ಚುನಾವಣಾ ವ್ಯವಸ್ಥೆ ಸುಧಾರಣೆಯಾಗದಿದ್ದರೆ ಸಮಾಜದಲ್ಲಿ ಬದಲಾವಣೆ ಸಾಧ್ಯವಿಲ್ಲ : ಸಿದ್ದರಾಮಯ್ಯ

ಬೆಂಗಳೂರು : ಚುನಾವಣಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ಆಗದಿದ್ದರೆ ಸಮಾಜದಲ್ಲಿ ನಿಜವಾದ ಬದಲಾವಣೆ ತರಲು ಸಾಧ್ಯವಿಲ್ಲ. ಇಂದಿನ ಚುನಾವಣೆಯಲ್ಲಿ ಹಣ, ಜಾತಿ ಮತ್ತು ಮದ್ಯದ ಪ್ರಭಾವ ಹೆಚ್ಚಾಗಿದ್ದು, ಪ್ರಾಮಾಣಿಕರು, ಬಡವರು, ಬುದ್ಧಿವಂತರು ಹಾಗೂ ಸಮಾಜ ಸೇವೆಯ ಆಶಯ ಹೊಂದಿರುವವರು ರಾಜಕೀಯ ಪ್ರವೇಶಿಸುವುದೇ ಕಷ್ಟವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗುರುವಾರ ಇಲ್ಲಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಮಾಜಿ ಸಿಎಂ ಜೆ.ಎಚ್.ಪಟೇಲ್ ಅವರ ‘96ನೇ ಜನ್ಮ ದಿನಾಚರಣೆ’ ಹಾಗೂ ‘ಚುನಾವಣೆ ಸುಧಾರಣೆಯಿಂದ ಸಮಾಜದ ಸುಧಾರಣೆ’ ಕುರಿತಾದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣಾ ಸುಧಾರಣೆ ಯಾವುದೇ ಒಂದು ಪಕ್ಷ ಅಥವಾ ವ್ಯಕ್ತಿಗೆ ಸಂಬಂಧಿಸಿದ ವಿಚಾರವಲ್ಲ. ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಸಂಬಂಧಿಸಿದ ಪ್ರಶ್ನೆಯಾಗಿರುವುದರಿಂದ ಎಲ್ಲ ರಾಜಕೀಯ ಪಕ್ಷಗಳು, ಸಾರ್ವಜನಿಕರು, ಹೋರಾಟಗಾರರು ಹಾಗೂ ಸಾಮಾಜಿಕ ಕಾರ್ಯಕರ್ತರು ಮುಕ್ತ ಮನಸ್ಸಿನಿಂದ ಈ ಕುರಿತು ಚರ್ಚೆ ನಡೆಸಬೇಕು ಎಂದರು.
ಇಂದಿನ ಚುನಾವಣಾ ವ್ಯವಸ್ಥೆ ರಾಜಕಾರಣಿಗಳನ್ನೇ ಅನಿವಾರ್ಯವಾಗಿ ಭ್ರಷ್ಟರಾಗುವಂತಹ ಪರಿಸ್ಥಿತಿಗೆ ತಳ್ಳುತ್ತಿದೆ. ಚುನಾವಣಾ ಆಯೋಗ ನಿಗದಿಪಡಿಸಿರುವ ವೆಚ್ಚದ ಮಿತಿಯೊಳಗೆ ಮಾತ್ರ ಖರ್ಚು ಮಾಡಿ ಚುನಾವಣೆ ಎದುರಿಸುತ್ತೇವೆ ಎಂದು ರಾಜಕಾರಣಿಗಳು ಹೇಳಿದರೆ ಅದನ್ನು ಜನರು ನಂಬುವ ಸ್ಥಿತಿಯೂ ಇಲ್ಲ. ವಾಸ್ತವದಲ್ಲಿ ಚುನಾವಣೆ ನಡೆಸಲು ನಿಗದಿತ ಮಿತಿಗಿಂತ ಹೆಚ್ಚಿನ ಹಣ ಖರ್ಚಾಗುತ್ತಿದೆ ಎಂದು ಅವರು ಹೇಳಿದರು.
ಇಂದು ಹಣವಿಲ್ಲದೆ, ಮದ್ಯ ಹಂಚದೆ ಮತ್ತು ಜಾತಿಯ ಲೆಕ್ಕಾಚಾರ ಮಾಡದೆ ಚುನಾವಣೆ ಗೆಲ್ಲುವುದು ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ವ್ಯವಸ್ಥೆಯಿಂದ ಸಮಾಜದಲ್ಲಿರುವ ಪ್ರಾಮಾಣಿಕರು, ಬಡವರು, ಬುದ್ಧಿವಂತರು ಮತ್ತು ಸಮಾಜ ಸೇವೆ ಮಾಡಬೇಕೆಂಬ ಉದ್ದೇಶ ಹೊಂದಿರುವವರು ಚುನಾವಣಾ ರಾಜಕಾರಣದಿಂದ ದೂರ ಉಳಿಯುವಂತಾಗಿದೆ. ಇದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಗಂಭೀರವಾಗಿ ಚರ್ಚಿಸಬೇಕಾದ ವಿಚಾರ ಎಂದು ಅವರು ತಿಳಿಸಿದರು.
ಚುನಾವಣಾ ವ್ಯವಸ್ಥೆಯ ಸುಧಾರಣೆಗೆ ಈ ಹಿಂದೆಯೂ ಹಲವು ಪ್ರಯತ್ನಗಳು ನಡೆದಿವೆ. ವಿ.ಪಿ. ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದಿನೇಶ್ ಗೋಸ್ವಾಮಿ ಸಮಿತಿ, ಪಿ.ವಿ. ನರಸಿಂಹರಾವ್ ಅವರ ಅವಧಿಯಲ್ಲಿ ಎನ್.ಎನ್. ವೋಹ್ರಾ ಸಮಿತಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ಇಂದ್ರಜಿತ್ ಗುಪ್ತಾ ಸಮಿತಿ ರಚಿಸಲಾಗಿತ್ತು. ಈ ಸಮಿತಿಗಳ ಶಿಫಾರಸುಗಳನ್ನು ಸಮಗ್ರವಾಗಿ ಜಾರಿಗೆ ತಂದಿದ್ದರೆ ಚುನಾವಣಾ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ತರಬಹುದಾಗಿತ್ತು. ಆದರೆ ಶಿಫಾರಸುಗಳು ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲಿಲ್ಲ ಎಂದು ಅವರು ಹೇಳಿದರು.
ಇಂದ್ರಜಿತ್ ಗುಪ್ತಾ ಸಮಿತಿ ಪ್ರಸ್ತಾಪಿಸಿದ್ದ ಮಾದರಿಯಲ್ಲಿ ಚುನಾವಣಾ ವೆಚ್ಚವನ್ನು ಸರಕಾರವೇ ಭರಿಸುವ ವ್ಯವಸ್ಥೆ ಜಾರಿಗೆ ತರುವ ಕುರಿತು ಗಂಭೀರವಾಗಿ ಚಿಂತಿಸಬೇಕು. ಅಭ್ಯರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸುವುದರ ಜೊತೆಗೆ ರಾಜಕೀಯ ಪಕ್ಷಗಳ ನೀತಿ, ಸಿದ್ಧಾಂತ ಮತ್ತು ಕಾರ್ಯಕ್ರಮಗಳನ್ನು ಮಾಧ್ಯಮಗಳ ಮೂಲಕ ಮತದಾರರಿಗೆ ತಲುಪಿಸುವ ವ್ಯವಸ್ಥೆ ರೂಪಿಸಬೇಕು. ಇದರಿಂದ ಚುನಾವಣೆಯಲ್ಲಿ ಹಣದ ದುರ್ಬಳಕೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಸಿದ್ದರಾಮಯ್ಯ ಅವರು ಪ್ರತಿಪಾದಿಸಿದರು.
ಶಿಕ್ಷಣದ ಪ್ರಮಾಣ ಹೆಚ್ಚಾಗಿದ್ದರೂ ಸಮಾಜದಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ ಅದೇ ಪ್ರಮಾಣದಲ್ಲಿ ಬೆಳೆದಿಲ್ಲ. ಓದಿಕೊಂಡವರಲ್ಲಿಯೂ ಜಾತಿ ಆಧಾರಿತ ಚಿಂತನೆ ಮುಂದುವರಿದಿದೆ. ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಯ ಅರ್ಹತೆ, ನೀತಿ ಮತ್ತು ಕಾರ್ಯಕ್ರಮಗಳಿಗಿಂತ ಜಾತಿ ಯಾವುದು ಎಂಬ ಪ್ರಶ್ನೆಗೆ ಆದ್ಯತೆ ಸಿಗುತ್ತಿರುವುದು ಬದಲಾಗಬೇಕು. ಶಿಕ್ಷಣ ವ್ಯವಸ್ಥೆಯೂ ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸುವಂತಿರಬೇಕು ಎಂದು ಹೇಳಿದರು.
ಎಲ್ಲ ರಾಜಕೀಯ ಪಕ್ಷಗಳ ಸಿದ್ಧಾಂತ, ನೀತಿ ಮತ್ತು ಕಾರ್ಯಕ್ರಮಗಳು ಬೇರೆ ಬೇರೆಯಾಗಿರಬಹುದು. ಆದರೆ ಚುನಾವಣಾ ವ್ಯವಸ್ಥೆಯ ಸುಧಾರಣೆಯ ವಿಚಾರದಲ್ಲಿ ಎಲ್ಲರೂ ಮುಕ್ತ ಮನಸ್ಸಿನಿಂದ ಹಾಗೂ ಪ್ರಾಮಾಣಿಕವಾಗಿ ಚರ್ಚಿಸಬೇಕು. ಕೆಲವರು ಮಾತ್ರ ಧ್ವನಿ ಎತ್ತುವುದರಿಂದ ಸಮಗ್ರ ಬದಲಾವಣೆ ಸಾಧ್ಯವಿಲ್ಲ. ಸಾರ್ವಜನಿಕ ವಲಯದಲ್ಲಿ ನಿರಂತರ ಚರ್ಚೆ ನಡೆದು, ಅದರಿಂದ ಸುಧಾರಣೆಯ ಸ್ಪಷ್ಟ ಕ್ರಮಗಳು ಹೊರಬರಬೇಕು ಎಂದರು.
ಇನ್ನು ಜೆ.ಎಚ್. ಪಟೇಲರಂತಹ ಓದಿಕೊಂಡ, ಚಳವಳಿಯ ಹಿನ್ನೆಲೆ ಹೊಂದಿದ ಹಾಗೂ ವಿಧಾನಮಂಡಲದಲ್ಲಿ ಗಂಭೀರ ಚರ್ಚೆ ನಡೆಸಬಲ್ಲ ರಾಜಕಾರಣಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಂಸತ್ತು, ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಗುಣಮಟ್ಟದ ಚರ್ಚೆಗಳು ಹೆಚ್ಚಾಗಬೇಕು. ಪಟೇಲರು ತೋರಿದ ಆದರ್ಶಗಳು ಮತ್ತು ಸಾರ್ವಜನಿಕ ಬದುಕಿನ ಮೌಲ್ಯಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಪಿ.ಜಿ.ಆರ್. ಸಿಂಧ್ಯಾ, ಬಿ.ಸೋಮಶೇಖರ್, ಮುಖಂಡ ಗಣೇಶ್ ಪ್ರಸಾದ್, ತೇಜಸ್ವಿನಿ ಅನಂತಕುಮಾರ್, ರೈತಪರ ಹೋರಾಟಗಾರರಾದ ಚುಕ್ಕಿ ನಂಜುಂಡಸ್ವಾಮಿ, ಶಿವಶಂಕರ್, ನಂಜಯ್ಯನ ಮಠ, ಎಂ.ಪಿ.ನಾಡಗೌಡ, ಪಟೇಲರ ಪುತ್ರರಾದ ಮಹಿಮಾ ಪಟೇಲ್, ತ್ರಿಶೂಲ್ ಪಟೇಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






