ಬೆಂಗಳೂರಿನಲ್ಲಿ ನಿಗೂಢ ಸ್ಫೋಟ | ಮೃತ ಬಾಲಕನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ : ಸಿದ್ದರಾಮಯ್ಯ

ಬೆಂಗಳೂರು : ಬೆಂಗಳೂರಿನ ಚಿನ್ನಯ್ಯಪಾಳ್ಯದಲ್ಲಿ ನಡೆದ ನಿಗೂಢ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶೀಲನೆ ನಡೆಸಿದ್ದು, ದುರ್ಘಟನೆಯಲ್ಲಿ ಮೃತಪಟ್ಟ ಬಾಲಕನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಅವರು, ಸ್ಥಳದಲ್ಲಿದ್ದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಂದ ಮಾಹಿತಿ ಘಟನೆಗೆ ಸಂಬಂಧಿಸಿದಂತೆ ಪಡೆದುಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಇವತ್ತು ಅಹಿತಕರ ಘಟನೆ ನಡೆದಿದೆ. ದುರ್ಘಟನೆಯಲ್ಲಿ ಮುಬಾರಕ್ ಎಂಬ ಬಾಲಕ ಮೃತಪಟ್ಟಿದ್ದು, ಇವರ ಕುಟುಂಬಕ್ಕೆ ಐದು ಲಕ್ಷ ಪರಿಹಾರ ವಿತರಿಸಲಾಗುವುದು. ಘಟನೆಯಲ್ಲಿ ಕಸ್ತೂರಮ್ಮ ಎಂಬುವರಿಗೆ ಶೇ.30 ರಷ್ಟು ಸುಟ್ಟ ಗಾಯವಾಗಿದ್ದು, ಇವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಹಲವರು ಗಾಯಗೊಂಡಿದ್ದು, ಇವರಿಗೆ ವಿಕ್ಟೋರಿಯಾ, ಸಂಜಯಗಾಂಧಿ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ದುರ್ಘಟನೆಯಲ್ಲಿ 13 ಮನೆಗಳಿಗೆ ಹಾನಿಯಾಗಿವೆ. ಸರಕಾದಿಂದಲೇ ಮನೆಗಳನ್ನ ಕಟ್ಟಿಸಿಕೊಡಲಾಗುವುದು. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೇಲ್ನೋಟಕ್ಕೆ ಸಿಲಿಂಡರ್ ಸ್ಪೋಟವಾಗಿದೆ ಎಂಬುದು ತಿಳಿದುಬಂದಿದೆ. ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಬಳಿಕ ಕಾರಣ ತಿಳಿಯಲಿದೆʼ ಎಂದು ಮಾಹಿತಿ ನೀಡಿದ್ದಾರೆ.





