ವಿದೇಶಾಂಗ ನೀತಿ ವೈಫಲ್ಯ ಹೊಣೆ ಹೊತ್ತು ಪ್ರಧಾನಿ ಮೋದಿ ರಾಜೀನಾಮೆ ನೀಡಲಿ : ಸಿದ್ದರಾಮಯ್ಯ

ಬೆಂಗಳೂರು : ತನ್ನ ವಿದೇಶಾಂಗ ನೀತಿಯ ವೈಫಲ್ಯ, ಕಳಪೆ ಆರ್ಥಿಕ ನಿರ್ವಹಣೆ ಮತ್ತು ಅಜಾಗರೂಕ ಹಣದುಬ್ಬರದ ನಿರ್ವಹಣೆಯ ಪರಿಣಾಮಗಳನ್ನು ಬಲವಂತವಾಗಿ ದೇಶದ ಜನತೆಯ ತಲೆಯ ಮೇಲೆ ಹೇರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಶುಕ್ರವಾರ ಇಂಧನ ಬೆಲೆ ದಿಢೀರ್ ಏರಿಕೆ ಆಗಿರುವ ಸಂಬಂಧ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ ಅವರು, ಪೆಟ್ರೋಲ್, ಡೀಸೆಲ್ ದರ ತಲಾ 3ರೂ. ಏರಿಕೆಯ ಜನವಿರೋಧಿ ನಡೆಯನ್ನು ನಾನು ಕಠಿಣವಾಗಿ ವಿರೋಧಿಸುತ್ತಿದ್ದೇನೆ. ತಕ್ಷಣವೇ ಬೆಲೆ ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕು. ಜತೆಗೆ, ನಿರಂತರವಾಗಿ ಬೀಳುತ್ತಿರುವ ರೂಪಾಯಿ ಮೌಲ್ಯ, ಆರ್ಥಿಕ ನಿರ್ವಹಣೆಯ ವೈಫಲ್ಯ ಮತ್ತು ಸಾಮಾನ್ಯ ನಾಗರಿಕರ ಕುಟುಂಬಗಳನ್ನು ಸಂಕಷ್ಟಕ್ಕೆ ತಳ್ಳುತ್ತಿರುವುದರ ಹೊಣೆಯನ್ನು ಹೊತ್ತು ಮೋದಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ತನ್ನ ಆಡಳಿತ ವೈಫಲ್ಯಕ್ಕಾಗಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ತಲಾ 3 ರೂ. ಏರಿಕೆ ಮಾಡುವ ಮೂಲಕ ದೇಶದ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಿದೆ. ಇದು ಬೆಲೆ ಏರಿಕೆಯಲ್ಲ, ಭಾರತದ ಸಾಮಾನ್ಯ ಜನರ ದೈನಂದಿನ ಬದುಕಿನ ಮೇಲೆ ನಡೆಸಿದ ನೇರ ದಾಳಿಯಾಗಿದೆ ಎಂದು ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ ಒಂದಕ್ಕೆ 106 ರೂ. ದಾಟಿದೆ. ಡೀಸೆಲ್ ದರವು 94 ರೂ. ಆಗಿದೆ. ಈ ಏರಿಕೆಯು ಕೇವಲ ಬಂಕ್‍ಗಳಿಗೆ ಸೀಮಿತಗೊಳ್ಳುವುದಿಲ್ಲ. ಇದರೊಂದಿಗೆ ಸಾರಿಗೆ ವೆಚ್ಚ, ತರಕಾರಿ, ಹಣ್ಣು, ಹಾಲು, ಸೇರಿದಂತೆ ಪ್ರತಿಯೊಂದು ದಿನಬಳಕೆ ವಸ್ತುಗಳ ದರ ಏರಿಕೆಯಾಗುತ್ತದೆ. ಇದರಿಂದ ಕಾರ್ಮಿಕರು, ರೈತರು, ಸಣ್ಣ ವ್ಯಾಪಾರಿಗಳು, ಮನೆಯ ಜವಾಬ್ದಾರಿ ಹೊತ್ತ ಮಹಿಳೆಯರು ಹಾಗೂ ಮಧ್ಯಮ ವರ್ಗದವರು ದೈನಂದಿನ ಬದುಕು ನಡೆಸುವುದು ಮತ್ತಷ್ಟು ದುಸ್ತರವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಕಡಿಮೆಯಿದ್ದಾಗ ಅದರ ಲಾಭವನ್ನು ಮೋದಿ ಸರಕಾರ ಎಂದಿಗೂ ಜನತೆಗೆ ಬಿಟ್ಟುಕೊಡಲೇ ಇಲ್ಲ. ಆಗಲೂ ಜನತೆಯಿಂದ ದೊಡ್ಡ ಮೊತ್ತದ ತೆರಿಗೆಯನ್ನು ಸಂಗ್ರಹಿಸಿ ತನ್ನ ಬೊಕ್ಕಸವನ್ನು ತುಂಬಿಕೊಂಡಿತ್ತು. ಈಗ ದರ ಏರಿಕೆಯಾದಾಗ ಅದರ ಸಂಪೂರ್ಣ ಭಾರವನ್ನು ಜನಸಾಮಾನ್ಯರ ಮೇಲೆ ಹೊರಿಸಿ ಕೈತೊಳೆದುಕೊಳ್ಳುತ್ತಿದೆ. ಇದು ಆಡಳಿತ ನಡೆಸುವ ಕ್ರಮವಲ್ಲ, ಇದು ದೇಶದ ಜನತೆಯ ಮೇಲಿನ ಘೋರ ಶೋಷಣೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸರಕಾರ ಹಣದುಬ್ಬರ ನಿಯಂತ್ರಣ ಮಾಡುವಲ್ಲಿ, ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತವನ್ನು ತಡೆಯುವಲ್ಲಿ, ದೇಶದ ಆರ್ಥಿಕ ನಿರ್ವಹಣೆಯಲ್ಲಿ ಹಾಗೂ ಒಟ್ಟಾರೆ ಸಾಮಾನ್ಯ ಜನರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ತನ್ನ ಉದ್ಯಮಿ ಮಿತ್ರರ ರಕ್ಷಣೆಗೆ ತೋರುವ ಆತುರ, ಕಾಳಜಿ ಹಾಗೂ ಬದ್ಧತೆಯಲ್ಲಿ ಸ್ವಲ್ಪವಾದರೂ ದೇಶದ ಜನತೆಯ ಮೇಲೆ ತೋರಿಸಲಿ ಎಂಬುದು ನಮ್ಮ ಮನವಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ತನ್ನ ಆಡಳಿತ ವೈಫಲ್ಯಕ್ಕಾಗಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ತಲಾ 3 ರೂ. ಏರಿಕೆ ಮಾಡುವ ಮೂಲಕ ದೇಶದ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಿದೆ. ಇದು ಬೆಲೆ ಏರಿಕೆಯಲ್ಲ, ಭಾರತದ ಸಾಮಾನ್ಯ ಜನರ ದೈನಂದಿನ ಬದುಕಿನ ಮೇಲೆ ನಡೆಸಿದ ನೇರ ದಾಳಿಯಾಗಿದೆ.
— Siddaramaiah (@siddaramaiah) May 15, 2026
ನಾವು ಅಂದುಕೊಂಡಂತೆ ಕೇಂದ್ರ ಸರ್ಕಾರವು ತನ್ನ… pic.twitter.com/psV8cQdaVl






