ನಾಳೆ ಎಸ್‍ಐಆರ್ ವಿರೋಧಿ ಪ್ರತಿಭಟನಾ ಸಮಾವೇಶ

ಬೆಂಗಳೂರು : ಮತಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(ಎಸ್‍ಐಆರ್) ಪ್ರಕ್ರಿಯೆ ಕರ್ನಾಟಕದಲ್ಲಿ ನಾಳೆಯಿಂದ(ಜೂ.20)ನಿಂದ ಅಧಿಕೃತವಾಗಿ ಪ್ರಾರಂಭವಾಗುತ್ತದೆ. ಆಂತರಿಕ ತರಬೇತಿ ಮತ್ತು ತಯಾರಿ ಶುರುವಾಗುತ್ತದೆ. ಈ ವೇಳೆ ಕರ್ನಾಟಕದ ಪ್ರಗತಿಪರ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳೆಲ್ಲಾ ಸೇರಿ ಎಸ್‍ಐಆರ್ ವಿರುದ್ಧ ನಾಳೆ(ಜೂ.20) ನಗರದ ಫ್ರೀಡಂಪಾರ್ಕ್‍ನಲ್ಲಿ ಬೆಳಗ್ಗೆ 10:30ಕ್ಕೆ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಂಡಿವೆ.
ಶುಕ್ರವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಕರ್ನಾಟಕ ಜನಶಕ್ತಿಯ ನೂರ್ ಶ್ರೀಧರ್, ರೈತ ಸಂಘದ ಜೆ.ಎಂ.ವೀರಸಂಗಯ್ಯ, ಜಮಾತೆ ಇಸ್ಲಾಮ್ ಹಿಂದ್ ಸಂಘಟನೆಯ ಮುಹಮ್ಮದ್ ಯೂಸಫ್ ಕನ್ನಿ, ಎದ್ದೇಳು ಕರ್ನಾಟಕದ ತಾರಾ ರಾವ್, ಅಮ್ಜದ್ ಪಾಷಾ, ವಿಚಾರ ವೇದಿಕೆಯ ನಾಗೇಶ್ ಅರಳಕುಪ್ಪೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಪ್ರತಿಭಟನಾ ಸಮಾವೇಶದಲ್ಲಿ ನಾಗರಿಕ ಅತಿ ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ಚುನಾವಣಾ ಆಯೋಗ ಮತ್ತು ಸರಕಾರವನ್ನು ಆಹ್ವಾನಿಸಿದ್ದೇವೆ ಎಂದರು.
ಸಮಾವೇಶಕ್ಕೆ ಪೂರಕವಾಗಿ ಜೂ.13 ರಿಂದ ‘ಎದ್ದೇಳು ಕರ್ನಾಟಕ’ ಸಹಯೋಗದೊಂದಿಗೆ ಐದು ಮಾರ್ಗಗಳಲ್ಲಿ ರಾಜ್ಯವ್ಯಾಪಿ ಜಾಥ ಸಂಘಟಿಸಿ ಯಶಸ್ವಿಯಾಗಿ ಮುಗಿಸಲಾಗಿದೆ. ಜಾಥಾ ಅವಧಿಯಲ್ಲಿ ರಾಜ್ಯಾದ್ಯಂತ ಎಲ್ಲ ತಾಲೂಕು ಕೇಂದ್ರಗಳಿಗೂ ಭೇಟಿ ನೀಡಲಾಗಿದೆ. ಈ ವೇಳೆಯಲ್ಲಿ ಸುಮಾರು 170ಕ್ಕೂ ಹೆಚ್ಚು ವಿವಿಧ ರೀತಿಯ ಜಾಗೃತಿ ಚಟುವಟಿಕೆಗಳು ನಡೆದಿವೆ. ಜನರು ಎಸ್‍ಐಆರ್ ನ ಅಪಾಯ ಹಾಗೂ ಅದರ ಹಿಂದಿನ ಷಡ್ಯಂತ್ರವನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ ಎಂದು ಹೋರಾಟಗಾರರು ವಿವರಿಸಿದರು.
ನಾಳೆಯ ಸಮಾವೇಶಕ್ಕೆ ಸರ್ವಧರ್ಮಿಯರ ಪ್ರತಿನಿಧಿಗಳಾಗಿ ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮಿ, ರೆವರೆಂಟ್ ಪೀಟರ್ ಮಚಾದೋ, ಆರ್.ಟಿ.ರೆವರೆಂಡ್ ಬಿಪಿ ಸುಸೈನಾಥನ್, ಮೈತ್ರೇಯಿ ಮಾತಾಜಿ, ಬಲಜಿತ್ ಸಿಂಗ್, ಮೌಲಾನ ಝುಲ್ಫಿಖಾರ್ ನೂರಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಸಾಂಸ್ಕೃತಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದ ಸುಮಾರು 230ಕ್ಕೂ ಹೆಚ್ಚು ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಸಮಾವೇಶದಲ್ಲಿ ಚುನಾವಣಾ ಆಯೋಗದ ಮುಂದೆ ಆರು ಪ್ರಶ್ನೆಗಳನ್ನು, ನಾಲ್ಕು ಪ್ರಸ್ತಾಪಗಳು ಮತ್ತು ರಾಜ್ಯ ಸರಕಾರ ತೆಗೆದುಕೊಳ್ಳಬೇಕಾದ ಅತ್ಯಗತ್ಯ ಐದು ಕ್ರಮಗಳ ಪ್ರಸ್ತಾಪವನ್ನು ಮುಂದಿಡುತ್ತಿದ್ದೇವೆ. ಕರ್ನಾಟಕದ ಎಲ್ಲ ಸಂವಿಧಾನ ಪ್ರೇಮಿಗಳು ದೊಡ್ಡ ಸಂಖ್ಯೆಯಲ್ಲಿ ಸಮಾವೇಶಕ್ಕೆ ಆಗಮಿಸಬೇಕು. ಎಸ್‍ಐಆರ್ ಎಂಬ ಅಶ್ವವೇಧದ ಕುದುರೆಯನ್ನು ಕಟ್ಟಿಹಾಕಲೇಬೇಕಿರುವುದರಿಂದ ಈ ಮಹಾ ಕಾಯಕದಲ್ಲಿ ಎಲ್ಲರೂ ಜೊತೆಗಿರಬೇಕಿದೆ ಮತ್ತು ‘ಇದು ಕರ್ನಾಟಕ ನಡೆಯದು ಇಲ್ಲಿ ಯಾವುದೇ ರೀತಿಯ ದುಷ್ಟ ಆಟ’ ಎಂದು ಕಟ್ಟೆಚ್ಚರನ್ನು ನೀಡಲೇ ಬೇಕಿದೆ ಎಂದು ಹೋರಾಟಗಾರರು ಕರೆ ನೀಡಿದರು.
‘ನಾನು ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಆದರೂ ನನ್ನ ಬಳಿ ಪಾಸ್ ಪೋರ್ಟ್ ಇಲ್ಲ. ನಾನು ಎಸೆಸೆಲ್ಸಿಯ ವರೆಗೂ ಓದಿಲ್ಲ. ಅಂದರೆ, ಈಗ ನಾನು ಎಸ್‍ಐಆರ್‌ನಿಂದಾಗಿ ಮತದಾರರ ಪಟ್ಟಿಯಿಂದ ಹೊರಗುಳಿಯುತ್ತೇನೆ. ಮಾಜಿ ಮಂತ್ರಿಯಾಗಿ ನನ್ನ ಸ್ಥಿತಿಯೇ ಹೀಗಾದರೆ, ಸಾಮಾನ್ಯ ಬಡ ದಲಿತರು, ಆದಿವಾಸಿ, ಅಲ್ಪಸಂಖ್ಯಾತರ ಪರಿಸ್ಥಿತಿ ಏನು?’
-ಬಿ.ಟಿ.ಲಲಿತಾ ನಾಯಕ್, ಮಾಜಿ ಸಚಿವೆ
‘ಎಸ್‍ಐಆರ್ ಅನ್ನು ಯಾರೂ ತಡೆಯಲಾಗುತ್ತಿಲ್ಲ ಎಂಬ ಭ್ರಮೆ ಬಿಜೆಪಿಗಿದೆ. ಆದರೆ, ಬಿಜೆಪಿಯ ಭ್ರಮೆಯನ್ನು ಒಡೆದು ಹಾಕುವ, ಎಸ್‍ಐಆರ್ ಎಂಬ ಅಸಂವಿಧಾನಿಕ ಧೋರಣೆಯನ್ನು ಕರ್ನಾಟಕ ಹೇಗೆ ಹಿಮ್ಮೆಟ್ಟಿಸಲಿದೆ ಎಂಬುದರ ‘ಟ್ರೇಲರ್’ ಶನಿವಾರ ಫ್ರೀಡಂ ಪಾರ್ಕ್‍ನಲ್ಲಿ ಕಾಣಲಿದೆ’
-ನೂರ್ ಶ್ರೀಧರ್ ರಾಜ್ಯಾಧ್ಯಕ್ಷ, ಕರ್ನಾಟಕ ಜನಶಕ್ತಿ






