ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ; ಅಂಗನವಾಡಿ ಕಾರ್ಯಕರ್ತೆಯರ ಆತಂಕ ಗಂಭೀರ ವಿಷಯ: ‘ನನ್ನ ಮತ, ನನ್ನ ಹಕ್ಕು’

ಸಾಂದರ್ಭಿಕ ಚಿತ್ರ | PC : PTI
ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಪೂರ್ವ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿನ ಅಕ್ರಮಗಳ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರ ಸಂಘವು ವ್ಯಕ್ತಪಡಿಸಿರುವ ಆತಂಕವು ಗಂಭೀರ ವಿಷಯವಾಗಿದೆ ಎಂದು ‘ನನ್ನ ಮತ ನನ್ನ ಹಕ್ಕು’ ಸಂಘಟನೆ ಹೇಳಿದೆ.
ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ವಕೀಲ ವಿನಯ್ ಶ್ರೀನಿವಾಸ್, ಮತದಾರರ ದಾಖಲೆಗಳನ್ನು ಕೃತಕವಾಗಿ ಸೃಷ್ಟಿಸುವಂತೆ ತಮ್ಮ ಮೇಲೆ ಒತ್ತಡ ಹೇರಲಾಗಿದೆ ಎಂದು ಹೇಳಿರುವುದು ಎಸ್ಐಆರ್ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮಗಳು ನಡೆಯುತ್ತಿರುವುದಕ್ಕೆ ಸ್ಪಷ್ಟ ಸೂಚನೆಯಾಗಿದೆ. ಇದಕ್ಕೆ ವಿರುದ್ಧವಾಗಿ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಅನ್ಬು ಕುಮಾರ್ ಅವರು ರಾಜ್ಯದಲ್ಲಿ ಸುಮಾರು ಶೇ.85 ಮ್ಯಾಪಿಂಗ್ ಪೂರ್ಣಗೊಂಡಿದೆ ಎಂದು ಹೇಳಿದ್ದರು. ಎಸ್ಐಆರ್ ಪ್ರಕ್ರಿಯೆಗೆ ಮ್ಯಾಪಿಂಗ್ ದತ್ತಾಂಶವೇ ಆಧಾರವಾಗಿರುವುದರಿಂದ, ಈ ಬೆಳವಣಿಗೆ ಮತದಾರರ ಹಕ್ಕುಗಳ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತದೆ ಎಂದಿದ್ದಾರೆ.
ಚುನಾವಣಾ ಆಯೋಗವು ಅಂಗನವಾಡಿ ಕಾರ್ಯಕರ್ತೆಯರ ಆತಂಕಗಳನ್ನು ಪರಿಹರಿಸಬೇಕು ಹಾಗೂ ಎಸ್ಐಆರ್ ಪ್ರಕ್ರಿಯೆಯನ್ನು ನಿರ್ವಹಿಸಲು ಅಗತ್ಯ ತರಬೇತಿ ನೀಡಬೇಕು. 50 ವರ್ಷಕ್ಕಿಂತ ಮೇಲ್ಪಟ್ಟ ಸಿಬ್ಬಂದಿ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಸಿಬ್ಬಂದಿಯನ್ನು ಎಸ್ಐಆರ್ ಕರ್ತವ್ಯಗಳಿಂದ ವಿನಾಯಿತಿ ನೀಡಬೇಕು. ತಪ್ಪಾದ ದಾಖಲೆಗಳನ್ನು ಸಿದ್ಧಪಡಿಸುವಂತೆ ಸಿಬ್ಬಂದಿಯನ್ನು ಒತ್ತಾಯಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಗಣತಿ, ಆಕ್ಷೇಪಣೆ ಮತ್ತು ಹಕ್ಕು ದಾವೆಗಳ ಪ್ರಕ್ರಿಯೆ ಹಾಗೂ ಅಂತಿಮ ಮತದಾರರ ಪಟ್ಟಿಯ ಪ್ರಕಟಣೆಯ ಪ್ರತಿ ಹಂತದ ಅವಧಿಯನ್ನು ಒಂದು ತಿಂಗಳಿಂದ ಮೂರು ತಿಂಗಳಿಗೆ ವಿಸ್ತರಿಸಬೇಕು ಎಂದು ವಿನಯ್ ಶ್ರೀನಿವಾಸ್ ಒತ್ತಾಯಿಸಿದ್ದಾರೆ.
‘ಎಸ್ಐಆರ್’ ಮುಂದುವರಿದ ಜಾಥಾ: ‘ಎಸ್ಐಆರ್ ಜನಜಾಗೃತಿ ಜಾಥಾ’ದ ಎರಡನೆ ದಿನ ಶಿವಾಜಿನಗರ ಬಸ್ ನಿಲ್ದಾಣದಲ್ಲಿ ಪ್ರಾರಂಭವಾಗಿ ಶಿವಾಜಿನಗರ ಮಾರುಕಟ್ಟೆ, ಕೆ.ಆರ್.ಮಾರುಕಟ್ಟೆ, ಪಾದರಾಯನಪುರ, ವಿಜಯನಗರ ಮಾರುಕಟ್ಟೆ, ಮೈಸೂರು ರಸ್ತೆಯ ಬಳಿಯ ಗಂಗೊಂಡನಹಳ್ಳಿಯ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲಾಯಿತು. ಜಾಗೃತಿ ಅಭಿಯಾನದ ಜೊತೆಯಲ್ಲೇ ಸಹಿ ಸಂಗ್ರಹ ಅಭಿಯಾನವನ್ನೂ ನಡೆಸಲಾಗುತ್ತಿದ್ದು, ಎರಡು ದಿನಗಳಲ್ಲಿ ಸಾವಿರಾರು ಸಹಿಗಳನ್ನು ಸಂಗ್ರಹಿಸಲಾಗಿದೆ.






