SIR | ನೋಟಿಸ್ ಅವಧಿ ಮೂರು ತಿಂಗಳ ವರೆಗೆ ವಿಸ್ತರಿಸಲು ಎಪಿಸಿಆರ್ ಆಗ್ರಹ

ಬೆಂಗಳೂರು : ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್‍ಐಆರ್) ಪ್ರಕ್ರಿಯೆಯಲ್ಲಿ ನೋಟಿಸ್ ಪಡೆದ ಮತದಾರರಾದ ವೃದ್ಧರು, ವಿಶೇಷಚೇತನರು ಹಾಗೂ ರೋಗಿಗಳು, ಅನಿವಾಸಿ ಭಾರತೀಯರಿಗೆ ನೇರ ಹಾಜರಾತಿಯಿಂದ ವಿನಾಯಿತಿ ನೀಡುವ ತೆಲಂಗಾಣ ಮಾದರಿ ಅನುಸರಿಸಬೇಕು ಮತ್ತು ನೋಟಿಸ್ ಅವಧಿಯನ್ನು 3 ತಿಂಗಳ ವರೆಗೆ ವಿಸ್ತರಿಸಬೇಕು ಎಂದು ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ಸಂಘಟನೆ ಆಗ್ರಹಿಸಿದೆ.
ಬುಧವಾರ ಮುಖ್ಯ ಚುನಾವಣಾಧಿಕಾರಿಗೆ ಮನವಿ ನೀಡಿರುವ ರಾಜ್ಯ ಸಂಯೋಜಕ ಮುಹಮ್ಮದ್ ಪೀರ್, ಅನಿವಾಸಿ ಭಾರತೀಯರಿಗೆ ಖುದ್ದಾಗಿ ವಿಚಾರಣೆಗೆ ಹಾಜರಾಗಲು ವಿನಾಯಿತಿ ನೀಡಿ, ದಾಖಲೆಯೊಂದಿಗೆ ಕುಟುಂಬದ ವಯಸ್ಕ ಸದಸ್ಯರು ಅಥವಾ ಆನ್‍ಲೈನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾತಿಗೆ ಅವಕಾಶ ನೀಡಬೇಕು. ಕಂದಾಯ ಇಲಾಖೆಯಲ್ಲಿ ಜಾತಿ/ ಖಾಯಂ ವಾಸಸ್ಥಳ/ ವಂಶಾವಳಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಇದುವರೆಗೂ ಪ್ರಮಾಣ ಪತ್ರ ದೊರಕದಿರುವ ಮತದಾರರಿಗೆ ನೋಟಿಸ್‍ಗೆ ಪ್ರತಿಕ್ರಿಯಿಸಲು ದಿನಾಂಕವನ್ನು ಮುಂದೂಡಬೇಕು ಎಂದು ಹೇಳಿದ್ದಾರೆ.
ಇಡೀ ದೇಶಾದ್ಯಂತ ನಡೆಯುತ್ತಿರುವ ಎಸ್‍ಐಆರ್ ಪ್ರಕ್ರಿಯೆಯಲ್ಲಿ ಮೂರನೇ ಹಂತದ ರಾಜ್ಯಗಳಲ್ಲಿ ಒಂದಾದ ತೆಲಂಗಾಣದಲ್ಲಿಯೂ ನೋಟಿಸ್ ಅವಧಿ ನಡೆಯುತ್ತಿದ್ದು, ಅಲ್ಲಿನ ಮುಖ್ಯ ಚುನಾವಣಾಧಿಕಾರಿ ನೋಟಿಸ್ ಪಡೆದ ಮತದಾರರಾದ ವೃದ್ಧರು, ವಿಶೇಷಚೇತನರು, ರೋಗಿಗಳು ಹಾಗೂ ಅನಿವಾಸಿ ಭಾರತೀಯರಿಗೆ ಖುದ್ದಾಗಿ ವಿಚಾರಣೆಗೆ ಹಾಜರಾಗಲು ವಿನಾಯಿತಿ ನೀಡಿ ಆದೇಶವನ್ನು ಹೊರಡಿಸಿದ್ದಾರೆ ಎಂದು ಮುಹಮ್ಮದ್ ಪೀರ್ ತಿಳಿಸಿದ್ದಾರೆ.




