ಸತ್ಯದ ಅನ್ವೇಷಣೆಯೇ ಪತ್ರಿಕೋದ್ಯಮದ ಮೂಲ ಮಂತ್ರ : ಶಿವಾನಂದ ತಗಡೂರು

ಬೆಂಗಳೂರು : ಸತ್ಯದ ಅನ್ವೇಷಣೆಯೇ ಪತ್ರಿಕೋದ್ಯಮದ ಮೂಲ ಮಂತ್ರ. ಸತ್ಯಕ್ಕೆ ಹತ್ತಿರವಾದ ಸುದ್ದಿಗಳನ್ನು ಮಾಡುವ ಮೂಲಕ ಪತ್ರಿಕೋದ್ಯಮದ ವಿಶ್ವಾಸರ್ಹತೆಯನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.
ರವಿವಾರ ಬೆಂಗಳೂರಿನ ಸೆಂಟ್ ಜೋಸೆಫ್ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಿಂದ ಆಯೋಜಿಸಿದ್ದ ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಕೂಡ ಪತ್ರಕರ್ತರಾಗಿದ್ದು, ಈ ದೇಶದಲ್ಲಿ ಆದರ್ಶದ ಬೀಜಗಳನ್ನು ಬಿತ್ತಿದ್ದಾರೆ. ಆ ಬೆಳಕಲ್ಲಿ ನಡೆಯುವ ಬದ್ಧತೆಯನ್ನು ನಾವು ತೋರಿಸಬೇಕಾಗಿದೆ ಎಂದರು.
ಕಳೆದ ಎರಡು ದಶಕಗಳಲ್ಲಿ ಮಾದ್ಯಮ ಕ್ಷೇತ್ರ ಕ್ರಾಂತಿಕಾರಿ ಬದಲಾವಣೆ ಹೊಂದಿದೆ. ಆದರೆ, ವಿಶ್ವಾಸರ್ಹತೆ ಕಡಿಮೆ ಆಗುತ್ತಿರುವುದು ಆತಂಕದ ಸಂಗತಿ. ಕಲಿಕೆಯ ಉತ್ಸಾಹದ ಜೊತೆಗೆ ಸುದ್ದಿಯನ್ನು ಪರಾಮರ್ಶೆ ಮಾಡುವ ವ್ಯವದಾನ ಕೂಡ ಇರಬೇಕು. ಈ ನಿಟ್ಟಿನಲ್ಲಿ ಪತ್ರಿಕೋದ್ಯಮ ವೃತ್ತಿಯನ್ನು ಒಂದು ದೀಕ್ಷೆ ಎಂದು ಪರಿಭಾವಿಸಿ ಕೆಲಸ ಮಾಡಿದರೆ ಮತ್ತಷ್ಟು ವಿಶ್ವಾಸರ್ಹತೆಯನ್ನು ತಂದುಕೊಳ್ಳಲು ಸಾಧ್ಯವಿದೆ ಎಂದರು.
ಪತ್ರಕರ್ತ ರಮಾಕಾಂತ್ ಮಾತನಾಡಿ, ಯುವ ಪತ್ರಕರ್ತರು ಧಾವಂತದಲ್ಲಿ ಸುದ್ದಿಮನೆಗೆ ಬರುತ್ತಿದ್ದಾರೆ. ಅವರು ಇನ್ನಷ್ಟು ಅಧ್ಯಯನಶೀಲರಾಗುವುದು ಅತ್ಯಗತ್ಯವಾಗಿದೆ. ಭಾಷೆ, ವ್ಯಾಕರಣ ಬಳಕೆ ಬಗ್ಗೆಯೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಸಂವಾದದಲ್ಲಿ ಸೆಂಟ್ ಜೋಸೆಫ್ ವಿವಿ ಉಪ ಕುಲಪತಿ ಡಾ.ರಜಿನಾ ಮಥಾಯಿಸ್, ರಿಜಿಸ್ಟಾರ್ ಮೆಲ್ವಿನ್ ಕೊಲಾಸ್ ಮತ್ತಿತರರು ಹಾಜರಿದ್ದರು.







