ಎಸ್‌ಐಆರ್ ರದ್ದುಗೊಳಿಸುವವರೆಗೂ ಹೋರಾಟ ಅನಿವಾರ್ಯ : ಶಿವಸುಂದರ್

ಮೈಸೂರು : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಸಂವಿಧಾನ ಬಾಹಿರವಾಗಿರುವುದು ಈಗಾಗಲೇ ದಾಖಲಾಗಿದೆ. ಚುನಾವಣಾ ಆಯೋಗ ಒಂದೆಡೆ ನಿಯಮಗಳನ್ನು ಸಡಿಲಗೊಳಿಸುತ್ತಿದೆ ಎಂದು ಹೇಳಿಕೊಂಡರೂ, ಮತ್ತೊಂದೆಡೆ ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಪ್ರಕ್ರಿಯೆಗೆ ಸಮರ್ಪಕ ಉತ್ತರ ನೀಡುತ್ತಿಲ್ಲ. ಹೀಗಾಗಿ ಎಸ್‌ಐಆರ್ ಪ್ರಕ್ರಿಯೆಯನ್ನೇ ಸಂಪೂರ್ಣವಾಗಿ ರದ್ದುಗೊಳಿಸುವವರೆಗೂ ಹೋರಾಟ ಮುಂದುವರಿಸುವುದು ಅನಿವಾರ್ಯ ಎಂದು ಅಂಕಣಕಾರ, ಚಿಂತಕ ಶಿವಸುಂದರ್ ಹೇಳಿದ್ದಾರೆ.
ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಶುಕ್ರವಾರ ಬಹುತ್ವ ಭಾರತ ಜನಪರ ಸಂಘದ ವತಿಯಿಂದ ನಡೆದ ‘ಎಸ್‌ಐಆರ್ ಸಾಂವಿಧಾನಿಕ ಸಂಸ್ಥೆಗಳೇ ಸಂವಿಧಾನವನ್ನು ವಿಫಲಗೊಳಿಸುತ್ತಿವೆಯೇ?’ ವಿಷಯದ ಕುರಿತು ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಸ್‌ಐಆರ್ ಸಂದರ್ಭದಲ್ಲಿ ಕೇಳಲಾಗುತ್ತಿದ್ದ ದಾಖಲೆಗಳ ನಿಯಮಗಳನ್ನು ಸಡಿಲಗೊಳಿಸಿ, ಫಾರಂ-6 ಮೂಲಕ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅವಕಾಶ ನೀಡಿರುವುದರಿಂದ ಹಲವು ಪ್ರಶ್ನೆಗಳು ಉದ್ಭವಿಸಿವೆ. ಎಸ್‌ಐಆರ್ ಅವಧಿಯಲ್ಲಿ ಮಾತ್ರ ದಾಖಲೆ ಹಾಗೂ ಘೋಷಣಾ ಪತ್ರ ನೀಡಬೇಕೆಂಬ ನಿಯಮವಿದ್ದರೆ, ಎಸ್‌ಐಆರ್ ನಂತರ ಸೇರ್ಪಡೆಯಾಗುವವರಿಗೆ ಅದೇ ನಿಯಮ ಅನ್ವಯವಾಗದಿರುವುದು ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಾಗಿದೆ ಎಂದರು.ಈ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ, ಮಾಜಿ ಮೇಯರ್ ಪುರುಷೋತ್ತಮ್, ಮಲೈ ಮಹದೇವಸ್ವಾಮಿ ಎಂ., ಡಾ.ವಿಜಯರಾಜು ಬಿ.ಪಿ. ಉಪಸ್ಥಿತರಿದ್ದರು.
ಸಚಿವ ಸಂಪುಟದಲ್ಲೇ ಎಸ್‌ಐಆರ್ ಬಗ್ಗೆ ಭಿನ್ನಾಭಿಪ್ರಾಯ
ಕರ್ನಾಟಕದ ಸಚಿವ ಸಂಪುಟದಲ್ಲೇ ಎಸ್‌ಐಆರ್ ಪ್ರಕ್ರಿಯೆ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿರುವುದು ಆತಂಕಕಾರಿ ಸಂಗತಿ. ಸಚಿವ ಸತೀಶ್ ಜಾರಕಿಹೊಳಿ ಅವರು ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ಸಮರ್ಪಕವಾಗಿ ನಡೆದಿದೆ ಎಂಬ ಹೇಳಿಕೆ ನೀಡಿದ್ದರೆ, ಸಚಿವ ಪ್ರಿಯಾಂಕ್ ಖರ್ಗೆ ಅವರು ಕಲಬುರಗಿ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮತದಾರರ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕಲು ಪ್ರಯತ್ನಿಸಿರುವ ಕುರಿತು ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆ ಆಡಳಿತಾರೂಢ ಕಾಂಗ್ರೆಸ್‌ನಲ್ಲಿನ ಗೊಂದಲವನ್ನು ಎತ್ತಿತೋರಿಸಿದೆ ಎಂದು ಚಿಂತಕ ಎಸ್.ಶಿವಸುಂದರ್ ಹೇಳಿದರು.






