ಏಳು ಮಂದಿಯ ಸರಣಿ ಹತ್ಯೆ ಪ್ರಕರಣ; ‘ಕಾರಿನ ಮೇಲೆ ಪತ್ರಕರ್ತರ ಪ್ರವಾಸ’ ಎಂದು ಬರೆದ ಬ್ಯಾನರ್ ಹಾಕಿಕೊಂಡಿದ್ದ ಆರೋಪಿ

ಇಂದುಶೇಖರ್(52)
ಬೆಂಗಳೂರು : ನಗರದಲ್ಲಿ ನಡೆದ ಏಳು ಮಂದಿಯ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿದಂತೆ ಆರೋಪಿ ಇಂದುಶೇಖರ್ ತನ್ನ ಕಾರಿನ ಮೇಲೆ ‘ದಸರಾ ಮತ್ತು ದೀಪಾವಳಿ ಸಂದರ್ಭದಲ್ಲಿ ಪತ್ರಕರ್ತರ ಪ್ರವಾಸ' ಎಂದು ಬರೆದ ಬ್ಯಾನರ್ ಹಾಕಿಕೊಂಡಿದ್ದನು. ಇದನ್ನು ಕಾರಿನ ನಂಬರ್ ಪ್ಲೇಟ್ ಕಾಣದಂತೆ ಮುಚ್ಚುವ ರೀತಿಯಲ್ಲಿ ಅಳವಡಿಸಿದ್ದನು ಎಂದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ.
ಆರೋಪಿ ಪತ್ರಕರ್ತನೆಂದು ಸುಳ್ಳು ಗುರುತು ಸೃಷ್ಟಿಸಿಕೊಂಡು, ಕಾರಿನ ಹಿಂಬದಿಯ ಗಾಜಿನ ಮೇಲೆ ‘ಪ್ರೆಸ್' ಎಂಬ ಸ್ಟಿಕ್ಕರ್ ಬಳಸುವ ಮೂಲಕ ಯಾರಿಗೂ ಅನುಮಾನ ಬಾರದಂತೆ ಶವಗಳನ್ನು ಸಾಗಿಸಿದ್ದಾನೆ. ಇಂದುಶೇಖರ್ ಯೂಟ್ಯೂಬ್ ಚಾನೆಲ್ ಒಂದನ್ನು ನಡೆಸುತ್ತಿದ್ದನು. ತಾನು ಪತ್ರಕರ್ತನೆಂದು ನಂಬಿಸಲು ಗುರುತಿನ ಚೀಟಿಗಳನ್ನು ಮಾಡಿಕೊಂಡಿದ್ದನು ಎಂದು ಪೊಲೀಸರು ಹೇಳಿದ್ದಾರೆ.
ಸಕಲೇಶಪುರ ಮತ್ತು ಮಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಆರೋಪಿಯ ಕಾರಿನ ಮೇಲೆ ಇದೇ ಬ್ಯಾನರ್ ಕಂಡುಬಂದಿದೆ. ವಿವಿಧ ಸ್ಥಳಗಳಲ್ಲಿ ಶವಗಳನ್ನು ಎಸೆಯುವಾಗಲು ಆತ ಇದೇ ತಂತ್ರವನ್ನು ಬಳಸಿದ್ದಾನೆ. ಅನುಮಾನ ಬಾರದಿರಲಿ ಎಂಬ ಉದ್ದೇಶದಿಂದ, ಆರೋಪಿಯು ಎಲ್ಲ ಶವಗಳನ್ನು ಒಟ್ಟಿಗೆ ಸಾಗಿಸುವ ಬದಲು, ಬೇರೆ ಬೇರೆ ಕಡೆಗಳಲ್ಲಿ ಎಸೆದಿದ್ದಾನೆ ಎಂದು ತಿಳಿದು ಬಂದಿದೆ.
ತಂದೆಯ ಕೃತ್ಯಕ್ಕೆ ಸಾಥ್
ಒಂದೇ ಕುಟುಂಬದ ಏಳು ಜನರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆಯಲ್ಲಿ ಸ್ಪೋಟಕ ಮಾಹಿತಿಯೊಂದು ಹೊರ ಬಿದ್ದಿದ್ದು, ಏಳು ಕೊಲೆ ನಡೆಯುವ ಅವಧಿಯಲ್ಲಿ ಇಂದುಶೇಖರ್ ನ ಅಪ್ರಾಪ್ತ ಮಗಳು 15 ದಿನ ಕಾಲೇಜಿಗೆ ರಜೆ ಹಾಕಿ ತನ್ನ ತಂದೆಯ ಕೃತ್ಯಕ್ಕೆ ಸಾಥ್ ನೀಡಿದ್ದಳು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ದ್ವೀತಿಯ ಪಿಯುಸಿ ಓದುತ್ತಿರುವ ಇಂದುಶೇಖರ್ ನ ಅಪ್ರಾಪ್ತ ಮಗಳು ಅಕ್ಟೋಬರ್ 15 ರಿಂದ ಅಕ್ಟೋಬರ್ 30 ರವರೆಗೂ ಕಾಲೇಜಿಗೆ ಹೋಗಿಲ್ಲ ಎಂಬುದು ಕಾಲೇಜಿನ ದಾಖಲಾತಿಗಳಿಂದ ಬಹಿರಂಗವಾಗಿದೆ.






