ಎಸ್‍ಐಆರ್ ವಿರುದ್ಧ ಜನಾಂದೋಲನ ರೂಪಿಸುವ ಅಗತ್ಯವಿದೆ : ಶಿವಸುಂದರ್

ಬೆಂಗಳೂರು : ಭಾರತೀಯ ಚುನಾವಣಾ ಆಯೋಗವು 12 ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್‍ಐಆರ್) ನಡೆಸುತ್ತಿದೆ. ಮುಂದಿನ ವರ್ಷದ ಫೆಬ್ರವರಿ ವೇಳೆಗೆ ಕರ್ನಾಟಕದಲ್ಲಿಯೂ ಎಸ್‍ಐಆರ್ ಆರಂಭಿಸಬಹುದು. ನಾವು ಈಗಿನಿಂದಲೆ ಅದರ ವಿರುದ್ಧ ಜನಾಂದೋಲನ ರೂಪಿಸಲು ಸಿದ್ಧತೆಗಳನ್ನು ಕೈಗೊಳ್ಳಬೇಕಿದೆ ಎಂದು ಅಂಕಣಕಾರ ಶಿವಸುಂದರ್ ಕರೆ ನೀಡಿದರು.
ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ದಾರುಸ್ಸಲಾಮ್ ಕಟ್ಟಡದ ಬಿಫ್ಟ್ ಸಭಾಂಗಣದಲ್ಲಿ ಮುಸ್ಲಿಮ್ ಮುತ್ತಹಿದ ಮಹಾಝ್ ವತಿಯಿಂದ ಆಯೋಜಿಸಲಾಗಿದ್ದ ಎಸ್‍ಐಆರ್ ಕುರಿತ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಮುಂದಿನ ಮೂರು ತಿಂಗಳು ನಾವು ತಳಮಟ್ಟದಲ್ಲಿ ಕೆಲಸ ಮಾಡಬೇಕು. ಇದು ನೆಮ್ಮದಿ, ಶಾಂತಿಯಿಂದ ಕೂರುವ ಸಮಯವಲ್ಲ. ಒಂದು ಕಡೆ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸಬೇಕು, ದಾಖಲೆಗಳನ್ನು ಸಮರ್ಪಕಗೊಳಿಸಿಕೊಳ್ಳಬೇಕು, ಎಸ್‍ಐಆರ್ ವಿರುದ್ಧ ಜನಾಭಿಪ್ರಾಯ ಮೂಡಿಸಬೇಕು. ಅಂತಿಮವಾಗಿ ಹೋರಾಟಕ್ಕೂ ಸಿದ್ಧವಾಗಿರಬೇಕು ಎಂದು ಶಿವಸುಂದರ್ ತಿಳಿಸಿದರು.
ಬಿಹಾರದಲ್ಲಿ ಎಸ್‍ಐಆರ್ ನಡೆಸಿದಾಗ ಆಧಾರ್ ಕಾರ್ಡ್ ಅನ್ನು ಒಂದು ದಾಖಲೆಯಾಗಿ ತಾತ್ಕಾಲಿಕವಾಗಿ ಒಪ್ಪಿಕೊಳ್ಳದೆ ಹೋಗಿದ್ದರೆ ಸುಮಾರು 2 ಕೋಟಿ ಜನ ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದರು. ಎಸ್‍ಐಆರ್ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದ ಪರಿಣಾಮವಾಗಿಯೆ ಸುಪ್ರೀಂಕೋರ್ಟ್ ಆಧಾರ್ ಕಾರ್ಡ್ ಅನ್ನು ಮಾನ್ಯ ಮಾಡುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತು ಎಂದು ಅವರು ಹೇಳಿದರು.
ಬೀದಿಗಿಳಿದು ಹೋರಾಟ ಮಾಡಿದ ಪರಿಣಾಮವಾಗಿಯೇ ಮತದಾರರ ಪಟ್ಟಿಯಿಂದ ಕೈ ಬಿಟ್ಟು ಹೋಗಿದ್ದ 65 ಲಕ್ಷ ಮಂದಿ ಪೈಕಿ 35 ಲಕ್ಷ ಜನ ಆಧಾರ್ ಕಾರ್ಡ್‍ನ ದಾಖಲೆಯಿಂದಾಗಿ ಮತದಾನ ಮಾಡಲು ಸಾಧ್ಯವಾಯಿತು. ಇದು ಹೋರಾಟಕ್ಕೆ ಇರುವ ಶಕ್ತಿ. ಹೋರಾಟಗಳು ನ್ಯಾಯಾಲಯಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ಶಿವಸುಂದರ್ ತಿಳಿಸಿದರು.
ಸಿಎಎ, ಎನ್‍ಆರ್‌ಸಿ, ಎನ್‍ಪಿಆರ್ ವಿರುದ್ಧ ನಡೆದ ಹೋರಾಟ, ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸಿದ ಹೋರಾಟ, ಮಂಗಳೂರಿನಲ್ಲಿ ಗೋಲಿಬಾರ್ ನಡೆದ ಬಳಿಕ ಇಡೀ ರಾಜ್ಯದಲ್ಲಿ ಸಿಎಎ, ಎನ್‍ಆರ್‌ಸಿ ವಿರುದ್ಧ ನಡೆದಂತಹ ಹೋರಾಟಗಳು, ದೇಶದ ವಿವಿಧ ರಾಜ್ಯಗಳಲ್ಲಿ ಇವುಗಳ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸಿದ್ದು, ಇವೆಲ್ಲವೂ ಜನರ ಹೋರಾಟದ ಪರಿಣಾಮವಾಗಿದೆ ಎಂದು ಅವರು ಹೇಳಿದರು.
ಬೂತ್ ಮಟ್ಟದಲ್ಲಿ ದಾಖಲೆಗಳನ್ನು ಸರಿಪಡಿಸುವಂತೆ ಮಾಡಬೇಕು. ಮಧ್ಯಪ್ರದೇಶದಲ್ಲಿ ಬೂತ್ ಮಟ್ಟದ ಅಧಿಕಾರಿ(ಬಿಎಲ್‍ಒ)ಗಳಿಗೆ ಯಾರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಬೇಕು, ಯಾರನ್ನು ತೆಗೆಯಬೇಕು ಎಂದು ಆರೆಸ್ಸೆಸ್ ಕಾರ್ಯಕರ್ತರು ಸಹಕರಿಸುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್‍ನವರು ನೆರವು ನೀಡಲಿ ಎಂದು ಹೇಳೋಣ ಎಂದರೆ ಕಾರ್ಯಕರ್ತರೆ ಇಲ್ಲ ಎಂದು ಶಿವಸುಂದರ್ ಹೇಳಿದರು.
ಚುನಾವಣಾ ಆಯೋಗವು ತಾನು ತಿಳಿಸಿರುವ 11 ದಾಖಲೆಗಳ ಜೊತೆಗೆ ನಮ್ಮ ಬಳಿ ಇರುವಂತಹ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ನರೇಗಾ ಕಾರ್ಡ್, ಪಡಿತರ ಚೀಟಿ ಯಾವುದು ಇದೆಯೋ ಅದನ್ನು ಒಪ್ಪಿಕೊಳ್ಳುವಂತೆ ಆಗ್ರಹಿಸಲು ಜನಾಭಿಪ್ರಾಯ ಮೂಡಿಸಬೇಕು ಎಂದು ಅವರು ತಿಳಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ನ್ಯಾಯವಾದಿ ವಿನಯ್ ಶ್ರೀನಿವಾಸ್, ಮುಸ್ಲಿಮ್ ಮುತ್ತಹಿದ ಮಹಾಝ್ ಸಂಚಾಲಕ ಮಸೂದ್ ಅಬ್ದುಲ್ ಖಾದರ್, ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಳಗಾಮಿ, ಕಾರ್ಯದರ್ಶಿ, ಯೂಸುಫ್ ಕನ್ನಿ, ಮೌಲಾನ ಏಜಾಝ್ ಅಹ್ಮದ್ ನದ್ವಿ, ಮೌಲಾನಾ ಝುಲ್ಫಿಕರ್ ನೂರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







