,08,848 ಎಂಬಿಬಿಎಸ್ ಸೀಟುಗಳು ಮತ್ತು 67802 ಪಿಜಿ ಸೀಟುಗಳಿವೆ. ವೈದ್ಯಕೀಯ ಕಾಲೇಜುಗಳ ಸಂಖ್ಯೆಯಲ್ಲಿ ರಾಜ್ಯವು ದೇಶದಲ್ಲಿ ಎರಡನೆ ಸ್ಥಾನದಲ್ಲಿದೆ.
ರಾಜ್ಯದ 68 ವೈದ್ಯಕೀಯ ಕಾಲೇಜುಗಳ ಪೈಕಿ 24 ಸರಕಾರಿ ವೈದ್ಯಕೀಯ ಕಾಲೇಜುಗಳು, 25 ಖಾಸಗಿ ಕಾಲೇಜುಗಳು ಮತ್ತು 7 ಖಾಸಗಿ ವೈದ್ಯಕೀಯ ವಿವಿಗಳು, 12 ಡೀಮ್ಡ್ ವೈದ್ಯಕೀಯ ವಿವಿ ಇದರಲ್ಲಿ ಒಟ್ಟು 11595 ಎಂಬಿಬಿಎಸ್ ಸೀಟುಗಳು ಮತ್ತು 6400 ಕ್ಕೂ ಹೆಚ್ಚು ಪಿಜಿ ಸೀಟುಗಳಿವೆ. ಸ್ಟಾರ್ಟಪ್ ಪರಿಸರ ವ್ಯವಸ್ಥೆಯು ವಿಶ್ವದ ಆಕರ್ಷಣೆಯ ಕೇಂದ್ರವಾಗಿ ಉಳಿದಿದೆ.
ಘಟಿಕೋತ್ಸವದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಜಿ.ಕೆ.ವೆಂಕಟೇಶ್ ಜಿ., ಡಾ.ಪ್ರಕಾಶ್ ಬಿರಾದಾರ್, ಡಾ.ಪಿಂಕಿ ಭಾಟಿಯಾ ಟೋಪಿವಾಲಾ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ ರಾಜ್ಯಪಾಲ ಗೆಹ್ಲೋಟ್ ಶುಭ ಹಾರೈಸಿದರು. ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷ ಡಾ.ಬಿ.ಎನ್ ಗಂಗಾಧರ್, ಆರೋಗ್ಯ ವಿವಿ ಕುಲಪತಿ ಡಾ.ಎಂ.ಕೆ.ರಮೇಶ್ ಸೇರಿ ಹಲವು ಗಣ್ಯರು ಭಾಗವಹಿಸಿದರು.







