ಎಸ್ಐಆರ್ ಒಂದು ಹಗರಣ : ನಟ ಕಿಶೋರ್ ಕುಮಾರ್

ನಟ ಕಿಶೋರ್ ಕುಮಾರ್
ಬೆಂಗಳೂರು : ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್ಐಆರ್) ಸಹಜವಾಗಿ ನಡೆಯಬೇಕಿದ್ದ ಆಡಳಿತಾತ್ಮಕ ಪ್ರಕ್ರಿಯೆ. ಆದರೆ ಈಗ ಎಸ್ಐಆರ್ ಒಂದು ಹಗರಣ(ಸ್ಕ್ಯಾಮ್)ತರಹ ಕಾಣುತ್ತಿದೆ. ಎಸ್ಐಆರ್ ಉದ್ದೇಶಗಳು ತುಂಬಾ ಸ್ಪಷ್ಟವಾಗಿವೆ ಎಂದು ನಟ ಕಿಶೋರ್ ಕುಮಾರ್ ತಿಳಿಸಿದ್ದಾರೆ.
ಗುರುವಾರ ನಗರದ ಗಾಂಧಿ ಭವನದಲ್ಲಿ ನಾಗರಿಕ ಮತ ಕಾವಲು ಸಮಿತಿಯ ವತಿಯಿಂದ ಆಯೋಜಿಸಿದ್ದ ಮತಹರಣ ವಿರುದ್ಧ ಸಾಂಸ್ಕೃತಿಕ ಪ್ರತಿರೋಧ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಸ್ಐಆರ್ ನಡೆಸುತ್ತಿರುವ ದೇಶದ ಚುನಾವಣಾ ಆಯೋಗದ ಪಾರದರ್ಶಕತೆ, ಅದರ ಮೇಲಿನ ನಂಬಿಕೆ ಪ್ರಶ್ನಾರ್ಹವಾಗಿರುವಾಗ, ಚರ್ಚೆಗೆ ಒಳಪಟ್ಟಿರುವಾಗ ನಾವು ಮಾಡುತ್ತಿರುವ ಕೆಲಸಗಳು ಜನಪರವಾಗಿರುತ್ತವೆ ಎಂದು ಹೇಳಿದರು.
ಮುಖ್ಯ ಚುನಾವಣಾಧಿಕಾರಿಗಳ ಆಯ್ಕೆ ಸಮಿತಿಯಲ್ಲಿ ಪ್ರಧಾನಮಂತ್ರಿ, ವಿರೋಧ ಪಕ್ಷದ ನಾಯಕ ಹಾಗೂ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳು ಇರುತ್ತಿದ್ದರು. ಆದರೆ ಕೂಡಲೇ ಒಂದು ಕಾನೂನು ತಂದು ಸಿಜೆಐ ಅವರನ್ನು ಸಮಿತಿಯಿಂದ ಹೊರಗಿಡಲಾಯಿತು. ಅಲ್ಲಿಂದ ಚುನಾವಣಾ ಭ್ರಷ್ಟಾಚಾರ ಪ್ರಾರಂಭವಾಯಿತು. ಇದು ನಮ್ಮ ದೇಶದ ಸಂವಿಧಾನಕ್ಕೆ ಎಸಗುವ ದೊಡ್ಡ ದ್ರೋಹವಾಗಿದೆ ಎಂದು ಅಭಿಪ್ರಾಯಪಟ್ಟರು.
ನಂತರ ವಿವಿಧ ರಾಜ್ಯಗಳಲ್ಲಿ ಚುನಾವಣೆಗಳು ನಡೆದವು. ಅದರಲ್ಲಿ ಮತಗಳ್ಳತನವಾಯಿತು. ಇಷ್ಟು ಮಾತ್ರ ಸಾಲುವುದಿಲ್ಲ ಎಂದು ಸರ್ವಾಧಿಕಾರವನ್ನು ಮುಂದುವರಿಸಿ ಎಸ್ಐಆರ್ ಮೊದಲ ಹಂತದಲ್ಲಿ ಯಾರು ಅಧಿಕಾರದಲ್ಲಿರುವವರಿಗೆ ಮತ ನೀಡುವುದಿಲ್ಲವೋ, ಅಂತವರನ್ನು ಮತಪಟ್ಟಿಯಿಂದಲೇ ಅಳಿಸಿ ಹಾಕುವ ಕೆಲಸ ನಡೆಸಲಾಯಿತು. ಆ ಮೂಲಕ ಭ್ರಷ್ಟಾಚಾರದ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಲಾಯಿತು ಎಂದರು.
ಎಸ್ಐಆರ್ ಮೂಲಕ ಮನಸ್ಸಿಗೆ ಬಂದಂತೆ ಮತಗಳನ್ನು ಅಳಿಸಿ ಹಾಕಲಾಗುತ್ತಿದೆ. ಅದರ ಜೊತೆಗೆ ನಿಂತಿರುವುದು ನ್ಯಾಯಾಂಗ. ಇದು ಪ್ರಜಾಪ್ರಭುತ್ವದ ದೊಡ್ಡ ದುರಂತ. ಎಸ್ಐಆರ್ ಕಾನೂನಿನ ಚೌಕಟ್ಟಿನಲ್ಲಿ ನಡೆಯುತ್ತಿರುವ ಪ್ರಕ್ರಿಯೆ ಎಂದು ಕೊನೆಗೆ ನ್ಯಾಯಾಂಗವೇ ಹೇಳಿತು. ಅಲ್ಲಿಗೆ ನಾವು ಯಾರಿಂದ ಏನನ್ನು ನಿರೀಕ್ಷಿಸಬಹುದು ಎಂದು ಪ್ರಶ್ನಿಸಿದರು.
ಇವತ್ತು ಹೋರಾಟ ಯಾಕೆ ಅನಿವಾರ್ಯ ಎಂದರೆ, ಎಸ್ಐಆರ್ ಯಾರು ಮಾಡುತ್ತಿದ್ದಾರೆ. ಅದರಿಂದ ಏನು ಮಾಡುತ್ತಿದ್ದಾರೆ. ಯಾಕೆ ಮಾಡುತ್ತಿದ್ದಾರೆಂದರೆ ಒಂದು ಪಕ್ಷದ ಅಧಿಕಾರವನ್ನು ಉಳಿಸಿಕೊಳ್ಳಲು. ನಮ್ಮ ಸಂಬಳ ತೆಗೆದುಕೊಂಡು, ಪ್ರಜಾಪ್ರಭುತ್ವಕ್ಕೆ ದ್ರೋಹ ಎಸಗುತ್ತಿರುವ ಚುನಾವಣಾಧಿಕಾರಿಗಳನ್ನು ಇಟ್ಟುಕೊಂಡು ಯಾವ ರೀತಿಯ ಪಾರದರ್ಶಕವಾದ ಎಸ್ಐಆರ್ ನಡೆಸಲು ಸಾಧ್ಯ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ನಾಗರಿಕ ಮತ ಕಾವಲು ಸಮಿತಿಯ ಜೆ.ಎಂ.ವೀರಸಂಗಯ್ಯ, ಕಲಾವಿದೆ ಮಂಜುಳಾ, ಶಶಿರಾಜ್ ಮತ್ತಿತರರು ಹಾಜರಿದ್ದರು.






