ಅಪರಾಧಿಗಳ ಜೊತೆ ಸಿಎಂ ಕುಳಿತರೆ ನ್ಯಾಯ ಸಿಗುವುದಾದರೂ ಹೇಗೆ?: ಶೋಭಾ ಕರಂದ್ಲಾಜೆ

ಬೆಂಗಳೂರು : ‘ಎಫ್‍ಐಆರ್ ದಾಖಲಾಗಿರುವ ಶಾಸಕ ನಾರಾ ಭರತ್ ರೆಡ್ಡಿ ಜೊತೆ ಕುಳಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಾಡಿದ್ದು ಸರಿಯೇ?. ಸಿಎಂ ಅವರೇ ಅಪರಾಧಿಗಳ ಜೊತೆ ಕುಳಿತರೆ ನ್ಯಾಯ ಹೇಗೆ ಸಿಗುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇಂದಿಲ್ಲಿ ಪ್ರಶ್ನಿಸಿದ್ದಾರೆ.
ರವಿವಾರ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಅವರೇ ಅಪರಾಧಿಗಳ ಜತೆಗೆ ಕುಳಿತರೆ ಯಾರನ್ನು ನ್ಯಾಯ ಕೇಳಬೇಕು. ಇದಕ್ಕೆ ಉತ್ತರ ನೀಡುವವರು ಯಾರು. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವವರು ಯಾರು ಎಂದು ಇದೇ ವೇಳೆ ವಾಗ್ದಾಳಿ ನಡೆಸಿದರು.
ಬಿಡ್ಡಿಂಗ್‍ಗೆ ಬಲಿ: ಸಚಿವ ಝಮೀರ್ ಅಹ್ಮದ್ ಖಾನ್ ಅವರ ಬಿಡ್ಡಿಂಗ್ ಕಾರಣಕ್ಕೆ ಎಸ್ಪಿ ಪವನ್ ನೆಜ್ಜೂರ್ ಬಲಿಪಶುವಾಗಿದ್ದಾರೆ. ಬಳ್ಳಾರಿ ಗುಂಪು ಘರ್ಷನೆ ಸಂದರ್ಭದಲ್ಲಿ ಎಸ್ಪಿ ಪವನ್ ನೆಜ್ಜೂರ್ ಸ್ಥಳದಲ್ಲಿದ್ದರೆಂದು ವಿಡಿಯೋ ಬಿಡುಗಡೆ ಮಾಡಲಾಗಿದೆ. ಸರಕಾರ ಈ ವಿಷಯದಲ್ಲಿ ಸುಳ್ಳು ಹೇಳುತ್ತಿದೆ. ಬಳ್ಳಾರಿಯನ್ನು ನೀವೇನು ಮಾಡಲು ಹೊರಟಿದ್ದೀರಿ ಸಚಿವ ಝಮೀರ್ ಅಹ್ಮದ್ ಖಾನ್ ಅವರೇ ಎಂದು ಶೋಭಾ ಕರಂದ್ಲಾಜೆ ಕೇಳಿದರು.
ವರ್ಗಾವಣೆಯಲ್ಲಿ ಭ್ರಷ್ಟಾಚಾರ: ಎಸ್ಪಿ ದಿಢೀರ್ ಅಮಾನತ್ತು ಸೇರಿದಂತೆ ಎಲ್ಲ ಅಂಶಗಳು ಬೆಳಕಿಗೆ ಬರಬೇಕಿದೆ. ಕರ್ನಾಟಕ ಪೊಲೀಸ್ ವ್ಯವಸ್ಥೆಗೆ ದೇಶದಲ್ಲಿ ಒಳ್ಳೆಯ ಹೆಸರಿದೆ. ಇದನ್ನು ಬದಲಾಯಿಸುತ್ತಿರುವುದು ಕಾಂಗ್ರೆಸ್ ಸರಕಾರ. ಭ್ರಷ್ಟಾಚಾರ ಇಲ್ಲದೇ ವರ್ಗಾವಣೆ ಆಗುವುದಿಲ್ಲ. ಭ್ರಷ್ಟಾಚಾರ ಇಲ್ಲದೇ ಭಡ್ತಿ ಸಿಗುವುದಿಲ್ಲ. ಈ ಹಂತಕ್ಕೆ ಸರಕಾರವನ್ನು ಕೊಂಡೊಯ್ಯಲಾಗುತ್ತಿದೆ ಎಂದು ದೂರಿದರು.







