ರೈತರಿಗೆ ಆಮಿಷ ಒಡ್ಡಿ ಒಡೆಯುವ ಯೋಜನೆಗಳನ್ನು ಕೈಬಿಡಿ : ಸಿಎಂ ಸಿದ್ದರಾಮಯ್ಯಗೆ ಚಿಂತಕ ಶಿವಸುಂದರ್ ಬಹಿರಂಗ ಪತ್ರ

ಬೆಂಗಳೂರು: ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ಹಾಗೂ ಇತರ ಗ್ರಾಮ ವ್ಯಾಪ್ತಿಯ ಬರೋಬ್ಬರಿ 1,198 ದಿನಗಳ ರೈತರ ಹೋರಾಟಕ್ಕೆ ಐತಿಹಾಸಿಕ ವಿಜಯ ಸಿಕ್ಕಿದ್ದು, ಭೂಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರಕಾರ ಸಂಪೂರ್ಣವಾಗಿ ಕೈಬಿಟ್ಟಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಘೋಷಿಸಿದ್ದಾರೆ.
ಈ ಬೆನ್ನಲ್ಲೇ ಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸಿರುವ ಚಿಂತಕ ಶಿವಸುಂದರ್ ಅವರು, ಕೆಲವು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿರುವ ಅವರು, "ದೇವನಹಳ್ಳಿಯ ರೈತರ ಸುದೀರ್ಘ ಹೋರಾಟವನ್ನು ಗೌರವಿಸಿ 1774 ಎಕರೆ ಭೂ ಸ್ವಾಧೀನವನ್ನು ಕೈಬಿಟ್ಟಿದ್ದೀರಿ. ಧನ್ಯವಾದಗಳು. ತಾವು ಹೋರಾಟದ ಹಿನ್ನೆಲೆಯಿಂದ ಬಂದವರು. ತಮಗೆ ತಿಳಿದಿರುವಂತೆ ಯಾವುದೇ ನಿರ್ದಿಷ್ಟ ಹೋರಾಟ ಅಥವಾ ನಿರ್ದಿಷ್ಟ ಬೇಡಿಕೆಗಳು ಸರಕಾರವು ಅನುಸರಿಸುವ ಜನವಿರೋಧಿ ನೀತಿ-ತತ್ವ-ಧೋರಣೆಗಳ ಪರಿಣಾಮವಾಗಿಯೇ ಹುಟ್ಟುಕೊಳ್ಳುತ್ತವೆ. ಹೀಗಾಗಿ ಪ್ರತಿಯೊಂದು ಜನಪರ ಹೋರಾಟಗಳು ನಿರ್ದಿಷ್ಟ ಬೇಡಿಕೆಗಳಿಗಾಗಿ ನಡೆಯುವ ಹೋರಾಟವಾಗಿರುವ ಜೊತೆಗೆ ಸರ್ಕಾರದ ಅಭಿವೃದ್ಧಿ ಸಿದ್ಧಾಂತದ ವಿರುದ್ಧ ತಾತ್ವಿಕ ಸಂಘರ್ಷವೂ, ವರ್ಗ ಸಂಘರ್ಷವೂ ಆಗಿರುತ್ತದೆ" ಎಂದು ಉಲ್ಲೇಖಿಸಿದ್ದಾರೆ.
ಹೀಗಾಗಿಯೇ ಒಂದು ಹೋರಾಟವು ಸಂಪೂರ್ಣವಾಗಿ ಜಯಶೀಲವಾಗುವುದು ನಿರ್ದಿಷ್ಟ ಬೇಡಿಕೆಯನ್ನು ಈಡೇರಿಸಿದಾಗ ಮಾತ್ರವಲ್ಲ. ಬದಲಿಗೆ ಅಂಥ ಜನವಿರೋಧಿ ನೀತಿ ಅಥವಾ ಯೋಜನೆಯ ಹಿಂದಿನ ನೀತಿ ಮತ್ತು ಧೋರಣೆಗಳನ್ನು ಕೈಬಿಟ್ಟಾಗ, ಆಗ ಒಂದು ಹೋರಾಟದ ಜಯ ಒಂದು ಜನಪರ ತತ್ವದ ಜಯವೂ ಆಗುತ್ತದೆ ಎಂದು ಹೇಳಿದ್ದಾರೆ.
ದೇವನಹಳ್ಳಿ ಭೂ ಸ್ವಾಧೀನ ಹೋರಾಟದಲ್ಲಿ ರೈತರ ನಿರ್ದಿಷ್ಟ ಬೇಡಿಕೆಯು ರೈತರ ಸಮ್ಮತಿಯಿಲ್ಲದೆ ವಶಪಡಿಸಿಕೊಳ್ಳುತ್ತಿದ್ದ 1774 ಎಕರೆ ಕೃಷಿ ಜಮೀನನ್ನು ಕೈಬಿಡಬೇಕು ಎಂಬುದೇ ಆಗಿದ್ದರೂ ಅದರ ಹಿಂದೆ ರೈತರ ಭೂಮಿಗೆ ರೈತರೇ ಸಾರ್ವಭೌಮರು. ಅವರ ಒಪ್ಪಿಗೆ ಇಲ್ಲದೆ ಜಮೀನನ್ನು ಕಸಿಯುವುದು ಪ್ರಜಾತಂತ್ರ ವಿರೋಧಿ ಎಂಬ ತತ್ವವಿತ್ತು. ಬೆಂಗಳೂರಿನ ಆಸುಪಾಸಿನಲ್ಲಿ ಬೃಹತ್ ಬಹುರಾಷ್ಟ್ರೀಯ ಕಂಪನಿಗಳಿಗೆ ಹೂಡಿಕೆಗೆ ಅವಕಾಶ ಮಾಡಿಕೊಡುವುದರಿಂದ ಮಾತ್ರ ರಾಜ್ಯದ ಅಭಿವೃದ್ಧಿಯಾಗುತ್ತದೆ ಎಂಬ ಸರ್ಕಾರದ ಕಾರ್ಪೊರೇಟ್ ಪರ ಅಭಿವೃದ್ಧಿ ತತ್ವಕ್ಕೆ ವಿರುದ್ಧವಾಗಿ ಸ್ವಾವಲಂಬಿ, ಸ್ವಾಭಿಮಾನಿ ಸಣ್ಣ ಹಿಡುವಳಿ ಕೃಷಿ ಆರ್ಥಿಕತೆಯು ಕೂಡ ಅಭಿವೃದ್ಧಿಯೇ ಎಂಬ ಪ್ರತಿಪಾದನೆಯಿತ್ತು ಎಂದು ತಿಳಿಸಿದ್ದಾರೆ.
ಅದನ್ನು ಹಾಳು ಮಾಡುವುದರಿಂದ ನಿರುದ್ಯೋಗ ಹೆಚ್ಚುತ್ತದೆ ಮತ್ತು ಜೀವನೋಪಾಯಗಳು, ನಾಶವಾಗುತ್ತದೆ. ಆದ್ದರಿಂದ ಈಗಿರುವ ಕೃಷಿ ಆರ್ಥಿಕತೆಯನ್ನು ಉಳಿಸುವುದು ಮತ್ತು ಬೆಳೆಸುವುದು ನಿಜವಾದ ಜನಪರ ಅಭಿವೃದ್ಧಿ ಮಾದರಿ ಎಂಬ ಜನಪರ ಅಭಿವೃದ್ಧಿ ದರ್ಶನವಿತ್ತು. KIADB ಬಳಿ ಅನಗತ್ಯವಾಗಿ ಸಾವಿರಾರು ಎಕರೆ ಸಂಗ್ರಹವಾಗಿರುವುದಲ್ಲದೆ, ಅದು ಕಾರ್ಪೊರೇಟ್ ಪರ ದಲ್ಲಾಳಿ ಸಂಸ್ಥೆ ಎಂಬ ವಿಮರ್ಶೆಯೂ ಇದೆ.
ಒಂದು ವೇಳೆ ರೈತರ ಜಮೀನು ಬೇಕೇ ಆಗಿದ್ದಲ್ಲಿ ಅದು ಬೆಂಗಳೂರಿನಲ್ಲಾಗಲೀ, ಬೀದರಿನಲ್ಲಾಗಲೀ, ನೀರಾವರಿ ಜಮೀನಾಗಲೀ ಅಥವಾ ಮಳೆಯಾಶ್ರಿತವಾಗಲೀ ಶೇ.80ರಷ್ಟು ರೈತರ ಒಪ್ಪಿಗೆ ಇಲ್ಲದೆ ವಶ ಮಾಡಿಕೊಳ್ಳಬಾರದೆಂಬ, ಪರಿಹಾರ-ಪುನರ್ವಸತಿ , ಸಾಮಾಜಿಕ ಪರಿಣಾಮ ಅಧ್ಯಯನ ಇತ್ಯಾದಿಗಳುಳ್ಳ 2013 ರಲ್ಲಿ ಕಾಂಗ್ರೆಸ್ ಸರಕಾರವೇ ಜಾರಿ ಮಾಡಿದ್ದ ಕಾಯಿದೆಯ ಪ್ರಕಾರ ಜಾರಿ ಮಾಡಬೇಕೆಂಬ ಅತ್ಯಂತ ಸಾಂವಿಧಾನಿಕ ಪ್ರಜಾತಾಂತ್ರಿಕ ಆಗ್ರಹವಿತ್ತು ಎಂದು ಹೇಳಿದ್ದಾರೆ.
ನಿರಂತರ ಹೊರಾಟಗಳನ್ನು ಮಾಡಬೇಕೆ? :
ರಾಜ್ಯ ಸರ್ಕಾರ ದೇವನಹಳ್ಳಿ ಭೂ ಸ್ವಾಧೀನ ಕೈಬಿಟ್ಟಿರುವುದು ಸಂತಸ ತಂದಿದ್ದರೂ ಅದನ್ನು ಘೋಷಿಸಿರುವಾಗ ಕೊಟ್ಟಿರುವ ಸ್ಪಷ್ಟೀಕರಣಗಳು ಹಾಗೂ ಲಿಖಿತ ಹೇಳಿಕೆಗಳು ಸಂತಸದ ನಡುವೆಯೂ ಆತಂಕವನ್ನು ಹುಟ್ಟಿಸುವಂತಿದೆ. ಭೂ ಸ್ವಾಧೀನ ಕೈಬಿಟ್ಟಿದ್ದಕ್ಕೆ ತಮಗೆ ಧನ್ಯವಾದಗಳನ್ನು ಹೇಳುವ ಹೊತ್ತಿನಲ್ಲೂ ಕೆಲವು ಗಂಭೀರ ಪ್ರಶ್ನೆಗಳನ್ನು ಹುಟ್ಟಿಹಾಕುತ್ತಿದೆ ಎಂದು ಉಲ್ಲೇಖಿಸಿದ್ದಾರೆ.
► ಪತ್ರಿಕಾಗೋಷ್ಠಿಯಲ್ಲೂ, ಆ ನಂತರದ ನಿಮ್ಮ ಲಿಖಿತ ಹೇಳಿಕೆಯಲ್ಲೂ ದೇವನಹಳ್ಳಿಯ ರೈತರ ಹೊರಾಟವನ್ನು ಐತಿಹಾಸಿಕ ಎಂದು ತಾವು ಬಣ್ಣಿಸಿದ್ದೀರಿ. ಆದರೆ ಅದೇ ಸಮಯದಲ್ಲಿ "ರೈತರ ಹೋರಾಟಕ್ಕೆ ಮನ್ನಣೆ ಕೊಟ್ಟು ಭೂ ಸ್ವಾಧೀನ ಕೈಬಿಡುತ್ತಿರುವುದು ಕೇವಲ ಈ ಹೋರಾಟಕ್ಕೆ ಮಾತ್ರ ಸೀಮಿತ" ಎಂದು ಪದೇ ಪದೇ ಹೇಳಿದ್ದೀರಿ". ಅಂದರೆ ರಾಜ್ಯದ ಇತರ ಕಡೆಯೂ ರೈತರು, ಒಂದು ವೇಳೆ ತಮ್ಮ ಒಪ್ಪಿಗೆ ಇಲ್ಲದೆ ಭೂ ಸ್ವಾಧೀನ ಮಾಡಿಕೊಂಡರೆ ದೇವನಹಳ್ಳಿಯ ರೈತರಂತೆ ಸಾವಿರಾರು ದಿನಗಳು ಅತಂತ್ರ, ಅಭದ್ರತೆ ಮತ್ತು ನಿರಂತರ ಹೊರಾಟಗಳನ್ನು ಮಾಡಬೇಕೆ? ಎಂದು ಅವರು ಪ್ರಶ್ನಿಸಿದ್ದಾರೆ.
► ಇಲ್ಲಿ ನೀವು ಹೋರಾಟಕ್ಕೆ ಮಣಿದ ಕಾರಣವೇ ರೈತರ ಒಪ್ಪಿಗೆ ಇಲ್ಲದೆ ಭೂ ಸ್ವಾಧೀನ ಮಾಡಿಕೊಂಡಿದ್ದರಿಂದಲ್ಲವೇ? ಹೀಗಾಗಿ ದೇವನಹಳ್ಳಿಯಲ್ಲಿ ಮಾತ್ರವಲ್ಲ. ಎಲ್ಲಿಯೂ ರೈತರ ಸಮ್ಮತಿ ಇಲ್ಲದೆ ಭೂ ಸ್ವಾಧೀನ ಮಾಡಿಕೊಳ್ಳಬಾರದೆಂಬ ಪಾಠವನ್ನು ಸರಕಾರವೇಕೆ ನಿರಾಕರಿಸುತ್ತದೆ?
► ಈಗಾಗಲೇ ಹೇಳಿದಂತೆ ದೇವನಹಳ್ಳಿ ರೈತ ಹೋರಾಟ 1774 ಎಕರೆ ಭೂ ಸ್ವಾಧೀನ ವಿರುದ್ಧವೇ ಆಗಿದ್ದರೂ ಅದು ಇಷ್ಟು ಗಟ್ಟಿಯಾಯಾಗಿ ನಿಂತದ್ದೇ ಕಾರ್ಪೊರೇಟ್ ಅಭಿವೃದ್ಧಿ ಮಾದರಿಗೆ ಪ್ರತಿಯಾಗಿ ರೈತ ಪರ್ಯಾಯ ಅಭಿವೃದ್ಧಿಯನ್ನು ಮುಂದಿಡುವ ಮೂಲಕ. ಮತ್ತು ಅದಕ್ಕೆ ರಕ್ಷಣೆ ಮತ್ತು ಪೋಷಣೆಯನ್ನು ಕೇಳುವ ಮೂಲಕ.
ಆದರೆ ತಾವು ದೇವನಹಳ್ಳಿ ಭೂ ಸ್ವಾಧೀನ ಕೈಬಿಡುವ ಹೊತ್ತಿನಲ್ಲೇ, "ದೇವನಹಳ್ಳಿ ತಾಲೂಕು ಬೆಂಗಳೂರಿಗೆ ಹತ್ತಿರದ್ದಲ್ಲಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಲ್ಲಿಯೇ ಇದೆ. ರಾಜ್ಯದ ಪ್ರತಿಯೊಬ್ಬರ ವರಮಾನ ಹೆಚ್ಚಳವಾಗಬೇಕಿದ್ದರೆ ಅಭಿವೃದ್ದಿ ಕಾರ್ಯ ನಡೆಯಬೇಕಾಗಿದೆ. ಹೊಸ ಕೈಗಾರಿಕೆಗಳ ಪ್ರಾರಂಭಕ್ಕೆ, ಬಂಡವಾಳ ಹೂಡಿಕೆಗೆ ಜಮೀನಿನ ಅಗತ್ಯವಿದೆ. ಜಮೀನು ಸ್ವಾಧೀನಪಡಿಸಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಸರ್ಕಾರ ನೀಡಬೇಕಾಗುತ್ತದೆ," ಎಂದು ಘೋಷಿಸಿದ್ದೀರಿ.
ಆ ಮೂಲಕ ತಮ್ಮ ಸರ್ಕಾರವು ಸಣ್ಣ ಹಿಡುವಳಿ ಸ್ವಾಭಿಮಾನಿ ಕೃಷಿಯನ್ನು ಅಭಿವೃದ್ಧಿ ಮಾದರಿಯಾಗಿ ಒಪ್ಪಿಕೊಳ್ಳದೆ ಕಾರ್ಪೊರೇಟ್ ಬಂಡವಾಳ ಶಾಹಿ ಅಭಿವೃದ್ಧಿ ಮಾದರಿಯನ್ನೇ ಕಟ್ಟುನಿಟ್ಟಾಗಿ ಮುಂದುವರೆಸುವುದಾಗಿ ಸ್ಪಷ್ಟ ಪಡಿಸಿದ್ದೀರಿ. ಆ ಮೂಲಕ ದೇವನಹಳ್ಳಿ ರೈತರ ಐತಿಹಾಸಿಕ ಹೋರಾಟವನ್ನು ಕೇವಲ ಆರ್ಥಿಕ ಬೇಡಿಕೆಯಾಗಿ ಪುರಸ್ಕರಿಸಿದ್ದರೂ, ಒಂದು ಜನಪರ್ಯಾಯ ಅಭಿವೃದ್ಧಿ ಮಾದರಿಯಾಗಿ ಸೋಲಿಸಿದ್ದೀರಿ. ಇದು ಅನಿವಾರ್ಯವಾದರೇ ಒಂದು ಕಡೆ ಬಿಟ್ಟುಕೊಟ್ಟರೂ ಉಳಿದೆಡೆ ಬೇಲಿ ಹಾಕಿಕೊಳ್ಳುವ ಬಂಡವಾಳಶಾಹಿ ತಂತ್ರವಲ್ಲವೇ?
► ದೇವನಹಳ್ಳಿ ರೈತರ ಹೊರಾಟವನ್ನು ಚಾರಿತ್ರಿಕವೆಂದು ಬಣ್ಣಿಸಿದ್ದೀರಿ. ಅದು ಸಾಧ್ಯವಾದದ್ದೇ ಅಲ್ಲಿನ ರೈತರ ಬಂಡೇಯಂತ ಐಕ್ಯತೆಯಿಂದ. ಕಳೆದ ಮೂರು ವರ್ಷಗಳ ಹೋರಾಟದಲ್ಲಿ ಭಿನ್ನ ಸ್ವರವೇ ಕೇಳಿ ಬಂದಿರಲಿಲ್ಲ. ಆದರೆ ತಮ್ಮ ಸರ್ಕಾರ ಜುಲೈ 4 ರಂದು ಹತ್ತು ದಿನಗಳ ಗಡುವು ಕೇಳಿದ ಮೇಲೆ ದಿಢೀರನೆ ದೇವನಹಳ್ಳಿ ರೈತರ ಹೆಸರಿನಲ್ಲಿ ಪುಢಾರಿಗಳ ಮತ್ತು ರಿಯಲ್ ಎಸ್ಟೇಟ್ ದಲ್ಲಾಳಿಗಳ ಗುಂಪೊಂದು ಹುಟ್ಟಿಕೊಂಡಿತು. ಮತ್ತು ತಾವು ಹೆಚ್ಚಿನ ದರಕ್ಕೆ ಜಮೀನು ಮಾರಿಕೊಳ್ಳಲು ಸಿದ್ಧರಿದ್ದೇವೆ ಎಂದು ಘೋಷಿಸಿಬಿಟ್ಟರು. ಅವರಿಗೆ ಸುಲಭವಾಗಿ ಕೈಗಾರಿಕಾ ಮಂತ್ರಿಗಳ ಮತ್ತು ಮುಖ್ಯಮಂತ್ರಿಗಳ ಭೇಟಿ ಮತ್ತು ಸಲಹೆಗಳೂ ದಕ್ಕಿಬಿಟ್ಟವು. ಹೀಗಾಗಿ ಅದರ ಹಿಂದಿನ ಶಕ್ತಿಗಳ ಮೂಲಗಳು ತಮ್ಮ ಸರ್ಕಾರದಲ್ಲೇ ಇದ್ದಿರುವುದು ಸ್ಪಷ್ಟ ಹೋರಾಟದ ಹಿನ್ನೆಲೆಯಿಂದ ಬಂದ ಮುಖ್ಯಮಂತ್ರಿ ಇರುವ ಸರ್ಕಾರವೊಂದು ಐತಿಹಾಸಿಕ ರೈತ ಹೋರಾಟದಲ್ಲಿ ಒಡಕನ್ನುಂಟು ಮಾಡಿ ಸರ್ಕಾರದ ಯೋಜನೆಗಳನ್ನು ಮುಂದುವರೆಸುವ ಕುತಂತ್ರ ನಡೆಸುವುದು ಸರಿಯೇ?
ಇದು ಅಷ್ಟಕ್ಕೇ ನಿಂತಿಲ್ಲ. ಭೂ ಸ್ವಾಧೀನ ರದ್ದು ಮಾಡುವಾಗ ತಾವು ಕೊಟ್ಟ ಹೇಳಿಕೆಯಲ್ಲೂ ಮತ್ತು ಆ ನಂತರ ಎಂ.ಬಿ. ಪಾಟೀಲರೂ ಮಾಡಿದ ಘೋಷಣೆಯಲ್ಲೂ,"ಕೆಲವು ರೈತರು ಜಮೀನು ನೀಡಲು ಸಿದ್ಧರಿರುವುದಾಗಿ ಮುಂದೆ ಬಂದಿದ್ದಾರೆ. ಜಮೀನು ನೀಡಲು ಇಚ್ಚಿಸುವವರ ಜಮೀನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲಿದ್ದು, ಅವರಿಗೆ ಹೆಚ್ಚಿನ ಪರಿಹಾರ ಮತ್ತು ಅಭಿವೃದ್ಧಿಪಡಿಸಿದ ಜಮೀನು ನೀಡಲಾಗುವುದು" ಎಂದು ಘೋಷಿಸಲಾಗಿದೆ.
► ಸ್ವಇಚ್ಛೆಯಿಂದ ಜಮೀನು ಕೊಡುವ ರೈತರನ್ನು ಕೊಡಬೇಡಿ ಎಂದು ಚಳವಳಿಗಳು ಹೇಳಲಾಗದಾದರೂ, ಸುತ್ತಮುತ್ತಲೂ ವಶಪಡಿಸಿಕೊಂಡಿರುವ ಜಮೀನಿಗೆ ಈವರೆಗೂ ಸರಿಯಾದ ಪರಿಹಾರ ಕೊಡದ ಸರ್ಕಾರ ಇದಕ್ಕೆ ಮಾತ್ರ ವಿಶೇಷ ಮುತುವರ್ಜಿಯಿಂದ ಹೆಚ್ಚಿನ ಪರಿಹಾರ ಇತ್ಯಾದಿ ಆಮಿಷ ತೋರುತ್ತಿರುವುದು ಏಕೆ?
► ಇದು ಸರ್ಕಾರ ಮೇಲ್ನೋಟಕ್ಕೆ ರೈತ ಚಳವಳಿಗೆ ಬಗ್ಗಿದಂತೆ ಕಂಡರೂ ಒಳಗೆ ಶತಾಯ ಗತಾಯ ಜಮೀನು ಸ್ವಾಧೀನಕ್ಕೆ ಸಾಮಾ, ಬೇಧ ಮತ್ತು ದಂಡೋಪಾಯಗಳನ್ನು ಬಳಸಲು ಹಠ ತೊಟ್ಟಂತೆ ಕಾಣುತ್ತಿಲ್ಲವೇ?
► ಕೃಷಿಯಲ್ಲಿ ಜೀವನೋಪಾಯ ಕಷ್ಟವೆಂಬ ಪರಿಸ್ಥಿತಿ ತಂದಿಟ್ಟವರೂ ನೀವೇ. ಜಮೀನು ಮಾರಿದರೆ ಸುಖದ ಬದುಕೆಂಬ ಬಲೂನು ಬಿಡುತ್ತಿರುವರೂ ನೀವೇ. ಹೀಗೆ ರೈತರನ್ನು ಒಡೆಯುವುದು ಪ್ರಜಾತಂತ್ರವೇ? ಸಮಾಜವಾದವೇ?
► ಜಮೀನು ಕೊಡದ ರೈತರ ಕೃಷಿ ಬದುಕನ್ನು ಹಸನು ಮಾಡುವ ಯಾವ ಕಾಳಜಿಯನ್ನು ತೋರದೆ ಜಮೀನು ಕೊಡುವ ರೈತರ ಕಲ್ಯಾಣವನ್ನು ಆದ್ಯತೆಯ ಮೇಲೆ ಪರಿಗಣಿಸುವುದಾಗಿ ಘೋಷಿಸುವುದು ಒಡೆದಾಳುವ ತಂತ್ರವಲ್ಲವೇ?
► ಅಭಿವೃದ್ಧಿ ಮಾದರಿ ಯಾವುದೆಂಬುದನ್ನು ಜನರ, ರೈತರ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳದೆ ಬಂಡವಾಳ ಶಾಹಿ ಅಭಿವೃದ್ಧಿ ಮಾದರಿಯನ್ನು ಹೇರುವುದು ಜನತಂತ್ರವೇ? ಎಂದು ಶಿವಸುಂದರ್ ಅವರು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿಗಳೇ, ಬೃಹತ್ ಬಂಡವಾಳ ಶಾಹಿ ಅಭಿವೃದ್ಧಿ ಮಾದರಿ ಮತ್ತು ಸಣ್ಣ ರೈತಾಪಿ ಸ್ವಾಭಿಮಾನಿ ಅಭಿವೃದ್ಧಿ ಮಾದರಿಯ ನಡುವೆ ನಡೆಯುತ್ತಿರುವ ಈ ಯುದ್ಧದಲ್ಲಿ ದೇವನಹಳ್ಳಿಯ 1774 ಎಕರೆ ಜಮೀನು ಭೂ ಸ್ವಾಧೀನ ವಿರೋಧಿ ಹೋರಾಟ ಒಂದು ಕದನವಷ್ಟೇ. ತಮ್ಮ ಸರ್ಕಾರ ಭೂ ಸ್ವಾಧೀನ ರದ್ದನ್ನು ಘೋಷಿಸುವಾಗ ಕೊಟ್ಟಿರುವ ಸ್ಪಷ್ಟೀಕರಣಗಳು, ಒಂದು ದೇವನಹಳ್ಳಿ ಕದನದಲ್ಲಿ ಸೋಲೊಪ್ಪಿಕೊಂಡು, ಇಡೀ ಯುದ್ಧದಲ್ಲಿ ಮಾತ್ರ ಇಡೀ ರಾಜ್ಯದ ರೈತರನ್ನು ಸೋಲಿಸಿ ಬಂಡವಾಳ ಶಾಹಿಗಳನ್ನು ಗೆಲ್ಲಿಸುವ ಯೋಜನೆಯಂತೆ ಕಾಣುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬಲವಂತದ ಭೂ ಸ್ವಾಧೀನ ಮಾಡುವ KIADB ಕಾಯಿದೆ ರದ್ದು ಮಾಡಿ :
ಈ ಕೂಡಲೇ KIADB ವಶದಲ್ಲಿರುವ ಭೂಮಿಗಳ ಆಡಿಟ್ ಮಾಡಿಸಿ. ಬಲವಂತದ ಭೂ ಸ್ವಾಧೀನ ಮಾಡುವ KIADB ಕಾಯಿದೆಯನ್ನು ಮತ್ತು ಸಂಸ್ಥೆಯನ್ನು ರದ್ದು ಮಾಡಿ. ದೇವನಹಳ್ಳಿಯಲ್ಲಿ ಮಾತ್ರವಲ್ಲದೆ ರಾಜ್ಯದಲ್ಲಿ ಎಲ್ಲಿಯೇ ಆದರೂ ರೈತರ ಜಮೀನುಗಳನ್ನು ಶೇ. 80 ರೈತರ ಸಮ್ಮತಿಯಿಲ್ಲದೆ ಸ್ವಾಧೀನ ಮಾಡಿಕೊಳ್ಲಬಾರದೆಂಬ ಕಾಂಗ್ರೆಸ್ ಸರ್ಕಾರವೇ ತಂದ 2013 ರ ಮೂಲ ಕಾಯಿದೆಯನ್ನೇ ಜಾರಿ ಮಾಡಿ ಎಂದು ಅವರು ಆಗ್ರಹಿಸಿದ್ದಾರೆ.
ರೈತರಿಗೆ ಆಮಿಷ ಒಡ್ಡಿ ಒಡೆಯುವ ಯೋಜನೆಗಳನ್ನು ಕೈಬಿಡಿ. ಸಮಗ್ರ ಸಣ್ಣ ಹಿಡುವಳಿ, ಭೂ ಹೀನ ರೈತಾಪಿಯ ಸ್ವಾಭಿಮಾನಿ ಸ್ವಾವಲಂಬಿ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಿ. ಉದ್ಯೋಗ ಸೃಷ್ಟಿಸದ ಬೃಹತ್ ಉದ್ದಿಮೆಗಳ ನೇತೃತ್ವದ ಕೈಗಾರಿಕಾ ಅಭಿವೃದ್ಧಿಯನ್ನು ಕೈಬಿಟ್ಟು, ಅತಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಆಯಾ ಪ್ರದೇಶಗಳ ಬೇಡಿಕೆಯಾಧಾರಿತ ಸಣ್ಣ, ಮಧ್ಯಮ ಮತ್ತು ಕಿರು ಕೈಗಾರಿಕೆಗಳನ್ನು ಪ್ರೋತ್ಸಾಹಿಸಿ ಎಂದು ಶಿವಸುಂದರ್ ಒತ್ತಾಯಿಸಿದ್ದಾರೆ.







