ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ನಿಧನ

ಬೆಂಗಳೂರು : ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಚಿತ್ರ ನಿರ್ಮಾಪಕ ಸಿಂಗೀತಂ ಶ್ರೀನಿವಾಸ ರಾವ್ ಅವರು (94) ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿಂಗೀತಂ ಶ್ರೀನಿವಾಸ್ ರಾವ್ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ.
1931ರ ಸೆ.21ರಂದು ಆಂಧ್ರ ಪ್ರದೇಶದ ಗುಡುರಿನಲ್ಲಿ ಜನಿಸಿದ ಸಿಂಗೀತಂ ಶ್ರೀನಿವಾಸ ರಾವ್, ಸಹಾಯಕ ನಿರ್ದೇಶಕರಾಗಿ ವೃತ್ತಿ ಜೀವನ ಪ್ರವೇಶಿಸಿದರು. ಆರು ದಶಕಗಳಲ್ಲಿ 5 ಭಾಷೆಗಳಲ್ಲಿ ನೂರಾರು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಅವರು ಸಿಂಗೀತಂ ಎಂಬ ಸಂಗೀತ ಆಧಾರಿತ ಚಿತ್ರವೊಂದನ್ನು ಅವರು ನಿರ್ದೇಶಿಸಿದ್ದರು.
ವಿಶ್ವದ ಅತ್ಯಂತ ಹಿರಿಯ ನಿರ್ದೇಶಕರೆಂಬ ಖ್ಯಾತಿಗೂ ಪಾತ್ರರಾಗಿದ್ದರು. ಕನ್ನಡದಲ್ಲಿ ಹಾಲು-ಜೇನು, ಭಾಗ್ಯದ ಲಕ್ಷ್ಮಿ ಬಾರಮ್ಮ, ಶ್ರಾವಣ ಬಂತು, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಜ್ವಾಲಾಮುಖಿ, ದೇವತಾ ಮನುಷ್ಯ, ಆನಂದ್, ಚಿರಂಜೀವಿ ಸುಧಾಕರ್, ಪುಷ್ಪಕವಿಮಾನ ಸೇರಿದಂತೆ ಹಲವು ಜನಪ್ರಿಯ ಚಿತ್ರಗಳಿಗೆ ನಿರ್ದೇಶನ ಮಾಡಿದ್ದರು.
ಸಿಂಗೀತಂ ಶ್ರೀನಿವಾಸರಾವ್ ನಿರ್ದೇಶಿಸಿದ್ದ ಹಲವು ಚಿತ್ರಗಳಿಗೆ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯ ಪ್ರಶಸ್ತಿಗಳು, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಭಾಜನರಾಗಿದ್ದರು. ಸಿಂಗೀತಂ ಶ್ರೀನಿವಾಸ ರಾವ್ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿ ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಬಾಲಿವುಡ್‍ನ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.






