ಸ್ವಚ್ಛವಾಹಿನಿ ಚಾಲಕಿಯರ ವೇತನ ನಿರ್ವಹಣೆಗೆ ಪ್ರತ್ಯೇಕ ಅಧಿಕಾರಿ : ಸಚಿವ ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ
ಬೆಂಗಳೂರು : ಗ್ರಾಮ ಪಂಚಾಯತಿಗಳಲ್ಲಿ ಆರಂಭಿಸಿರುವ ‘ಸ್ವಚ್ಛ ವಾಹಿನಿ’ ಗ್ರಾಮೀಣ ನೈರ್ಮಲ್ಯದ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಚಾಲಕಿಯರ ವೇತನ, ಸುಸಜ್ಜಿತ ಸ್ಥಿತಿಯಲ್ಲಿ ವಾಹನಗಳ ನಿರ್ವಹಣೆ, ಇಂಧನ ಮುಂತಾದ ಅವಶ್ಯಕತೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಒಬ್ಬ ಪ್ರತ್ಯೇಕ ಅಧಿಕಾರಿಯನ್ನು ನೇಮಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸೋಮವಾರ ವಿಕಾಸಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಸ್ವಚ್ಛ ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರ ಸಮಸ್ಯೆಗಳು, ಅವರ ಬೇಡಿಕೆಗಳು ಮತ್ತು ಕೈಗೊಳ್ಳಬಹುದಾದ ಪರಿಹಾರ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು.
‘ಸ್ವಚ್ಛ ವಾಹಿನಿ’ ವಾಹನಗಳನ್ನು ಸುಸ್ಥಿತಿಯಲ್ಲಿರಿಸಿಕೊಂಡು ಗ್ರಾಮೀಣ ಪರಿಸರವನ್ನು ಶುಚಿಯಾಗಿರಿಸಿಕೊಳ್ಳಬೇಕೆಂದು ನಿರ್ದೇಶನ ನೀಡಿದ ಪ್ರಿಯಾಂಕ್ ಖರ್ಗೆ, ರಾಜ್ಯದಲ್ಲಿ 3,469 ಮಹಿಳಾ ಚಾಲಕಿಯರು ತ್ಯಾಜ್ಯ ನಿರ್ವಹಣೆಯಲ್ಲಿ ನಿರತರಾಗಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಪಂಚಾಯತ್ ರಾಜ್ ಇಲಾಖೆಯ ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್ ಹಾಗೂ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.





