ನಮ್ಮದು ಸರ್ವರ, ಸರ್ವೋದಯದ ಬಜೆಟ್: ಸಿದ್ದರಾಮಯ್ಯ

ಬೆಂಗಳೂರು: ‘ನಮ್ಮದು ಮುಸ್ಲಿಮ್ ಬಜೆಟ್ ಅಲ್ಲ. ಇದು ಸರ್ವರ, ಸರ್ವೋದಯದ ಬಜೆಟ್ ಆಗಿದ್ದು, ಎಲ್ಲ ಕಲ್ಯಾಣಕ್ಕಾಗಿ ಆಯವ್ಯಯದಲ್ಲಿ ಒತ್ತು ನೀಡಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಪ್ರಸ್ತಕ ಸಾಲಿನ ಅಭಿವೃದ್ಧಿ ಬಜೆಟ್ ಅನ್ನು ಪ್ರತಿಪಕ್ಷಗಳು ಟೀಕಿಸಿರುವುದಲ್ಲದೆ, ಮುಸ್ಲಿಮ್ ಬಜೆಟ್ ಎಂದೆಲ್ಲಾ ಹೇಳಿದ್ದಾರೆ. ಆದರೆ, ಇದು ಸರ್ವೋದಯದ ಬಜೆಟ್, ‘ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ’ ಎಂಬ ರಾಷ್ಟ್ರಕವಿ ಕುವೆಂಪು ಅವರ ಕವನದ ಮೂಲಕ ಬಿಜೆಪಿ ಸದಸ್ಯರಿಗೆ ತೀರುಗೇಟು ನೀಡಿದರು.
ಇನ್ನೆಷ್ಟು ದಿನ ಧರ್ಮ ಧರ್ಮಗಳ ನಡುವೆ, ಜಾತಿ ಜಾತಿಗಳ ನಡುವೆ ದ್ವೇಷ, ಅಸಹನೆ ಹುಟ್ಟುಹಾಕುತ್ತೀರಿ. ಕುವೆಂಪು ಕಡೆಯದಾಗಿ ಸರ್ವೋದಯವಾಗಲಿ ಎನ್ನುತ್ತಾರೆ. ನಾವು ಬಜೆಟ್ ಪುಸ್ತಕದಲ್ಲಿ ಅದನ್ನೇ ಹೇಳಿದ್ದೇವೆ ಎಂದ ಅವರು, ಸಂವಿಧಾನದ ಕಡೆಗೆ ಎಲ್ಲರನ್ನು ಕೊಂಡೊಯ್ಯುವುದು ನಮ್ಮದು ಉದ್ದೇಶ. ದಮನಿತರ ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸಿ ಈ ವರ್ಗಗಳಿಗೆ ನ್ಯಾಯ ಕೊಡುವುದು ಸಂವಿಧಾನದ ಆಶಯ. ಆ ಹಾದಿಯಲ್ಲೇ ನಾವು ಮುನ್ನಡೆದಿದ್ದೇವೆ ಎಂದು ಹೇಳಿದರು.
ದೇಶದ ಜನಸಂಖ್ಯೆಯಲ್ಲಿ ಅಲ್ಪಸಂಖ್ಯಾತರ ಪ್ರಮಾಣ ಶೇ.15 ರಷ್ಟಿದೆ. ಇಷ್ಟು ದೊಡ್ಡ ಜನಸಂಖ್ಯೆಯ ಸಮುದಾಯದ ಕಲ್ಯಾಣಕ್ಕೆ ಈ ಬಾರಿ ಬಜೆಟ್‍ನಲ್ಲಿ 4514 ಕೋಟಿ ರೂ.ಗಳನ್ನು ಒದಗಿಸಿದ್ದೇವೆ. ಇದು ಒಟ್ಟಾರೆ ಬಜೆಟ್‍ನಲ್ಲಿ ಶೇ. 1.1 ರಷ್ಟು ಮಾತ್ರ. ಇಷ್ಟಕ್ಕೆ ಇಷ್ಟೊಂದು ದ್ವೇಷ ಏಕೆ?. ಶೇ.15 ರಷ್ಟಿರುವ ಜನರನ್ನು ಅಭಿವೃದ್ಧಿಯ ಹಾದಿಗೆ ತರದೇ ಜಿಎಸ್ಡಿಪಿ ಮತ್ತು ಜಿಡಿಪಿಗಳನ್ನು ಹೆಚ್ಚು ಮಾಡಲು ಹೇಗೆ ಸಾಧ್ಯ ಎಂದು ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು.
ಮುಸ್ಲಿಮ್ ಸಮುದಾಯದವರಿಗೆ ಕಾಮಗಾರಿಗಳಲ್ಲಿ ಗುತ್ತಿಗೆ ನೀಡುವುದಕ್ಕೂ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಇದು ಸರಿಯಲ್ಲ. ಒಟ್ಟಾರೆ ನಮ್ಮ ಸರಕಾರವು ನಾಡಿನ ಸಮಗ್ರ ಅಭಿವೃದ್ಧಿಗಾಗಿ ದುಡಿಯುತ್ತಿದೆ. ಸುಸ್ಥಿರ ಅಭಿವೃದ್ಧಿಯತ್ತ ಕರ್ನಾಟಕವನ್ನು ಮುನ್ನಡೆಸುವುದು ನಮ್ಮ ಗುರಿ. ಮುಂದಿನ ದಿನಗಳಲ್ಲಿ ರಾಜಸ್ವ ಕೊರತೆಯನ್ನು ಹೋಗಲಾಡಿಸಿ ರೆವಿನ್ಯೂ ಸರ್‍ಪ್ಲಸ್ ಬಜೆಟ್ ಮಂಡಿಸುವುದೂ ಕೂಡ ನಮ್ಮ ಧ್ಯೇಯ ಎಂದು ಹೇಳಿದರು.
ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಗಾಗಿ ನಮ್ಮ ಸರ್ಕಾರ ಈ ಬಾರಿ 42,018 ಕೋಟಿ ರೂ. ಗಳನ್ನು ಒದಗಿಸಿದೆ. ನಾವು ಪರಿಶಿಷ್ಟ ಸಮುದಾಯಗಳ ಏಳಿಗೆಯನ್ನು ಪ್ರಾಮಾಣಿಕವಾಗಿ ಬಯಸುವವರು. ನಮ್ಮ ಕಾಳಜಿ ಕೇವಲ ಬಾಯಿ ಮಾತಿನದಲ್ಲ. 2020-21 ರಿಂದ 2022-23 ರವರೆಗೆ 3 ವರ್ಷಗಳ ಅವಧಿಯಲ್ಲಿ ಹಿಂದಿನ ಬಿಜೆಪಿ ಸರಕಾರ ಎಸ್ಸಿಪಿ ಮತ್ತು ಟಿಎಸ್ಪಿಗಾಗಿ 80,415 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಆದರೆ, ನಾವು 2023 ರಿಂದ ಈಗ ಮಂಡಿಸಿರುವ ಬಜೆಟ್‍ವರೆಗೆ 1,15,509 ಕೋಟಿ ರೂಪಾಯಿಗಳನ್ನು ಒದಗಿಸಿದ್ದೇವೆ. ಬಿಜೆಪಿಯ 3 ವರ್ಷಗಳಿಗೆ ಹೋಲಿಸಿದರೆ ನಾವು 35,094 ಕೋಟಿ ರೂಗಳನ್ನು ಹೆಚ್ಚಿಗೆ ಒದಗಿಸಿದ್ದೇವೆ ಎಂದು ವಿವರಿಸಿದರು.







