‘ರಾಜ್ಯದಲ್ಲಿ ತಾರ್ಕಿಕ ವ್ಯತ್ಯಾಸ ಅಳವಡಿಕೆ’ | ಕೋಟ್ಯಂತರ ಮತದಾರರ ಹೆಸರನ್ನು ಅಳಿಸಲು ಹುನ್ನಾರ : ಎಸ್ಐಆರ್ ವಿರೋಧಿ ಒಕ್ಕೂಟ

ಸಾಂದರ್ಭಿಕ ಚಿತ್ರ | Photo Credit : PTI
ಬೆಂಗಳೂರು : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ತಾರ್ಕಿಕ ವ್ಯತ್ಯಾಸ(ಲಾಜಿಕಲ್ ಡಿಸ್ಕ್ರಿಪೆನ್ಸಿ) ಸಾಫ್ಟ್ ವೇರ್ ಅಳವಡಿಸಿ, ರಾಜ್ಯದ ಕೋಟ್ಯಂತರ ಅರ್ಹ ಮತದಾರರ ಹೆಸರನ್ನು ಮತಪಟ್ಟಿಯಿಂದ ಅಳಿಸಲು ರಾಜ್ಯ ಚುನಾವಣಾ ಆಯೋಗ ಹುನ್ನಾರ ನಡೆಸಿದೆ ಎಂದು ಎಸ್ಐಆರ್ ವಿರೋಧಿ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ.
ಬುಧವಾರ ಒಕ್ಕೂಟದ ಜೆ.ಎಂ.ವೀರಸಂಗಯ್ಯ, ಕೆ.ಎಲ್.ಅಶೋಕ್, ಶ್ರೀಪಾದ್ ಭಟ್, ಸೀತಾರಮಗುಂಡಪ್ಪ, ಮುಹಮ್ಮದ್ ಯೂಸಫ್ ಕನ್ನಿ, ಫಾ.ಅರುಣ್ ಲೂಯಿಸ್, ಮಹಾಂತೇಶ್, ಡಾ.ಮ.ಪು.ಪೂರ್ಣಾನಂದ, ನಯನ, ಸ್ವಾತಿ, ಸರೋವರ್ ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ತಾರ್ಕಿಕ ವ್ಯತ್ಯಾಸವು 4 ವರ್ಗಗಳಲ್ಲಿ ನಡೆದಿತ್ತು. ಇದೀಗ ರಾಜ್ಯದಲ್ಲಿ 11 ವರ್ಗಗಳಾಗಿ ಮಾಡಿರುವುದಷ್ಟೇ ಅಲ್ಲದೇ, ಅಂತಿಮ ಕರಡುಪಟ್ಟಿಯ ನಂತರದಲ್ಲಿ ಹೊಸ ವರ್ಗಗಳನ್ನು ಸೇರ್ಪಡೆ ಮಾಡಬೇಕಾಗಬಹುದು ಎಂದು ರಾಜ್ಯ ಚುನಾವಣಾ ಆಯೋಗ ಹೇಳಿರುವುದು ಪತ್ರಿಕಾ ವರದಿಗಳಿಂದ ಬಹಿರಂಗವಾಗಿದೆ ಎಂದಿದ್ದಾರೆ.
ಕರ್ನಾಟಕದಲ್ಲಿ ಮತದಾರರು ದಾಖಲೆಗಳು ನೀಡುತ್ತೇವೆಂದು ಹೇಳುತ್ತಿರುವುದರಿಂದ ಮ್ಯಾಪಿಂಗ್-ದಾಖಲೆಗಳ ಮೂಲಕ ಹೆಚ್ಚಿನ ಜನರನ್ನು ಅಳಿಸಿಹಾಕಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕಾಗಿ ಚುನಾವಣಾ ಆಯೋಗ ತಾರ್ಕಿಕ ವ್ಯತ್ಯಾಸ ಮೂಲಕ ನಿಯಮ ಬಾಹಿರವಾಗಿ ವರ್ಗಗಳನ್ನು ಹೆಚ್ಚು ಮಾಡುತ್ತಾ, ಇನ್ನಷ್ಟು ಕಠಿಣ ಮಾಡುತ್ತಿದೆ. ಆಯೋಗಕ್ಕೆ ಅರ್ಹ ಮತದಾರರ ಹೆಸರನ್ನು ಡಿಲಿಟ್ ಮಾಡಲು ನೆಪಬೇಕಾಗಿದೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ನಡೆಯುತ್ತಿದ್ದ ಮತಪಟ್ಟಿ ಪರಿಷ್ಕರಣೆಯಲ್ಲಿ ಮತದಾರರಿಗೆ ಮತದಾನದ ಹಕ್ಕನ್ನು ನೀಡುತ್ತಿದ್ದರೆ, ಈಗ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ನೆಪಗಳನ್ನು ಹುಡುಕಿ ಅರ್ಹ ಮತದಾರರ ಮತದಾನದ ಹಕ್ಕನ್ನು ರದ್ದುಗೊಳಿಸುವ ಕ್ರೌರ್ಯದ ಕೆಲಸವನ್ನು ಮಾಡುತ್ತಿದ್ದಾರೆ. ಇದು ಜನರನ್ನು ಸಂಕಟಕ್ಕೀಡುಮಾಡುವುದು ಖಚಿತ. ತಾರ್ಕಿಕ ವ್ಯತ್ಯಾಸವನ್ನು ಕರ್ನಾಟಕದಲ್ಲಿ ಬಳಸಬಾರದು ಎನ್ನುವುದು ಎಸ್ಐಆರ್ ವಿರೋಧಿ ಒಕ್ಕೂಟದ ಮೊದಲ ಹಕ್ಕೊತ್ತಾಯ ಎಂದು ಅವರು ಹೇಳಿದ್ದಾರೆ.
ಎಸ್ಐಆರ್ನಲ್ಲಿ ಪಾರದರ್ಶಕತೆ ಇಲ್ಲ. ಯಾರನ್ನು-ಯಾಕೆ ತೆಗೆಯುತ್ತಿದ್ದಾರೆ ಎಂದು ಯಾರಿಗೂ ಗೊತ್ತಾಗುವುದಿಲ್ಲ. ಇಂತಹ ಸಂವಿಧಾನ ಬಾಹಿರ ಎಸ್ಐಆರ್ ಪ್ರಕ್ರಿಯೆಯನ್ನು ಒಪ್ಪುವುದಿಲ್ಲ. ಚುನಾವಣಾ ಆಯೋಗದ ವಿರುದ್ಧ ರಾಜ್ಯ ಸರಕಾರ ಆಕ್ಷೇಪಣೆ ಎತ್ತಬೇಕು. ರಾಜ್ಯದ ಜನತೆಯೂ ಇದರ ವಿರುದ್ಧ ಹೋರಾಟ ಮಾಡಬೇಕು. ಚುನಾವಣಾ ಆಯೋಗವು ಎಸ್ಐಆರ್ ಮೂಲಕ ಲಕ್ಷಾಂತರ ಜನರನ್ನು ಮತಪಟ್ಟಿಯಿಂದ ಅಳಿಸಲು ಹೊರಟಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ತುರ್ತಾಗಿ ರಾಜ್ಯ ಸರಕಾರ ತನ್ನದೇ ಆದ ಮತಪಟ್ಟಿ ಸಿದ್ದಪಡಿಸಿಕೊಳ್ಳಬೇಕು. ಯಾವುದೇ ಮತಪಟ್ಟಿ ಇದ್ದರೂ ಅದು ಗ್ರಾಮ ಸಭೆ, ವಾರ್ಡ್ ಸಭೆಗಳಲ್ಲಿ ಜನರ ಕಣ್ಣಮುಂದೆ ಪಾರದರ್ಶಕವಾಗಿ ಪರಿಶೀಲನೆಗೆ ಒಳಪಡಿಸಬೇಕು. ರಾಜ್ಯದ ಜನತೆ ಚುನಾವಣಾ ಆಯೋಗದ ಉದ್ದೇಶ ಏನು? ಮತಪಟ್ಟಿ ಪರಿಷ್ಕರಿಸಬೇಕೆಂದು ಮಾಡುತ್ತಿದ್ದಾರಾ? ಇಲ್ಲ, ಪ್ರಜಾತಂತ್ರವನ್ನೇ ನಾಶ ಮಾಡಲು ಹೊರಟಿದ್ದೀರಾ? ಎನ್ನುವ ಪ್ರಶ್ನೆಯನ್ನು ಒಕ್ಕೊರಲಿನಿಂದ ಕೇಳಬೇಕು ಎಂದು ಹೋರಾಟಗಾರರು ಕರೆ ನೀಡಿದ್ದಾರೆ.






