ಗೃಹ ಇಲಾಖೆಯಲ್ಲಿ ಖಾಲಿ ಇರುವ 8,000 ವಿವಿಧ ಹುದ್ದೆಗಳ ನೇರ ನೇಮಕಾತಿ ಮೂಲಕ ಭರ್ತಿ : ಸಿದ್ದರಾಮಯ್ಯ

ಬೆಂಗಳೂರು : ಕಳೆದ ಮೂರು ವರ್ಷದ ಅವಧಿಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿನ 5,911 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಗೃಹ ಇಲಾಖೆಯಲ್ಲಿ ಖಾಲಿ ಇರುವ ಒಟ್ಟಾರೆ 8,000 ವಿವಿಧ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ 2026-27ನೆಯ ಸಾಲಿನ ಬಜೆಟ್ ಮಂಡಿಸಿದ ಅವರು, ಗೃಹ ಇಲಾಖೆಯಲ್ಲಿನ ಹುದ್ದೆಗಳ ನೇಮಕಾತಿಯನ್ನು ಕ್ರಮಬದ್ಧವಾಗಿ, ಪಾರದರ್ಶಕವಾಗಿ ಹಾಗೂ ನಿಯಮಿತವಾಗಿ ನಡೆಸಲು ಶಾಶ್ವತ ಪೊಲೀಸ್ ಮತ್ತು ಪೊಲೀಸ್ ಸಹಾಯಕ ಸೇವೆಗಳ ನೇಮಕಾತಿ ಮಂಡಳಿಯನ್ನು ಸ್ಥಾಪಿಸಲಾಗುವುದು. ಇಲಾಖೆಯ ಸಿಬ್ಬಂದಿಗಳಿಗೆ ಸುಸಜ್ಜಿತ ವಸತಿಗೃಹಗಳನ್ನು ಒದಗಿಸಲು ರೂಪಿಸಿದ 2,000 ಕೋಟಿ ರೂ.ಗಳ ಮೊತ್ತದ ಪೊಲೀಸ್ ಗೃಹ 2025 ಯೋಜನೆಗೆ ಇದುವರೆಗೆ 1,257 ಕೋಟಿ ರೂ.ಗಳನ್ನು ಒದಗಿಸಿದ್ದು, ಐದು ಹಂತಗಳಲ್ಲಿ 4,914 ವಸತಿಗೃಹಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಪ್ರಸಕ್ತ ಸಾಲಿನಲ್ಲಿ 250 ಕೋಟಿ ರೂ.ಗಳ ವೆಚ್ಚದಲ್ಲಿ ವಸತಿಗೃಹಗಳ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುವ ವಿಧಾನಮಂಡಲದ ಅಧಿವೇಶನದ ಸಮಯದಲ್ಲಿ ಬಂದೋಬಸ್ತ್ ಕಾರ್ಯಕ್ಕೆ ನಿಯೋಜಿಸಲಾಗುವ ಸಿಬ್ಬಂದಿಗಳಿಗೆ ವಸತಿ ಸೌಲಭ್ಯವನ್ನು ಒದಗಿಸುವುದಕ್ಕಾಗಿ 20 ಕೋಟಿ ರೂ.ಗಳ ವೆಚ್ಚದಲ್ಲಿ 1,000 ಸಿಬ್ಬಂದಿಗಳಿಗೆ ಶಾಶ್ವತ ಬ್ಯಾರಕ್ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹಾಗೂ ಸಂಚಾರ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಹಾಗೂ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ಒದಗಿಸುವ ದೃಷ್ಟಿಯಿಂದ 2026-27ನೇ ಸಾಲಿನಲ್ಲಿ 12 ನೂತನ ಪೋಲೀಸ್ ಠಾಣೆಗಳನ್ನು ಸ್ಥಾಪಿಸಲಾಗುವುದು (ಅನುಬಂಧ-೮). ಮುಂದುವರೆದು, ಪ್ರಸಕ್ತ ವರ್ಷದಲ್ಲಿ ನಿವೇಶನ ಲಭ್ಯವಿರುವ 10 ಪೊಲೀಸ್ ಠಾಣೆ ಕಟ್ಟಡಗಳನ್ನು 30 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು.
ಸಾರ್ವಜನಿಕರ ಭದ್ರತೆ ಮತ್ತು ಸೂಕ್ಷ್ಮ ನಿಗಾವಣೆ ದೃಷ್ಟಿಯಿಂದ ಗೃಹ ಇಲಾಖೆಯಲ್ಲಿ ಚಲನಶೀಲತೆಯನ್ನು ಹೆಚ್ಚಿಸಲು ಪ್ರಸಕ್ತ ಸಾಲಿನಲ್ಲಿ 75 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ವಾಹನಗಳನ್ನು ಒದಗಿಸಲಾಗುವುದು. ಕೇಂದ್ರ ಪುರಸ್ಕೃತ ಪೊಲೀಸ್ ಆಧುನೀಕರಣ ಯೋಜನೆಯಡಿ ಅತ್ಯಾಧುನಿಕ ಸಂಪರ್ಕ ಸಾಧನಗಳು, ಫೋರೆನ್ಸಿಕ್ ಉಪಕರಣಗಳು, ಸಿಸಿಟಿವಿ, ಮತ್ತು ಇತರೆ Body worn Camera, Anti-Drone, Drone ಉಪಕರಣಗಳನ್ನು ಒದಗಿಸಲು ಕೇಂದ್ರ ಮತ್ತು ರಾಜ್ಯದ ಪಾಲು ಸೇರಿದಂತೆ ಒಟ್ಟಾರೆ 354 ಕೋಟಿ ರೂ.ಗಳ ಕ್ರಿಯಾಯೋಜನೆಯನ್ನು ರೂಪಿಸಿದ್ದು, 142 ಕೋಟಿ ರೂ.ಗಳ ರಾಜ್ಯದ ಪಾಲನ್ನು ಒದಗಿಸಲು ಕ್ರಮವಹಿಸಲಾಗುವುದು. ಕರ್ನಾಟಕವನ್ನು ಮಾದಕ ವಸ್ತು ಮುಕ್ತ ರಾಜ್ಯವನ್ನಾಗಿ ಮಾಡಲು Zero Tolerance to Drugs ಧ್ಯೇಯದೊಂದಿಗೆ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ANTF) ಘಟಕವನ್ನು 10 ಕೋಟಿ ರೂ.ಗಳ ವೆಚ್ಚದಲ್ಲಿ ಬಲಪಡಿಸಲಾಗುವುದು.
ದ್ವೇಷ ಭಾಷಣ ಮತ್ತು ಸಂಭಾವ್ಯ ಕೋಮು ಗಲಭೆಯನ್ನು ನಿಯಂತ್ರಿಸಿ ಸಮಾಜದಲ್ಲಿ ಸೌಹಾರ್ದಯುತ ವಾತಾವರಣವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ರಾಜ್ಯದಲ್ಲಿ ವಿಶೇಷ ಕಾರ್ಯಪಡೆಯನ್ನು ಸ್ಥಾಪಿಸಲಾಗಿದ್ದು ಪ್ರಸಕ್ತ ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮೂರು ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ.
ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿನ ಸಂಚಾರ ದಟ್ಟಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ದೃಷ್ಟಿಯಿಂದ ವಿವಿಧ ಸಂಚಾರ ನಿರ್ವಹಣೆ ಸಂಸ್ಥೆಗಳಿಂದ ಪ್ರತ್ಯೇಕವಾಗಿ ನಿರ್ವಹಿಸಲಾಗುತ್ತಿರುವ ದತ್ತಾಂಶವನ್ನು ಸಂಗ್ರಹಿಸಿ ವಿಶ್ಲೇಷಿಸುವುದರ ಮೂಲಕ ನಗರದ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು 25 ಕೋಟಿ ರೂ.ಗಳ ವೆಚ್ಚದಲ್ಲಿ ಸಂಯೋಜಿತ ಡಿಜಿಟಲ್ ವೇದಿಕೆಯನ್ನು ರೂಪಿಸಲಾಗುವುದು.
ಬೆಂಗಳೂರು ನಗರ ಒಳಗೊಂಡಂತೆ ನಗರ ಪ್ರದೇಶಗಳಲ್ಲಿನ ಪೊಲೀಸಿಂಗ್ ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಗರ ಪೊಲೀಸಿಂಗ್ ನಾವೀನ್ಯತೆ ಸಂಸ್ಥೆಯನ್ನು (Urban Policing Innovation Centre) ಸೃಜಿಸಿ ಜಿ.ಬಿ.ಎ. ಹಾಗೂ ಕಾರ್ಪೋರೇಟ್ ಸಂಸ್ಥೆಗಳ ಸಹಯೋಗದೊಂದಿಗೆ ಸಿ.ಎಸ್.ಆರ್. ನಿಧಿಯನ್ನು ಬಳಸಿಕೊಂಡು ನಿರ್ವಹಿಸಲು ಉದ್ದೇಶಿಸಲಾಗಿದೆ. ಸಾರ್ವಜನಿಕರ ಅನುಸರಣೆ ಭಾರವನ್ನು (Compliance Burden) ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ರಾಜ್ಯದಲ್ಲಿನ ಎಲ್ಲಾ ವರ್ಗದ ಕಟ್ಟಡಗಳಿಗೆ ನೀಡಲಾಗುವ ಕ್ಲಿಯರೆನ್ಸ್ ನವೀಕರಣ ಪ್ರಮಾಣಪತ್ರ ಹಾಗೂ ಬಹುಮಹಡಿ ಕಟ್ಟಡವಲ್ಲದ ಕಟ್ಟಡಗಳಿಗೆ ನೀಡಲಾಗುವ ಸಮಾಪನ ಪತ್ರದ ನವೀಕರಣ ಅವಧಿಯನ್ನು ಎರಡು ವರ್ಷಗಳಿಂದ ಐದು ವರ್ಷಗಳಿಗೆ ಹೆಚ್ಚಿಸಲು ಕ್ರಮವಹಿಸಲಾಗುವುದು. ಮುಂದುವರೆದು, ಈಗಾಗಲೇ ನೀಡಲಾಗಿರುವ ಪ್ರಮಾಣಪತ್ರಗಳನ್ನು ಸಹ ಉಳಿಕೆ ಅವಧಿಯ ಶುಲ್ಕವನ್ನು ಪಡೆದು ಐದು ವರ್ಷಗಳ ಅವಧಿಗೆ ನವೀಕರಿಸಲಾಗುವುದು. ಹೆಚ್ಚಿನ ಅಗ್ನಿ ಸುರಕ್ಷತೆಗಾಗಿ ಕೈಗೆತ್ತಿಕೊಳ್ಳಲಾಗಿರುವ K-SAFE-2 ಯೋಜನೆಯಡಿ 2026-27 ನೇ ಸಾಲಿಗೆ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಹಾಗೂ ವಾಹನಗಳು, ಅತ್ಯಾಧುನಿಕ ಅಗ್ನಿಶಮನ ಮತ್ತು ರಕ್ಷಣಾ ಉಪಕರಣಗಳನ್ನು ಒದಗಿಸಲು ಪ್ರಸಕ್ತ ಸಾಲಿಗೆ 50 ಕೋಟಿ ರೂ.ಗಳನ್ನು ಮೀಸಲಿರಿಸಿದೆ.
ರಾಜ್ಯದಲ್ಲಿ ಬಹುಮಹಡಿ ಕಟ್ಟಡಗಳಲ್ಲಿ ಸಂಭವಿಸಬಹುದಾದ ಅಗ್ನಿ ಅನಾಹುತಗಳನ್ನು ತಡೆಗಟ್ಟಲು ಪ್ರಸಕ್ತ ವರ್ಷದಲ್ಲಿ 52-54 ಮೀಟರ್ ಎತ್ತರಕ್ಕೆ ತಲುಪುವ ಒಂದು ಏರಿಯಲ್ ಲ್ಯಾಡರ್ ಪ್ಲಾಟ್ಫಾರಂ ವಾಹನವನ್ನು ಒದಗಿಸಲಾಗುವುದು. ಅಗ್ನಿ ಶಮನ ಕಾರ್ಯಕ್ಕೆ ನಿಯೋಜಿತರಾಗುವ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಪ್ರಸಕ್ತ ನೀಡಲಾಗುತ್ತಿರುವ ಆಹಾರ ಭತ್ಯೆಯನ್ನು 150 ರೂ.ಗಳಿಂದ 300 ರೂ.ಗಳಿಗೆ ಹೆಚ್ಚಿಸಲಾಗುವುದು.
ಬೆಂಗಳೂರಿನಲ್ಲಿ ಗರಿಷ್ಠ ಭದ್ರತಾ ಕೇಂದ್ರ ಕಾರಾಗೃಹ ಹಾಗೂ ವಿಜಯಪುರ ಮತ್ತು ಬೀದರ್ಗಳಲ್ಲಿ ತಲಾ 1,000 ಬಂದಿಗಳ ಸಾಮರ್ಥ್ಯದ ಜಿಲ್ಲಾ ಕೇಂದ್ರ ಕಾರಾಗೃಹಗಳನ್ನು ಒಟ್ಟಾರೆ 471 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುತ್ತದೆ. ಮಂಗಳೂರು ಕೇಂದ್ರ ಕಾರಾಗೃಹದ ಎರಡನೇ ಹಂತದ ಕಾಮಗಾರಿಯನ್ನು ಮತ್ತು ರಾಯಚೂರು ಜಿಲ್ಲಾ ಕೇಂದ್ರ ಕಾರಾಗೃಹಗಳ ನಿರ್ಮಾಣ ಕಾರ್ಯವನ್ನು ಪ್ರಸಕ್ತ ಸಾಲಿನಲ್ಲಿ ಕೈಗೆತ್ತಿಕೊಳ್ಳಲಾಗುವುದು.
ʻಆಪರೇಷನ್ ಪರಿಶುದ್ಧೀಕರಣʼ ದಡಿಯಲ್ಲಿ ಎಲ್ಲಾ ಕಾರಾಗೃಹಗಳಲ್ಲಿ ಮೊಬೈಲ್, ಗಾಂಜಾ ಹಾಗೂ ಇನ್ನಿತರ ನಿಷೇಧಿತ ವಸ್ತುಗಳ ಬಳಕೆ, ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು Artificial Intrusion Detection System, ಸಿಸಿಟಿವಿ, ಬಾಡಿವೋರ್ನ್ ಕ್ಯಾಮರಾ ಸೇರಿದಂತೆ ಇನ್ನಿತರ ಅತ್ಯಾಧುನಿಕ ಭದ್ರತಾ ತಪಾಸಣಾ ಉಪಕರಣಗಳನ್ನು 20 ಕೋಟಿ ರೂ.ಗಳ ವೆಚ್ಚದಲ್ಲಿ ಒದಗಿಸಲಾಗುವುದು.
ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ “ಮಾದಕ ದ್ರವ್ಯ ವ್ಯಸನ ಮುಕ್ತ ಕೇಂದ್ರ”ವನ್ನು ಸ್ಥಾಪಿಸಲಾಗುವುದು.







