ಎಸ್‍ಐಆರ್ ಎನ್ನುವುದು ರಕ್ತ ರಹಿತ ಯುದ್ಧ : ಶಿವಸುಂದರ್

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿಂದಲೂ ನಿರಂತರವಾಗಿ ದೇಶದ ದಲಿತ, ದಮನಿತರ ಮೇಲೆ ಯುದ್ಧ ಮಾಡುತ್ತಲೇ ಇದ್ದಾರೆ. ಇರಾನ್ ಮೇಲೆ ಅಮೆರಿಕಾ, ಇಸ್ರೇಲ್ ಮಾಡುತ್ತಿರುವ ಯುದ್ಧಕ್ಕಾದರೂ ಕದನ ವಿರಾಮ ಇದೆ. ಆದರೆ, ಈ ದೇಶದ ಜನರ ಮೇಲೆ ಮೋದಿ ಮಾಡುತ್ತಿರುವ ಯುದ್ಧಕ್ಕೆ ಕದನ ವಿರಾಮವೇ ಇಲ್ಲ. ಅದರಲ್ಲೂ ಅವರ ಅತಿದೊಡ್ಡ ಸಮರ ಎಂದರೆ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ(ಎಸ್‍ಐಆರ್)ಯಾಗಿದೆ ಎಂದು ಅಂಕಣಕಾರ, ಚಿಂತಕ ಶಿವಸುಂದರ್ ಲೇವಡಿ ಮಾಡಿದ್ದಾರೆ.
ರವಿವಾರ ನಗರದ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ‘ರಾಜ್ಯ ನದಾಫ್ ಪಿಂಜಾರ ಸಂಘ’ ಆಯೋಜಿಸಿದ್ದ ಎಸ್‍ಐಆರ್ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಸ್‍ಐಆರ್ ಎನ್ನುವುದು ರಕ್ತ ರಹಿತ ಯುದ್ಧ. ಎಸ್‍ಐಆರ್‌ನಿಂದ ಅತಿಹೆಚ್ಚು ದಾಳಿಗೆ ಗುರಿಯಾಗಿರುವುದು ಎಲ್ಲ ಜಾತಿ, ಧರ್ಮಗಳ ಮಹಿಳೆಯರು. ಭಾರತದಲ್ಲಿ ದಲಿತ, ದಮನಿತ ಹಾಗೂ ಬ್ರಾಹ್ಮಣರಲ್ಲದ ಇತರೇ ಸಮುದಾಯಗಳ ಮೇಲೆ ಮೂರು ಸಾವಿರ ವರ್ಷಗಳಿಂದಲೂ ಯುದ್ಧ ನಡೆಯುತ್ತಲೇ ಇದೆ ಎಂದರು.
ನಮ್ಮ ದೇಶದಲ್ಲಿ ಸ್ವಾತಂತ್ರ್ಯ ನಡೆದಾಗ ಎರಡು ಸಿದ್ದಾಂತಗಳ ನಡುವೆ ಸಂಘರ್ಷ ಆಯಿತು. ಈ ದೇಶದಲ್ಲಿ ಎಲ್ಲರು ಸಮಾನರು, ಎಲ್ಲಿರಿಗೂ ಸಮಾನವಾದ ರಾಜಕೀಯ ಹಕ್ಕು ಇರಬೇಕು ಎಂದು ಹೇಳುವ ಅಂಬೇಡ್ಕರ್ ವಾದ. ಮತ್ತೊಂದು ಈ ದೇಶ ಹಿಂದೂಗಳಿಗೆ ಮಾತ್ರ ಸೇರಬೇಕು. ಉಳಿದವರು ಇಲ್ಲಿ ಅನ್ಯರಾಗಿ ಎರಡನೇ ದರ್ಜೆ ಪ್ರಜೆಗಳಾಗಿ ಬದುಕಬೇಕು ಎನ್ನುವ ಸಾವರ್ಕರ್ ವಾದ. ಈ ಎರಡೂ ಸಂಘರ್ಷಗಳ ನಡುವೆ ಅಂಬೇಡ್ಕರ್ ಗೆದ್ದರು ಎಂದು ಶಿವಸುಂದರ್ ತಿಳಿಸಿದರು.
ಎಸ್‍ಐಆರ್ ಪೌರತ್ವ ಪರಿಶೀಲನೆ ಮಾಡುತ್ತಿದೆ. ಚುನಾವಣಾ ಆಯೋಗ ಎಸ್‍ಐಆರ್ ತಂದಿದ್ದೇ ಸಾಧ್ಯವಾದಷ್ಟು ಹೆಚ್ಚು ಜನರನ್ನು ಹೊರಗೆ ತಳ್ಳಬೇಕೆಂದು. ಅದರಲ್ಲೂ ಮುಖ್ಯವಾಗಿ ಯಾವಯಾವ ರಾಜ್ಯಗಳಲ್ಲಿ ಬಿಜೆಪಿ ಗೆಲ್ಲಲು ಕಷ್ಟ ಇದಿಯೋ, ಅಂತಹ ಕಡೆ ಎಸ್‍ಐಆರ್ ಬಳಸಿ ಸಂಬವನೀಯ ಬಿಜೆಪಿಗರನ್ನು ಹೆಚ್ಚು ಮಾಡುವುದು ಇದರ ಹಿಂದಿನ ಉದ್ದೇಶವಾಗಿದೆ ಎಂದು ಶಿವಸುಂದರ್ ಹೇಳಿದರು.
ಕಾರ್ಯಕ್ರಮದಲ್ಲಿ ಪಿಂಜಾರ ಸಂಘದ ಹಿನಾಯತುಲ್ಲಾ, ರಹಮಾನ್ ಪಿ., ಮುನಾಫ್, ರಿಯಾಝ್, ಜಿ.ಡಿ. ನದಾಫ್ ಸೇರಿದಂತೆ ಹಲವರು ಭಾಗವಹಿಸಿದ್ದರು.






