ಸೆ.13: ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ರಾಜ್ಯ ಪ್ರತಿನಿಧಿ ಸಭೆ

ಬೆಂಗಳೂರು : ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ಕರ್ನಾಟಕದ 2026ರ ರಾಜ್ಯ ಪ್ರತಿನಿಧಿ ಸಭೆಯು ಸೆಪ್ಟೆಂಬರ್ 13, 2026ರಂದು ಬೆಂಗಳೂರಿನ ಪಾಲನ ಭವನದಲ್ಲಿ ನಡೆಯಲಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಮಹಿಳಾ ಪ್ರತಿನಿಧಿಗಳು ಹಾಗೂ ರಾಜ್ಯ ಮಟ್ಟದ ನಾಯಕಿಯರು ಭಾಗವಹಿಸಲಿರುವ ಈ ಪ್ರತಿನಿಧಿ ಸಭೆಯಲ್ಲಿ 2026–29ರ ಅವಧಿಗೆ ನೂತನ ಕರ್ನಾಟಕ ರಾಜ್ಯ ಸಮಿತಿಯ ನಾಯಕಿಯರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ರಾಷ್ಟ್ರೀಯ ಸಮಿತಿಯ ನಾಯಕಿಯರು ಚುನಾವಣಾ ಪ್ರಕ್ರಿಯೆಯನ್ನು ನಡೆಸಲಿದ್ದಾರೆ.
ಸಭೆಯಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್‌ನ ರಾಷ್ಟ್ರೀಯ ನಾಯಕಿಯರಾದ ಫಾಯೆಝಾ ಶಫೀಕ್ ಹಾಗೂ Adv. H. ಖಾಲಿದಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ರಾಜ್ಯ ಪ್ರತಿನಿಧಿ ಸಭೆಯಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕರ್ನಾಟಕದಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ ನಡೆಸಿದ ವಿವಿಧ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಚಟುವಟಿಕೆಗಳ ವಿಸ್ತೃತ ವರದಿಯನ್ನು ಮಂಡಿಸಲಾಗುವುದು.
ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿದು, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳ ಕುರಿತು ಪ್ರತಿನಿಧಿ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಲಿದೆ.
ವಿಶೇಷವಾಗಿ, ಸ್ಥಳೀಯ ಸಂಸ್ಥೆಗಳಿಂದ ವಿಧಾನಸಭೆ ಮತ್ತು ಸಂಸತ್ತಿನವರೆಗೆ ಮಹಿಳೆಯರಿಗೆ ಸಮಾನ ರಾಜಕೀಯ ಪ್ರಾತಿನಿಧ್ಯ ಹಾಗೂ ನಿರ್ಣಯ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವ ಅಗತ್ಯ ಕುರಿತು ಚರ್ಚಿಸಲಾಗುವುದು.
ಮಹಿಳೆಯರ ಹಕ್ಕು, ಗೌರವ, ಸುರಕ್ಷತೆ, ಸ್ವಾವಲಂಬನೆ ಮತ್ತು ನಾಯಕತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳು ಹಾಗೂ ಕಾರ್ಯತಂತ್ರಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.






