ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ರಾಜ್ಯಾದ್ಯಂತ ಹೋರಾಟ : ರಾಜ್ಯ ಶೋಷಿತ ವರ್ಗಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ

ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು : ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ರಾಜೀನಾಮೆ ಕೇಳಿದೆಯಂತೆ. ಒಂದು ವೇಳೆ ಇದು ನಿಜವಾಗಿದ್ದರೆ, ಹಿಂದುಳಿದ ವರ್ಗಗಳಲ್ಲಿ ಶೇ.70ರಷ್ಟಿರುವ ನಾವು ಸುಮ್ಮನೆ ಕೂರುವುದಿಲ್ಲ, ನಾಳೆಯಿಂದಲೇ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ರಾಜ್ಯ ಶೋಷಿತ ವರ್ಗಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಂದಿಗ್ಧ ಪರಿಸ್ಥಿತಿಯಲ್ಲಿಲ್ಲ. ರಾಹುಲ್ ಗಾಂಧಿ ಹೇಳಿದರೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದರು. ಅಹಿಂದ ವರ್ಗ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದೆ. ಯಾವುದೆ ಕಾರಣಕ್ಕೂ ಸಿದ್ದರಾಮಯ್ಯರನ್ನು ಬದಲಾವಣೆ ಮಾಡಬಾರದು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯನವರ ವರ್ಚಸ್ಸನ್ನು ಕಡೆಗಣಿಸಬಾರದು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರೋದು ಅಹಿಂದ ವರ್ಗದಿಂದ. ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆ ಮಾಡುವುದಾದರೆ ಅಹಿಂದ ವರ್ಗದವರನ್ನೆ ಆ ಸ್ಥಾನಕ್ಕೆ ಆಯ್ಕೆ ಮಾಡಲಿ. ನಮ್ಮ ಸಮುದಾಯದ ಶಾಸಕರು ಸಿದ್ದರಾಮಯ್ಯ ಜೊತೆ ನಿಲ್ಲಬೇಕು ಎಂದು ರಾಮಚಂದ್ರಪ್ಪ ಕರೆ ನೀಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ: ರಾಜ್ಯ ಸರಕಾರದ ಅಧಿಕಾರಾವಧಿ ಇನ್ನೂ ಎರಡು ವರ್ಷ ಇರುವಾಗಲೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಬದಲಾವಣೆ ಮಾಡುತ್ತಿರುವ ಕಾಂಗ್ರೆಸ್ ಹೈಕಮಾಂಡ್ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಬೇಸರ ಹೊರ ಹಾಕುತ್ತಿದ್ದು, 2028ರ ವಿಧಾನಸಭಾ ಚುನಾವಣೆಯ ಸೋಲಿಗೆ ಕಾಂಗ್ರೆಸ್ ಪಕ್ಷ ಮುನ್ನುಡಿ ಬರೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.






