ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಮಾಂಸದಂಗಡಿ ಬಂದ್ ವಿರೋಧಿಸಿದ್ದ ಶಿವಸುಂದರ್ ಅವರ ಫೇಸ್ ಬುಕ್ ಪೋಸ್ಟ್ಗೆ ಭಾರತದಲ್ಲಿ ನಿರ್ಬಂಧ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಹಿನ್ನೆಲೆಯಲ್ಲಿ ಆನೇಕಲ್ ನಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಡಳಿತ ಹೊರಡಿಸಿದ್ದ ಆದೇಶವನ್ನು ಟೀಕಿಸಿ ಚಿಂತಕ ಶಿವಸುಂದರ್ ಅವರು ಹಾಕಿದ್ದ ಫೇಸ್ ಬುಕ್ ಪೋಸ್ಟ್ ಗೆ ಭಾರತದಲ್ಲಿ ನಿರ್ಬಂಧ ಹೇರಲಾಗಿದೆ.
ಪ್ರಧಾನಿಯವರ ಕಾರ್ಯಕ್ರಮದ ನಿಮಿತ್ತ ಆನೇಕಲ್ ತಾಲ್ಲೂಕಿನ ಕಲ್ಲುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನ. 12 ಮತ್ತು 13ರಂದು ಮಾಂಸದ ಅಂಗಡಿಗಳನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ಈ ಸುದ್ದಿಗೆ ಸಂಬಂಧಿಸಿದ 'ವಾರ್ತಾ ಭಾರತಿ'ಯ ವೀಡಿಯೊವನ್ನು ಪೋಸ್ಟ್ ಮಾಡಿದ್ದ ಶಿವಸುಂದರ್ ಅವರು, "ಬೆಂಗಳೂರಿಗೆ ಮೋದಿ ಬರುವ ಖುಷಿಗೆ ಭಕ್ತರು ಬೇಕಾದರೆ ಶ್ವಾಸ ಶೌಚ ಕೂಡ ಬಂದ್ ಮಾಡಿಕೊಳ್ಳಲಿ! ಆದರೆ ಊರು ತಿನ್ನುವ ಮೀನು ಮಾಂಸ ಬಂದ್ ಮಾಡಲು ನೀವು ಯಾರು? - ಶಿವಸುಂದರ್" ಎಂದು ಪೋಸ್ಟ್ ಮಾಡಿದ್ದರು.
ನ. 13ರಂದು ಫೇಸ್ ಬುಕ್ ಸಂಸ್ಥೆಯು ಈ ಪೋಸ್ಟ್ ಅನ್ನು ಭಾರತದಲ್ಲಿ ವೀಕ್ಷಿಸಲು ಸಾಧ್ಯವಾಗದಂತೆ ನಿರ್ಬಂಧಿಸಿದೆ. ಭಾರತದ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳ ಅಡಿಯಲ್ಲಿನ ಕಾನೂನು ಅಗತ್ಯಗಳಿಗೆ ಅನುಗುಣವಾಗಿ ಜಾರಿಗೊಳಿಸಲಾದ ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ಈ ವಿಷಯಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಫೇಸ್ಬುಕ್ ತಿಳಿಸಿದೆ.




