ʼವಂದೇ ಮಾತರಂʼ ಮೊದಲು ಹಾಡಿದ್ದೇ ಕಾಂಗ್ರೆಸ್ಸಿನವರು : ಶಿವರಾಜ್ ತಂಗಡಗಿ

ಬೆಂಗಳೂರು : ವಂದೇ ಮಾತರಂ ಗೀತೆಯನ್ನು ಮೊದಲ ಬಾರಿಗೆ 1896ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು. ಅಂದರೆ ವಂದೇ ಮಾತರಂ ಮೊದಲು ಹಾಡಿದ್ದೇ ಕಾಂಗ್ರೆಸ್ಸಿನವರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ಈ ಕುರಿತು ರವಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ನಮ್ಮ ಸರಕಾರ ವಂದೇ ಮಾತರಂ ಎರಡು ಚರಣ ಮಾತ್ರ ಹಾಡುವಂತೆ ಆದೇಶ ಮಾಡಿದೆ. ಇದು ನಮ್ಮ ಸರಕಾರದ ತೀರ್ಮಾನವಲ್ಲ. 1875 ರಲ್ಲಿ ಜನರಲ್ಲಿ ದೇಶ ಪ್ರೇಮ ಉಕ್ಕಿಸುವಂತೆ ಮಾಡಲು ಬಂಕಿಮ ಚಂದ್ರ ಚಟರ್ಜಿ ಅವರು 'ವಂದೇ ಮಾತರಂ' ಎರಡೇ ಚರಣ ರಚಿಸಿದ್ದರು. ಅದನ್ನು ಬಂಗಾಳದ ನಾಡಗೀತೆ ರಚನೆ ವೇಳೆ ಪರಿಷ್ಕರಣೆ ಮಾಡಲಾಗಿತ್ತು. ಬಳಿಕ ಸುಭಾಷ್ ಚಂದ್ರ ಬೋಸ್ ಅವರ ಒತ್ತಾಸೆಯಂತೆ ವಂದೇ ಮಾತರಂ ಎಷ್ಟು ಹಾಡಬೇಕು ಎಂಬ ಬಗ್ಗೆ ತೀರ್ಮಾನಿಸಲು ಕಾಂಗ್ರೆಸ್ ವರ್ಕಿಂಗ್ ಕಮಿಟಿ ರವೀಂದ್ರನಾಥ ಠಾಗೂರ್ ಅವರಿಗೆ ಜವಾಬ್ದಾರಿ ನೀಡಿತ್ತು ಎಂದು ತಿಳಿಸಿದ್ದಾರೆ.
ಇತಿಹಾಸದ ಅರಿವು ಇಲ್ಲದಿದ್ದರೆ ಅರಿತು ಬಾಳಬೇಕು. ಅದು ಬಿಟ್ಟು ವಂದೇ ಮಾತರಂ ಬಗ್ಗೆ ನೀವು ಕಾಂಗ್ರೆಸ್ಸಿಗರಿಗೆ ಬೋಧನೆ ಮಾಡುವುದು ಗುರುವಿಗೇ ಪಾಠ ಹೇಳುವಷ್ಟು ಅಜ್ಞಾನ ಮಾತ್ರವಲ್ಲ, ಅಹಂಕಾರದ ಪ್ರದರ್ಶನ ಕೂಡ ಎಂದು ಚಕ್ರವರ್ತಿ ಸೂಲಿಬೆಲೆಗೆ ತಿರುಗೇಟು ನೀಡಿದ್ದಾರೆ.
ನಿಮ್ಮ ಮಿಥ್ಯಕತೆಗಳಿಗೆ ಅಂಧಭಕ್ತರು ತಟ್ಟುವ ಚಪ್ಪಾಳೆಗೆ ಮರುಳಾಗಿ ಸರ್ಕಾರಿ ಆದೇಶಗಳ ಬಗ್ಗೆ ತಿರುಚಿ ಹೇಳುವುದು ಬೇಡ. ಸಚಿವರಾದವರ ಹೇಳಿಕೆಗಳಿಗೆ ಅಪಾರ್ಥ ಕಲ್ಪಿಸುವ ವ್ಯರ್ಥ ಪ್ರಯತ್ನ ಬೇಡವೇ ಬೇಡ. ನಮ್ಮ ಸರಕಾರ ವಂದೇ ಮಾತರಂ ಎರಡು ಚರಣ ಮಾತ್ರ ಹಾಡುವಂತೆ ಆದೇಶ ಮಾಡಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿ ಆ ಆದೇಶ ಪಾಲನೆ ನನ್ನ ಆದ್ಯ ಕರ್ತವ್ಯ ಎಂದು ತಿಳಿಸಿದ್ದಾರೆ.
ಕಳೆದ ವಾರ ಗಂಗಾವತಿಯ ಸರಕಾರಿ ಕಾರ್ಯಕ್ರಮದಲ್ಲಿ ಸರ್ಕಾರಿ ಆದೇಶದಂತೆ ಅಧಿಕಾರಿಗಳು ವಂದೇ ಮಾತರಂ ಎರಡು ಚರಣ ಮಾತ್ರ ಹಾಡಿಸಿದ್ದರು. ಆಗ ಶಾಸಕ ಗಾಲಿ ಜನಾರ್ದನರಡ್ಡಿ ಬಲವಂತವಾಗಿ ‘ವಂದೇ ಮಾತರಂ’ ಗೀತೆಯನ್ನು ಸಂಪೂರ್ಣ ಹಾಡಿಸಿದ್ದರು. ಹೀಗಾಗಿ ಸರಕಾರಿ ಆದೇಶ ಪಾಲನೆ ಮಾಡದ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದೆ. ನನ್ನ ಮಾತು, ಸೂಚನೆ ಸರಕಾರಿ ಅಧಿಕಾರಿಗಳಿಗೆ ಸೀಮಿತ ಎಂದು ತಿಳಿಸಿದ್ದಾರೆ.
ಇದೇ ವೇಳೆ ನಾನು, ' ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿರುವುದರಿಂದ ಸರ್ಕಾರದ ನೀತಿ-ನಿಯಮಗಳನ್ನು ಪಾಲಿಸುವುದು ನನ್ನ ಜವಾಬ್ದಾರಿ. ವಂದೇ ಮಾತರಂ ಗೀತೆಯನ್ನು ಪೂರ್ಣ ಚರಣಗಳೊಂದಿಗೆ ಹಾಡುವಂತೆ ಸರ್ಕಾರ ಆದೇಶ ನೀಡಿದರೆ ಯಾವುದೇ ಅಭ್ಯಂತರವಿಲ್ಲ. ಶಾಸಕರು ಸದನದಲ್ಲಿ ಈ ಕುರಿತು ಒತ್ತಾಯಿಸಿದರೆ ಚರ್ಚೆ ನಡೆಸಿ ಸಮಿತಿ ರಚಿಸಲಾಗುವುದು ಎಂದೂ ಹೇಳಿದ್ದೆ.' ಇದನ್ನು ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಎಲ್ಲ ಅಂಧ ಭಕ್ತರೂ ಅರಿಯಬೇಕು ಎಂದು ತಿಳಿಸಿದ್ದಾರೆ.
ಆರೆಸ್ಸೆಸ್ ನ ಐಟಿಸಿ (ಪ್ರಾಥಮಿಕ ಶಿಕ್ಷಾ ವರ್ಗ), ಒಟಿಸಿ (ಸಂಘ ಶಿಕ್ಷಾ ವರ್ಗ) ಸೇರಿದಂತೆ ನಿಮ್ಮ ತರಬೇತಿ ಶಿಬಿರಗಳಲ್ಲಿ ತಾಕತ್ತಿದ್ದರೆ ರಾಷ್ಟ್ರಗೀತೆ ಹಾಡಿ, ದಲಿತರಿಗೆ ಅವಕಾಶ ನೀಡಿ, ಮಹಿಳೆಯರಿಗೆ ಆದ್ಯತೆ ನೀಡಿ. ಅದರಲ್ಲಿ ನಿಮ್ಮ ತಾಕತ್ತು ಪ್ರದರ್ಶನ ಮಾಡಿ ಎಂದು ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರಂತಹ ದೇಶದ ಪ್ರಮುಖ ರಾಷ್ಟ್ರೀಯ ನಾಯಕರೊಬ್ಬರು ಭಾಷಣ ಮಾಡಿದ ಸ್ಥಳವನ್ನು ‘ಶುದ್ಧೀಕರಣ’ ಮಾಡಿದ ದಲಿತ ದ್ರೋಹಿ ಸಂತತಿಯವರು ನೀವು. ನಿಮ್ಮಂತಹವರ ತಾಕತ್ತು, ಸವಾಲು ನನಗೆ ಹೊಸದೇನಲ್ಲ. ಯಾವುದಕ್ಕೂ ಆಡುವ ಮಾತಿನ ಮೇಲೆ ಹಿಡಿತವಿರಲಿ ಎಂದು ಚಕ್ರವರ್ತಿ ಸೂಲಿಬೆಲೆಗೆ ಎಚ್ಚರಿಕೆ ನೀಡಿದ್ದಾರೆ.
ಮಿಸ್ಟರ್ ಚಕ್ರವರ್ತಿ ಸೂಲಿಬೆಲೆ ಅವರೇ,
— Shivaraj S Tangadagi (@sstangadagi) September 20, 2026
'ವಂದೇ ಮಾತರಂ' ಗೀತೆಯನ್ನು ಮೊದಲ ಬಾರಿಗೆ 1896ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು. ಅಂದರೆ ವಂದೇ ಮಾತರಂ ಮೊದಲು ಹಾಡಿದ್ದೇ ಕಾಂಗ್ರೆಸ್ಸಿನವರು.
ನಮ್ಮ ಸರ್ಕಾರ ವಂದೇ ಮಾತರಂ ಎರಡು ಚರಣ ಮಾತ್ರ ಹಾಡುವಂತೆ ಆದೇಶ ಮಾಡಿದೆ. ಇದು ನಮ್ಮ ಸರ್ಕಾರದ… pic.twitter.com/D5ue2KBQ5r






