ಸಾಂಸ್ಕೃತಿಕ ಗುಲಾಮಗಿರಿಯಿಂದ ಮುಕ್ತರಾಗುವ ಅಗತ್ಯವಿದೆ : ಪ್ರೊ.ಎಸ್.ಜಿ.ಸಿದ್ದರಾಮಯ್ಯ

ಬೆಂಗಳೂರು : ಇವತ್ತಿಗೂ ನಮ್ಮ ತಲೆಯಲ್ಲಿ ತುಂಬಿಕೊಂಡಿರುವ ಸಾಂಸ್ಕೃತಿಕ ಗುಲಾಮಗಿರಿಯಿಂದ ಮುಕ್ತವಾಗಿಲ್ಲ. ಅದರಿಂದ ಮುಕ್ತವಾಗದ ಹೊರತು ಪ್ರಜಾಪ್ರಭುತ್ವ ಉಳಿಸಿಕೊಳ್ಳಲಾಗುವುದಿಲ್ಲ. ನಮ್ಮೆಲ್ಲರಿಗೂ ಸಮಾನವಾಗಿ ಬೇಕಾಗಿರುವ ಅವಕಾಶ ಪಡೆದುಕೊಳ್ಳಲು ಆಗುವುದಿಲ್ಲ. ಆದ್ದರಿಂದ ಸಾಂಸ್ಕೃತಿಕ ಗುಲಾಮಗಿರಿಯಿಂದ ಮುಕ್ತರಾಗುವ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ನಗರದ ವಿಧಾನಸೌಧದ ಎದುರಿನ ಡಾ.ಅಂಬೇಡ್ಕರ್ ಪ್ರತಿಮೆ ಹತ್ತಿರ ದಲಿತ ಸಂಘರ್ಷ ಸಮಿತಿಯ ವತಿಯಿಂದ ಆಯೋಜಿಸಿದ್ದ ಭೀಮಾ ಕೊರೆಗಾಂವ್ ವಿಜಯೋತ್ಸವದ ಪ್ರಯುಕ್ತ ‘ಸಾಮಾಜಿಕ ಸಮಾನತಾ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ.ಅಂಬೇಡ್ಕರ್ ಅವರು ಹೇಳಿದಂತೆ ಶಿಕ್ಷಣ, ಸಂಘಟನೆ, ಹೋರಾಟ ಮಾತ್ರ ದಮನಿತ ಸಮುದಾಯಗಳಿಗೆ ಧಿಕ್ಕು ತೋರಿಸುವಂತಹ ದಾರಿಗಳೇ ಹೊರತು ಬೇರೆ ಇನ್ನಾವವು ಅಲ್ಲ. ವಂಚನೆಗೆ ಒಳಗಾಗಿರುವ ಸಮುದಾಯಗಳ ಚರಿತ್ರೆ ಸಾಕಷ್ಟು ಕಳೆದುಹೋಗಿದೆ. ಕೊರೆಗಾಂವ್ ಯುದ್ಧ ಕೂಡ ಕಳೆದು ಹೋಗಿತ್ತು. ಡಾ.ಅಂಬೇಡ್ಕರ್ ಅವರು ಶೋಧಿಸದೇ ಇದ್ದರೇ, ಕೊರೆಗಾಂವ್ ಯುದ್ಧದ ವಿಜಯೋತ್ಸವವನ್ನು ಆಚರಣೆ ಮಾಡಲು ಆಗುತ್ತಿರಲಿಲ್ಲ ಎಂದು ತಿಳಿಸಿದರು.
ಡಾ.ಅಂಬೇಡ್ಕರ್ ಅವರ ಶೋಧನೆಯ ಫಲವಾಗಿ ಚರಿತ್ರೆ ಪುನರ್ ರಚಿತವಾಗಿದೆ. ಚರಿತ್ರೆಯನ್ನು ಮರೆತ ಜನಾಂಗ ವರ್ತಮಾನವನ್ನು ಅರ್ಥ ಮಾಡಿಕೊಳ್ಳಲಾಗದು, ವರ್ತಮಾನವನ್ನು ಅರ್ಥ ಮಾಡಿಕೊಳ್ಳದಿರುವ ಜನಾಂಗ ಭವಿಷ್ಯವನ್ನು ರೂಪಿಸಿಕೊಳ್ಳುವುದಿಲ್ಲ. ನಾವು ಓದುತ್ತಿರುವ ಚರಿತ್ರೆ ಒಂದು ರೀತಿಯಲ್ಲಿ ತಿರುಚಿದ ಚರಿತ್ರೆಯಾಗಿದೆ.
ಇತ್ತೀಚಿಗೆ ವಾಟ್ಸ್ ಆಪ್‍ಗಳಲ್ಲಿ ಕಾಣುತ್ತಿರುವುದು ಹೆಚ್ಚಾಗಿ ತಿರುಚಿರುವ ಚರಿತ್ರೆ. ವಂಚಿತ ಸಮುದಾಯಗಳ ವಿರುದ್ಧವಾದ ಚರಿತ್ರೆ. ವಸ್ತು ಸತ್ಯಕ್ಕೆ ವಿರುದ್ಧವಾಗಿರುವ ಚರಿತ್ರೆ ನಮ್ಮ ಮಕ್ಕಳು ಅದನ್ನೇ ಓದುತಿದ್ದಾರೆ. ಕೊರೆಗಾಂವ್ ಯುದ್ಧಕ್ಕೆ ಸಂಬಂಧಿಸಿದಂತೆ ʼವಾರ್ತಾಭಾರತಿʼಯಲ್ಲಿ ಪ್ರಕಟವಾದ ಲೇಖನ ಚರಿತ್ರೆಗೆ, ಡಾ.ಅಂಬೇಡ್ಕರ್ ಅವರು ಪ್ರತಿಪಾದಿಸಿರುವಂತೆ ಮತ್ತು ಅದಕ್ಕೆ ನಿಷ್ಠವಾಗಿರುವಂತೆ ಇದೆ ಎಂದು ತಿಳಿಸಿದರು.
ಅಂಬೇಡ್ಕರ್ ಅವರು ಯಾವ ಕಾರಣದಲ್ಲಿಯೂ ಕೂಡ ಚರಿತ್ರೆ ತಪ್ಪಿದಂತೆ ಆಲೋಚನೆ ಮಾಡಿದವರಲ್ಲ. ದೇಶದ ಚರಿತ್ರೆಯ ಪ್ರಜ್ಞೆಯಲ್ಲಿ ಇದ್ದಿದ್ದರಿಂದ ಸಂವಿಧಾನವನ್ನು ಅರ್ಥಪೂರ್ಣವಾಗಿ ಕಟ್ಟಲು ಸಾಧ್ಯವಾಯಿತು. ನಮಗೆ ರಾಜ್ಯ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ಸಾಂಸ್ಕೃತಿಕ ಗುಲಾಮಗಿರಿಯಿಂದ ಮುಕ್ತಿ ಸಿಕ್ಕಿಲ್ಲ. ಅದಕ್ಕೆ ಕುವೆಂಪು ಅವರು ಕೂಡ ಕರ್ಮ ಸಿದ್ಧಾಂತದ ಮೌಡ್ಯಕ್ಕೆ ಗುಂಡು ಹೊಡೆದುಕೊಂಡು ವಿಶ್ವ ಮಾನವರಾಗಿ ಎಂದು ಹೇಳಿದ್ದಾರೆ. ಎಲ್ಲರೂ ಮನುಷ್ಯರಾಗಿ ಬದುಕೋಣ. ಚರಿತ್ರೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳೋಣ ಎಂದರು.
ಇದೇ ವೇಳೆ ಮೇಣದ ಬತ್ತಿ ಹಿಡಿದು ಭೀಮಾ ಕೊರೆಗಾಂವ್ ಯುದ್ಧದಲ್ಲಿ ಹುತಾತ್ಮರಾದವರಿಗೆ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಕವಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ, ದಲಿತ ಸಂಘರ್ಷ ಸಮಿತಿಯ ಪ್ರದಾನ ಸಂಚಾಲಕ ಮಾವಳ್ಳಿ ಶಂಕರ್, ಹೋರಾಟಗಾರ್ತಿ ಇಂದಿರಾ ಕೃಷ್ಣಪ್ಪ, ಹಿರಿಯ ಪತ್ರಕರ್ತ ಡಿ. ಉಮಾಪತಿ ಮತ್ತಿತರರು ಉಪಸ್ಥಿತರಿದ್ದರು.







