ಲಕ್ಷಾಂತರ ಮಹಿಳೆಯರ ಬದುಕಿನಲ್ಲಿ ಗೃಹಲಕ್ಷ್ಮಿ ಯೋಜನೆ ಭರವಸೆಯ ಬೆಳಕಾಗಿದೆ : ಸಿದ್ದರಾಮಯ್ಯ

ಬೆಂಗಳೂರು : ಗೃಹಲಕ್ಷ್ಮಿ ಕೇವಲ ಒಂದು ಯೋಜನೆಯಲ್ಲ. ಅದು ಮಹಿಳೆಯರ ಮೇಲಿನ ನಮ್ಮ ನಂಬಿಕೆ, ಗೌರವ ಮತ್ತು ಬದ್ಧತೆಯ ಪ್ರತೀಕ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರವಿವಾರ ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಮೂರು ವರ್ಷಗಳ ಹಿಂದೆ ಇದೇ ದಿನ, ನಮ್ಮ ಸರಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ ನೀಡಿದ್ದೆ ಎಂದು ನೆನೆಯಲು ಹೆಮ್ಮೆಯೆನಿಸುತ್ತದೆ ಎಂದು ಹೇಳಿದ್ದಾರೆ.
ಚುನಾವಣೆಯ ಸಂದರ್ಭದಲ್ಲಿ ನಾವು ನೀಡಿದ್ದ ಭರವಸೆಯನ್ನು ಅಧಿಕಾರಕ್ಕೆ ಬಂದ ತಕ್ಷಣವೇ ಜಾರಿಗೆ ತರುವ ಸಂಕಲ್ಪ ಮಾಡಿದ್ದೆ. ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ನಮ್ಮ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದು, ರಾಜ್ಯದ ಪ್ರತಿಯೊಬ್ಬ ಅರ್ಹ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುವ ಭರವಸೆಯನ್ನು ಈಡೇರಿಸಿದೆವು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಇಂದು ಲಕ್ಷಾಂತರ ಗೃಹಲಕ್ಷ್ಮಿಯರ ಬದುಕಿನಲ್ಲಿ ಈ ಯೋಜನೆ ಭರವಸೆಯ ಬೆಳಕಾಗಿದೆ. ಮಕ್ಕಳ ಶಿಕ್ಷಣ, ಕುಟುಂಬ ನಿರ್ವಹಣೆ, ಆರೋಗ್ಯ, ಹೀಗೆ ತಮ್ಮ ಕುಟುಂಬದ ಅಗತ್ಯಗಳಿಗೆ ತಾವೇ ನಿರ್ಧಾರ ತೆಗೆದುಕೊಳ್ಳುವ ಆರ್ಥಿಕ ಶಕ್ತಿಯನ್ನು ಈ ಯೋಜನೆ ಮಹಿಳೆಯರಿಗೆ ನೀಡಿದೆ ಎಂದು ಅವರು ಹೇಳಿದ್ದಾರೆ.
ಒಬ್ಬ ತಾಯಿಯ ಮುಖದಲ್ಲಿ ಮೂಡುವ ನೆಮ್ಮದಿ, ಒಬ್ಬ ಗೃಹಿಣಿಗೆ ಸಿಕ್ಕಿರುವ ಆರ್ಥಿಕ ಸ್ವಾತಂತ್ರ್ಯ, ಮಕ್ಕಳ ಭವಿಷ್ಯದ ಬಗ್ಗೆ ಒಂದು ಕುಟುಂಬದಲ್ಲಿ ಮೂಡುವ ವಿಶ್ವಾಸ ಇವೇ ಗೃಹಲಕ್ಷ್ಮಿಯ ನಿಜವಾದ ಯಶಸ್ಸು. ಕೋಟ್ಯಂತರ ಮನೆ ಮನಗಳಲ್ಲಿ ಸಂತೋಷ, ನೆಮ್ಮದಿ ಮತ್ತು ಆತ್ಮವಿಶ್ವಾಸದ ದೀಪ ಬೆಳಗುತ್ತಿರುವುದನ್ನು ನೋಡಲು ನನಗೆ ಸಂತೋಷವಾಗುತ್ತಿದೆ ಎಂದು ಅವರು ನುಡಿದಿದ್ದಾರೆ.
ಭರವಸೆಗಳು ರಾಜಕಾರಣವಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ನಿಜವಾದ ಜನಸೇವೆ. ಗೃಹಲಕ್ಷ್ಮಿಯರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.






