ವಿಧಾನಸಭೆಯಲ್ಲಿ ʼಎಸ್ಐಆರ್ʼ ವಿರೋಧಿ ನಿರ್ಣಯ ಅಂಗೀಕರಿಸಲು ಆಗ್ರಹ

ಸಾಂದರ್ಭಿಕ ಚಿತ್ರ | Photo Credit : PTI
ಬೆಂಗಳೂರು, ಮೇ 8 : ರಾಜ್ಯದ ಕಾಂಗ್ರೆಸ್ ಸರಕಾರ ಎಸ್ಐಆರ್ಗೆ ವಿರೋಧ ವ್ಯಕ್ತಪಡಿಸುವ ನಿರ್ಣಯವನ್ನು ವಿಧಾನಸಭೆಯಲ್ಲಿ ಅಂಗೀಕರಿಸಬೇಕು ಎಂದು ‘ನನ್ನ ಮತ ನನ್ನ ಹಕ್ಕು ಸಂಘಟನೆ’ ಆಗ್ರಹಿಸಿದೆ.
ಶುಕ್ರವಾರ ಈ ಕುರಿತು ಐಶ್ವರ್ಯ, ವಿನಯ್ ಶ್ರೀನಿವಾಸ್, ಶ್ರೀಪಾದ್ ಭಟ್, ಗೀತಾ ಮೆನನ್, ಲೇಖಾ ಅಡವಿ, ಐಸಾಕ್ ಅಮೃತರಾಜ್ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಪ್ರಸ್ತುತ ಮತದಾರರ ಪಟ್ಟಿ ತಯಾರಿಕೆ ಪ್ರಕ್ರಿಯೆಯ ಕಾನೂನಾತ್ಮಕ ಮತ್ತು ಸಾಂವಿಧಾನಿಕ ಚೌಕಟ್ಟನ್ನು ಎಸ್ಐಆರ್ ಉಲ್ಲಂಘಿಸುತ್ತದೆ ಎಂಬುದರ ಕುರಿತು ರಾಜ್ಯ ಸರಕಾರ, ಭಾರತದ ಚುನಾವಣಾ ಆಯೋಗಕ್ಕೆ ಪತ್ರ ಬರೆಯಬೇಕು ಎಂದಿದ್ದಾರೆ.
ಕರ್ನಾಟಕದಲ್ಲಿ ಎಸ್ಐಆರ್ ಅನ್ನು ಕಾನೂನಾತ್ಮಕವಾಗಿ ವಿರೋಧಿಸಲು ಕಾನೂನು ತಜ್ಞರು ಮತ್ತು ಹೋರಾಟಗಾರರ ತಂಡವನ್ನು ರಾಜ್ಯ ಸರಕಾರ ರಚಿಸಬೇಕು. ರಾಜಕೀಯ ಸಮಾನತೆ ಎಂಬುದು ಸಾಮಾಜಿಕ ನ್ಯಾಯದ ಅವಿಭಾಜ್ಯ ಅಂಗವಾಗಿದ್ದು, ಅದನ್ನು ರಕ್ಷಿಸಬೇಕಿದೆ ಎಂಬ ವಿಚಾರವನ್ನು ಒತ್ತಿಹೇಳಲು ರಾಜ್ಯ ಸರಕಾರವು ರಾಜಕೀಯ ಪಕ್ಷಗಳು ಮತ್ತು ನಾಗರಿಕ ಸಮಾಜ ಸಂಘಟನೆಗಳ ರಾಷ್ಟ್ರೀಯ ಮಟ್ಟದ ಸಮಾಲೋಚನೆ ಸಭೆಯನ್ನು ಆಯೋಜಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಾನೂನುಬದ್ಧ ಪರಿಷ್ಕರಣೆ ಪ್ರಾರಂಭವಾಗುವ ಮೊದಲು, ಎಲ್ಲ ಮತದಾರರಿಗೂ ಅಗತ್ಯ ದಾಖಲೆಗಳಿರುವುದನ್ನು ಖಚಿತಪಡಿಸಲು ಮತ್ತು ಪರಿಷ್ಕರಣೆ ನಡೆಯುವ ಸಮಯದಲ್ಲಿ ಯಾವುದೇ ಅರ್ಹ ಮತದಾರರು ಹೊರಗುಳಿಯದಂತೆ ನೋಡಿಕೊಳ್ಳಲು ವಾರ್ಡ್ ಮತ್ತು ಪಂಚಾಯತ್ ಮಟ್ಟದಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ಕೇರಳ ಮಾದರಿಯಲ್ಲಿ ಜನರಿಗೆ ಅಗತ್ಯ ದಾಖಲೆಗಳನ್ನು ಶೀಘ್ರದಲ್ಲಿ ಹಾಗೂ ಸಲುಭವಾಗುವಂತೆ ಮಾಡಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.






