‘ಎಸ್‍ಐಆರ್ ರದ್ಧತಿ’ಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಬೃಹತ್ ಮೆರವಣಿಗೆ
ಪುರಭವನದಿಂದ ಫ್ರೀಡಂ ಪಾರ್ಕ್‍ವರೆಗೂ ರಾಷ್ಟ್ರಧ್ವಜ ಹಿಡಿದು ಸಾಗಿದ ಸಾವಿರಾರು ಜನ

ಬೆಂಗಳೂರು : ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್‍ಐಆರ್)ಪ್ರಕ್ರಿಯೆಯನ್ನು ವಿರೋಧಿಸಿ ಹಾಗೂ ಉದ್ದೇಶಪೂರ್ವಕವಾಗಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂದು ಆರೋಪಿಸಿ ದೇಶಾದ್ಯಂತ ವಿವಿಧೆಡೆ ಪ್ರತಿಭಟನೆಯ ಕಾವು ಜೋರಾಗಿದ್ದು, ಶುಕ್ರವಾರ ಸಂಜೆ ಬೆಂಗಳೂರಿನ ಪುರಭವನದಿಂದ ಫ್ರೀಡಂ ಪಾರ್ಕ್ ವರೆಗೂ ಪ್ರತಿಭಟನಾಕಾರರು ರಾಷ್ಟ್ರಧ್ವಜ ಹಿಡಿದು ಬೃಹತ್ ಮೆರವಣಿಗೆಯನ್ನು ನಡೆಸಿದರು.
ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಧಿಕ್ಕಾರ ಕೂಗಿದ ಸಾವಿರಾರು ಜನರು, ಕೂಡಲೇ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪುರಭವನದ ಎದುರು ಪ್ರತಿಭಟನಾಕಾರರು ಜಮಾಯಿಸಿದ್ದ ವೇಳೆ ಹೈಕೋರ್ಟ್ ಆದೇಶವನ್ನು ಪ್ರಸ್ತಾಪಿಸಿದ ಐಪಿಎಸ್ ಅಧಿಕಾರಿ ಅಕ್ಷಯ್ ಎಂ. ಹಾಕೆ ಅವರು, ಪುರಭವನದ ವ್ಯಾಪ್ತಿಯಲ್ಲಿ ಯಾವುದೇ ಪ್ರತಿಭಟನೆ ಹಾಗೂ ಘೋಷಣೆಗಳನ್ನು ಕೂಗದಂತೆ ತಿಳಿಸಿದರು.
ಆಗ ಪ್ರತಿಭಟನಾಕಾರರು ತಮ್ಮ ಹಕ್ಕನ್ನು ಪೊಲೀಸರು ಕಿತ್ತುಕೊಳ್ಳಲು ಬರಬೇಡಿ ಎನ್ನುತ್ತಾ ‘ಜೈ ಭೀಮ್.. ಇಂಕ್ವಿಲಾಬ್ ಝಿಂದಾಬಾದ್..’ ಎಂದು ಏರಿದ ಧ್ವನಿಯಲ್ಲಿ ಕಾರ್ಯಕರ್ತರು, ಘೋಷಣೆಗಳನ್ನು ಕೂಗಿದರು. ಇದೇ ಸಮಯದಲ್ಲಿ ಪ್ರತಿಭಟನಾನಿರತ ಮುಖಂಡರು ಹಾಗೂ ಪೊಲೀಸರೊಂದಿಗೆ ಕೆಲಕಾಲ ವಾಗ್ವಾದ ನಡೆಯಿತು.
ಅಂತಿಮವಾಗಿ ಟೌನ್‍ಹಾಲ್‍ನಲ್ಲಿ ಪ್ರತಿಭಟನೆ ನಡೆಸಲು ಪೊಲೀಸರು ಅವಕಾಶ ನೀಡದಿದ್ದಾಗ ಅಲ್ಲಿಂದ ಪ್ರತಿಭಟನಾಕಾರರು ಸಾಲಾಗಿ ಫ್ರೀಡಂಪಾರ್ಕ್ ಕಡೆಗೆ ಸಂವಿಧಾನದ ಪೀಠಿಕೆಯೊಂದಿಗೆ ರಾಷ್ಟ್ರಧ್ವಜ ಹಿಡಿದು ಮೆರವಣಿಗೆ ನಡೆಸಿದರು. ‘ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಿ, ಎಸ್‍ಐಆರ್ ಪ್ರಕ್ರಿಯೆ ತಕ್ಷಣ ನಿಲ್ಲಿಸಿ ಮತ್ತು ಮತ ಕಳ್ಳತನವನ್ನು ನಾವು ಸಹಿಸುವುದಿಲ್ಲ’ ಎಂಬ ಘೋಷಣೆಗಳು ಮೆರವಣಿಗೆಯುದ್ದಕ್ಕೂ ಮೊಳಗಿದವು.
ಈ ಮೆರವಣಿಗೆಯಲ್ಲಿ ವಿದ್ಯಾರ್ಥಿ, ಯುವಜನ, ರೈತ, ಕಾರ್ಮಿಕ, ಮಹಿಳಾ ಮತ್ತು ಪ್ರಗತಿಪರ ಹಾಗೂ ಜನಪರ ಸಂಘಟನೆಗಳು ಭಾಗಿಯಾಗಿದ್ದವು. ರಸ್ತೆಯುದ್ದಕ್ಕೂ ಪೊಲೀಸ್ ಸಿಬ್ಬಂದಿಯ ಬಿಗಿ ಭದ್ರತೆಯೊಂದಿಗೆ ಸುಸೂತ್ರವಾಗಿ ಮೆರವಣಿಗೆ ಫ್ರೀಡಂ ಪಾರ್ಕ್ ತಲುಪಿತು.
ಬಳಿಕ ಫ್ರೀಡಂ ಪಾರ್ಕ್‍ನ ಪ್ರತಿಭಟನಾ ವೇದಿಕೆಯಲ್ಲಿ ಮಾತನಾಡಿದ ಎಸ್‍ಐಆರ್ ವಿರೋಧಿ ಕರ್ನಾಟಕ ವೇದಿಕೆಯ ನೂರ್ ಶ್ರೀಧರ್, ‘ದೇಶಾದ್ಯಂತ ಜನರು ಈ ಅಸಾಂವಿಧಾನಿಕ ಮತದಾರರ ಪಟ್ಟಿ ಪರಿಷ್ಕರಣೆಯ ಪರಿಣಾಮಗಳನ್ನು ಕ್ರಮೇಣ ಅರ್ಥಮಾಡಿಕೊಳ್ಳುತ್ತಿದ್ದಾರೆ. ಎಸ್‍ಐಆರ್ ವಿರೋಧಿ ಹೋರಾಟ ಐತಿಹಾಸಿಕ ಪುಟಗಳಲ್ಲಿ ಸೇರಿಕೊಳ್ಳಲಿದೆ. ದೇಶಾದ್ಯಂತ ಎಸ್‍ಐಆರ್ ಆಂದೋಲನಕ್ಕೆ ಕರ್ನಾಟಕವು ಮೊದಲಿಗೆ ನಾಂದಿ ಹಾಡಿದೆ’ ಎಂದರು.
ಎಸ್‍ಐಆರ್ ಪ್ರಕ್ರಿಯೆಗೆ ನಾವು ಆರಂಭದಿಂದಲೂ ತಾತ್ವಿಕವಾಗಿ ವಿರೋಧಿಸುತ್ತಲೇ ಬಂದಿದ್ದೇವೆ. ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಹಲವು ತಿಂಗಳು ರಚನಾತ್ಮಕವಾಗಿ ಕೆಲಸ ಮಾಡಿದ್ದೇವೆ. ಆದರೂ ಕೊನೆಯಲ್ಲಿ ಬಂದ ಎಎಸ್‍ಡಿಡಿಒ ಪಟ್ಟಿಯೇ ಆತಂಕಕಾರಿ ಆಗಿದ್ದು, ಅದರಲ್ಲಿ ಸಾಕಷ್ಟು ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿದಿದ್ದಾರೆ. ಈ ಪ್ರಕ್ರಿಯೆ ಅವೈಜ್ಞಾನಿಕವಾದದ್ದು. ಚುನಾವಣಾ ಆಯೋಗವು ಕೇಂದ್ರ ಸರಕಾರದ ಮುಖವಾಡವಾಗಿದೆ ಎಂದು ನೂರ್ ಶ್ರೀಧರ್ ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಎಂ ಕಾರ್ಯದರ್ಶಿ ಕೆ.ಪ್ರಕಾಶ್ ಮಾತನಾಡಿ, ‘ದೋಷಪೂರಿತ ಎಸ್‍ಐಆರ್ ರದ್ದಾಗಬೇಕು. ಕೇಂದ್ರ ಮುಖ್ಯ ಚುನಾವಣಾಧಿಕಾರಿ ರಾಜೀನಾಮೆ ನೀಡಬೇಕು. ಈ ಅಕ್ರಮ ನಡೆಸುವ ಸರ್ವಾಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡಿದ ಮೋದಿ ಸರಕಾರ ದೇಶದ ಜನರಲ್ಲಿ ಕ್ಷಮೆ ಕೋರಬೇಕು ಹಾಗೂ ಚುನಾವಣಾ ಆಯೋಗದ ಆಯ್ಕೆ ಪದ್ದತಿಯನ್ನೇ ರದ್ದುಗೊಳಿಸಿ, ಮೊದಲಿನ ಸ್ಥಿತಿಗೆ ತರಬೇಕು’ ಎಂದು ಒತ್ತಾಯಿಸಿದರು.
ಈ ವೇಳೆ ಸಂವಿಧಾನ ತಜ್ಞ ಪ್ರೊ.ರವಿವರ್ಮ ಕುಮಾರ್, ಶಿಕ್ಷಣ ತಜ್ಞ ಪ್ರೊ.ನಿರಂಜನಾರಾಧ್ಯ, ಲೇಖಕ ಆರ್.ಜಿ.ಹಳ್ಳಿ ನಾಗರಾಜ್, ದಲಿತ ಮುಖಂಡ ಎನ್.ವೆಂಕಟೇಶ್, ವಿನಯ್ ಶ್ರೀನಿವಾಸ್, ಮೂರ್ತಿ, ನಾಗೇಶ್, ಕರಿಯಪ್ಪ ಗುಡಿಮನಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.






