ಕಾಂಗ್ರೆಸೇತರ ಸರಕಾರ ಬಯಸಿದ್ದ ಲೋಹಿಯಾ : ಸಿದ್ದರಾಮಯ್ಯ

ಬೆಂಗಳೂರು : ‘ರಾಜ್ಯದಲ್ಲಿ ಕಾಂಗ್ರೆಸೇತರ ಸರಕಾರ ಬರಬೇಕು ಎಂದು ರಾಮಮನೋಹರ ಲೋಹಿಯಾ ಅವರು ಬಯಸಿದ್ದರು. ಜನತಾ ಪಕ್ಷ ಒಡೆದು ಹೋಗದಿದ್ದರೆ, ರಾಜ್ಯದಲ್ಲಿ ಜನತಾ ಪಕ್ಷವೇ ಇರುತ್ತಿತ್ತು’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸೋಮವಾರ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಲೇಖಕ ಡಾ.ನಟರಾಜ್ ಹುಳಿಯಾರ್ ಅವರು ಬರೆದಿರುವ ‘ಡಾಕ್ಟರ್ ಸಾಹೇಬ್’ ರಾಮಮನೋಹರ ಲೋಹಿಯಾ ಅವರ ಜೀವನಯಾನ ಕೃತಿಯನ್ನು ಜನಾರ್ಪಣೆ ಮಾಡಿ ಅವರು ಮಾತನಾಡಿದರು.
‘ಲೋಹಿಯಾ ಅವರಿಗೂ ಕರ್ನಾಟಕಕ್ಕೂ ಬಹಳ ದೊಡ್ಡ ಸಂಬಂಧವಿದೆ. ಅವರು ಕಾಗೋಡು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. ಆಗ ನಾನು ವಿದ್ಯಾರ್ಥಿಯಾಗಿದ್ದೆ. ಅವರ ಚಿಂತನೆಗಳಿಂದ ಪ್ರಭಾವಿತರಾಗಿರುವ ಅನೇಕರು ಕರ್ನಾಟಕದಲ್ಲಿದ್ದಾರೆ. ಲೋಹಿಯಾ ಬಗ್ಗೆ ಅನೇಕ ಪುಸ್ತಕಗಳು ಬಂದಿವೆ. ಕನ್ನಡದಲ್ಲಿ ಸಮಗ್ರವಾದ ಕೃತಿ ಬಂದಿರಲಿಲ್ಲ. ನಟರಾಜ್ ಹುಳಿಯಾರ್ ಅವರು ಅಧ್ಯಯನ ನಡೆಸಿ ಮೂರು ವರ್ಷಗಳ ಕಾಲ ಸಮಯ ತೆಗೆದುಕೊಂಡು ಸಮಗ್ರವಾಗಿ ಬರೆದಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಅಧಿಕಾರದ ವಿಕೇಂದ್ರೀಕರಣ ಆಗಬೇಕು. ಲಿಂಗ ತಾರತಾಮ್ಯ, ಅಸಮಾನತೆ ಇರಬಾರದು. ಜನಪ್ರತಿನಿಧಿಗಳಲ್ಲಿ ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು ಶೇ.60ರಷ್ಟು ಇರಬೇಕು ಎಂಬುದು ಲೋಹಿಯಾ ಚಿಂತನೆಯಾಗಿತ್ತು. ನಾನು ಮುಖ್ಯಮಂತ್ರಿಯಾಗಿ ಲೋಹಿಯಾ ಚಿಂತನೆಗಳನ್ನು ಜಾರಿಗೆ ತರುವ ಪ್ರಯತ್ನ ಮಾಡಿದ್ದೇನೆ. ನಾನು ಕಾಂಗ್ರೆಸ್ ಪಕ್ಷದಲ್ಲಿದ್ದರೂ ಲೋಹಿಯಾ ಚಿಂತನೆಗಳನ್ನು ಜಾರಿ ಮಾಡುವ ಕೆಲಸ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅವರು ಪುಸ್ತಕದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಶೂದ್ರ ಶ್ರೀನಿವಾಸ್, ಮಂಗ್ಳೂರು ವಿಜಯ, ರವಿಕುಮಾರ್ ಬಾಗಿ, ಸಮಾಜವಾದಿ ಚಿಂತಕ ಚನ್ನಬಸವಣ್ಣ, ಪ್ರಕಾಶಕ ವೆಂಕಟೇಶ್ ಮತ್ತಿತರರು ಹಾಜರಿದ್ದರು.
ರಾಮಮನೋಹರ್ ಲೋಹಿಯಾ ಅವರು ಕಾಗೋಡು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. ಆಗ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಜಾಮೀನು ತೆಗೆದುಕೊಳ್ಳಿ ಎಂದರೂ ನಾನು ಚಳವಳಿಯಲ್ಲಿದ್ದೇನೆ. ಜಾಮೀನು ಬೇಡ ಎಂದು ನಿರಾಕರಿಸಿದ್ದರು. ಇಂದು ದಿಲ್ಲಿಯಲ್ಲಿ ಹೋರಾಟ ನಡೆಸುತ್ತಿರುವ ಹುಡುಗರು ಕೂಡ ಜಾಮೀನು ತೆಗೆದುಕೊಳ್ಳಲು ನಿರಾಕರಿಸುತ್ತಿರುವುದನ್ನು ನೋಡಿದರೆ ಲೋಹಿಯಾ ಹೋರಾಟ ನೆನಪಾಗುತ್ತಿದೆ.
-ನಟರಾಜ್ ಹುಳಿಯಾರ್, ಲೇಖಕ






