ಅಕಾಡೆಮಿ-ಪ್ರಾಧಿಕಾರಗಳ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ : ಶಿವರಾಜ್ ತಂಗಡಗಿ

ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಗೆ ಬರುವ ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಕಾರ್ಯಚಟುವಟಿಕೆ ಹಾಗೂ ಇಲಾಖೆಯ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಸೂಚನೆ ನೀಡಿದ್ದಾರೆ.
ಗುರುವಾರ ನಗರದ ಜೆ.ಸಿ.ರಸ್ತೆಯಲ್ಲಿರುವ ಕನ್ನಡ ಭವನದಲ್ಲಿ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಬೇಕಿರುವ ಯೋಜನೆಗಳು ಹಾಗೂ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿರುವ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರಿಂದ ಅವರು ಮಾಹಿತಿ ಪಡೆದುಕೊಂಡರು.
ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಜಾನಪದ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಅಕಾಡೆಮಿಗಳು ತಮ್ಮ ವ್ಯಾಪ್ತಿಯಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋ ತ್ಸಾಹಿಸುವುದರ ಜೊತೆಗೆ, ಯುವಜನರನ್ನು ಕನ್ನಡದ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬೆಸೆಯುವ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಶಿವರಾಜ್ ತಂಗಡಗಿ ಸೂಚಿಸಿದರು.
ಅಕಾಡೆಮಿ ಹಾಗೂ ಪ್ರಾಧಿಕಾರಗಳು ಕೇವಲ ಬೆಂಗಳೂರಿಗೆ ಸೀಮಿತವಾಗದೆ ರಾಜ್ಯದ ಎಲ್ಲ ಜಿಲ್ಲೆಗಳಿಗೂ ತಮ್ಮ ಕಾರ್ಯಕ್ರಮಗಳನ್ನು ವಿಸ್ತರಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿರುವ ಕಲಾವಿದರು, ಸಾಹಿತಿಗಳು, ಜಾನಪದ ಕಲಾವಿದರು ಹಾಗೂ ಯುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುವಂತೆ ಅವರು ತಿಳಿಸಿದರು.
ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಸಂರಕ್ಷಣೆ ಹಾಗೂ ಬೆಳವಣಿಗೆಯ ಜತೆಗೆ, ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ಕನ್ನಡದ ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಸಂಪತ್ತನ್ನು ಯುವ ಪೀಳಿಗೆಗೆ ತಲುಪಿಸುವ ಪ್ರಯತ್ನ ನಡೆಯಬೇಕು. ಸಾಮಾಜಿಕ ಜಾಲತಾಣ ಸೇರಿದಂತೆ ಆಧುನಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಅಧ್ಯಕ್ಷರಿಗೆ ಶಿವರಾಜ್ ತಂಗಡಗಿ ಸಲಹೆ ನೀಡಿದರು.
ಅಳಿವಿನಂಚಿನಲ್ಲಿರುವ ಜಾನಪದ ಕಲೆ, ಕಲಾವಿದರನ್ನು ಗುರುತಿಸಿ: ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುವ ಸಾಂಸ್ಕೃತಿಕ ವೈವಿಧ್ಯತೆಯನ್ನು ಗುರುತಿಸಿ, ಸ್ಥಳೀಯ ಕಲೆ ಮತ್ತು ಪರಂಪರೆಗಳಿಗೆ ಪ್ರೋತ್ಸಾಹ ನೀಡಬೇಕು. ಅಳಿವಿನಂಚಿನಲ್ಲಿರುವ ಜಾನಪದ ಕಲೆಗಳು ಹಾಗೂ ಕಲಾವಿದರನ್ನು ಗುರುತಿಸಿ, ಅವುಗಳ ಸಂರಕ್ಷಣೆ ಮತ್ತು ಉತ್ತೇಜನಕ್ಕೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವ ಅಗತ್ಯವಿದೆ. ಅಕಾಡೆಮಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರು ತಮ್ಮ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸಮಸ್ಯೆಗಳು ಹಾಗೂ ಅಗತ್ಯಗಳ ಕುರಿತು ಸಚಿವರ ಗಮನಕ್ಕೆ ತಂದರು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ಅವರು ನೀಡಿದರು.
ಸೌದಿ ಅರೇಬಿಯಾದಲ್ಲಿ ವಿಶ್ವ ಬ್ಯಾರಿ ಸಮ್ಮೇಳನ: ‘ಆರ್ಟ್ ಗ್ಯಾಲರಿ, ಸೌದಿ ಅರೇಬಿಯಾದಲ್ಲಿ ವಿಶ್ವ ಬ್ಯಾರಿ ಸಮ್ಮೇಳನ ಆಯೋಜನೆ, ಕರಾವಳಿಯಲ್ಲಿ ಬಹು ಸಂಸ್ಕೃತಿ ಉತ್ಸವ, ಕನ್ನಡ ಭಾಷೆಯಲ್ಲಿರುವ ಜೈಮಿನಿ ಭಾರತವನ್ನು ತುಳು ಭಾಷೆಗೆ ಭಾಷಾಂತರಿಸಲು ಕ್ರಮ, ಯುವಕರನ್ನು ಸೆಳೆಯುವಂತಹ ಕಾರ್ಯಕ್ರಮ ಆಯೋಜನೆ, ಮಹಿಳಾ ಸಾಂಸ್ಕೃತಿಕ ಉತ್ಸವ ಹಾಗೂ ಹೆಚ್ಚಿನ ಅನುದಾನ ಸೇರಿದಂತೆ ಹಲವು ವಿಚಾರವನ್ನು ಅಕಾಡೆಮಿ ಹಾಗೂ ಪ್ರಾಧಿಕಾರದ ಅಧ್ಯಕ್ಷರು ಸಚಿವರ ಗಮನಕ್ಕೆ ತಂದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಹಂತ-ಹಂತವಾಗಿ ಎಲ್ಲ ಕಾರ್ಯಕ್ರಮಗಳನ್ನು ಆಯೋಜಿಸೋಣ ಎಂದು ಭರವಸೆ ನೀಡಿದರು.
ಕೆಲವು ಐಎಎಸ್ ಅಧಿಕಾರಿಗಳಿಗೆ ಕನ್ನಡವೇ ಬರುವುದಿಲ್ಲ. ಪ್ರಾಧಿಕಾರದ ವತಿಯಿಂದ ಕನ್ನಡ ಕಲಿಕೆ ಎಂಬ ಹೆಸರಿನಲ್ಲಿ ಪರಿಣಿತರಿಂದ ಭಾಷೆ ಕಲಿಸಿಕೊಡಲಾಗುವುದು. ಅಲ್ಲದೆ, 1200 ಮದ್ರಸಾಗಳಲ್ಲಿ ಮಕ್ಕಳಿಗೆ ಕನ್ನಡ ಕಲಿಸಬೇಕೆಂಬ ಯೋಜನೆ ಇದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ್ ಬಿಳಿಮಲೆ ಸಚಿವರ ಗಮನಕ್ಕೆ ತಂದರು. ಇದಕ್ಕೆ ಕೂಡಲೇ ಸ್ಪಂದಿಸಿದ ಅವರು, ಈ ಸಂಬಂಧ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.






