ʼಬೆಂಗಳೂರು ದಕ್ಷಿಣʼ | ಜಿಲ್ಲೆಯ ಹೆಸರು ಬದಲಾವಣೆಯಿಂದ ಜನಜೀವನ ಬದಲಾವಣೆ : ಡಿ.ಕೆ.ಶಿವಕುಮಾರ್

ಬೆಂಗಳೂರು : ‘ರಾಮನಗರ ಜಿಲ್ಲೆಯನ್ನು ‘ಬೆಂಗಳೂರು ದಕ್ಷಿಣ ಜಿಲ್ಲೆ’ ಎಂದು ಹೆಸರು ಬದಲಾವಣೆಯ ಕಾರಣಕ್ಕೆ ಏನೆಲ್ಲಾ ಬದಲಾವಣೆಯಾಗುತ್ತಿದೆ ಎಂಬುದು ಜಿಲ್ಲೆಯ ಜನರಿಗೆ ಅರ್ಥವಾಗುತ್ತಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ರವಿವಾರ ಕನಕಪುರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಕೆಲವರು ಟೀಕೆ ಮಾಡುತ್ತಿದ್ದಾರೆ. ಅವರಿಗೆ ನಾನು ಉತ್ತರ ನೀಡಲು ಹೋಗುವುದಿಲ್ಲ. ನಾವು ನಮಗೆ ಇರುವ ಹೆಸರನ್ನು ಉಳಿಸಿಕೊಂಡಿದ್ದೇವೆ. ಯಾರ ಹೆಸರನ್ನು ಕಿತ್ತುಕೊಂಡಿಲ್ಲ. ನಾನು ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿ.ಪಂ.ಸದಸ್ಯನಾಗಿದ್ದೆ. ಡಿ.ಕೆ.ಸುರೇಶ್ ಬಮೂಲ್ ಸದಸ್ಯರಾಗಿದ್ದಾರೆ. ಲೋಕಸಭಾ ಕ್ಷೇತ್ರವನ್ನು ಬೆಂಗಳೂರು ಗ್ರಾಮಾಂತರ ಎಂದು ಕರೆಯಲಾಗುತ್ತದೆ. ಎಲ್ಲಿಂದ ಎಲ್ಲಿಗೆ ಹೋದರು ಅಮೆರಿಕಾ ಎನ್ನುತ್ತಾರೆ. ಅದೇ ರೀತಿ ಇದೂ ಬೆಂಗಳೂರು’ ಎಂದು ಹೇಳಿದರು.
ಈಗಾಗಲೇ ರಾಮನಗರ ಕ್ಷೇತ್ರಕ್ಕೆ 1 ಸಾವಿರ ಕೋಟಿ ರೂ.ಗಳಷ್ಟು ಅನುದಾನ ನೀಡಲಾಗಿದೆ. ಇದರ ಬಗ್ಗೆ ಅವರು ಪಟ್ಟಿ ಬಿಡುಗಡೆ ಮಾಡುತ್ತಾರೆ. ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ವೇಳೆ 300 ಕೋಟಿ ರೂ.ಗಳಿಗೂ ಹೆಚ್ಚು ಹಣ ಕ್ಷೇತ್ರಕ್ಕೆ ನೀಡಲಾಗಿದೆ. ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯವನ್ನು ಪ್ರಾರಂಭ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಹಾರೋಹಳ್ಳಿ, ಕೋಡಹಳ್ಳಿ, ಸಾತನೂರು, ಕನಕಪುರ ಮುಖ್ಯರಸ್ತೆಗಳನ್ನು ಈ ಹಿಂದೆ ಅಗಲ ಮಾಡಲಾಯಿತು. ಆದ ಕಾರಣಕ್ಕೆ ಆಸ್ತಿ ಮೌಲ್ಯ ಹೆಚ್ಚಾಗಿದೆ. ರಸ್ತೆ ಅಗಲೀಕರಣ ಮಾಡಿದಷ್ಟು ಆಸ್ತಿ ಮೌಲ್ಯ ಹೆಚ್ಚಾಗಲಿದೆ. ಪಿ.ಜಿ.ಆರ್.ಸಿಂಧ್ಯಾ ಮತಗಳು ಹೋಗುತ್ತವೆ ಎಂದು ರಸ್ತೆ ಅಗಲೀಕರಣ ಮಾಡಿರಲಿಲ್ಲ. 500 ಮತಗಳನ್ನು ನೋಡಲು ಹೋದರೆ 5ಸಾವಿರ ಮತಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ವಸತಿ ಅಕ್ರಮ ಸುಳ್ಳು: ಹಣ ಪಡೆದು ಮನೆ ಮಂಜೂರು ಮಾಡಿದ್ದಾರೆಂಬ ಬಿ.ಆರ್.ಪಾಟೀಲ್ ಆರೋಪ ಸುಳ್ಳು. ಯಾರೋ ಒಬ್ಬ ಹೇಳಿದರೆ ಇದೆಲ್ಲವೂ ಆಗುತ್ತದೆಯೇ? ನಾನು ಗ್ರಾಮಸಭೆಯಲ್ಲಿ ಮನೆ ಕೇಳಿದ ತಕ್ಷಣ ಕೊಡಲು ಆಗುತ್ತದೆಯೇ?. ಮನೆ ಮಂಜೂರು ತೀರ್ಮಾನ ಮಾಡುವವರು ಗ್ರಾಮ ಪಂಚಾಯತಿ, ಆಯಾಯ ಸ್ಥಳೀಯ ಸಂಸ್ಥೆಗಳು ತೀರ್ಮಾನ ಮಾಡುತ್ತವೆ. ಬಿ.ಆರ್.ಪಾಟೀಲ್‍ಗೆ ಪೂರ್ಣ ಮಾಹಿತಿ ತಿಳಿದಿದೆಯೋ ಇಲ್ಲವೊ ಗೊತ್ತಿಲ್ಲ. ಯಾವುದೇ ಅಕ್ರಮ ನಡೆದಿಲ್ಲ. ನಾನು ಬಿ.ಆರ್.ಪಾಟೀಲ್ ಜತೆಗೆ ಮಾತನಾಡುತ್ತೇನೆ’
-ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ







