ಖರ್ಗೆ ರ್ಯಾಲಿ ನಡೆಸಿದ 'ಸ್ಥಳ ಶುದ್ಧೀಕರಣ' | ಹೀನ ಮನಸ್ಥಿತಿಯ ಪ್ರತೀಕ : ಎಂಎಲ್ಸಿ ಕೆ.ಶಿವಕುಮಾರ್ ಖಂಡನೆ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (File Photo: PTI)
ಬೆಂಗಳೂರು: ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡದ ಹಲ್ದ್ವಾನಿಯಲ್ಲಿ ಭಾಷಣ ಮಾಡಿ ತೆರಳಿದ ಬಳಿಕ ಕೆಲವು ಸಂಘಟನೆಗಳು ವೇದಿಕೆಯನ್ನು ಶುದ್ಧೀಕರಣ ಮಾಡಿರುವ ಘಟನೆಯನ್ನು ಹಿರಿಯ ಪತ್ರಕರ್ತ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ.
ಐದು ದಶಕಗಳ ಕಾಲ ಸಾರ್ವಜನಿಕ ಬದುಕಿನಲ್ಲಿರುವ ರಾಷ್ಟ್ರೀಯ ಪಕ್ಷದ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರನ್ನು ಈ ರೀತಿಯ ಆಚರಣೆಗಳ ಮೂಲಕ ಅಪಮಾನಿಸಿರುವುದು ಹೀನ ಮನಸ್ಥಿತಿಯ ಪ್ರತೀಕವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಸ್ಪೃಶ್ಯತೆ ಮತ್ತು ತಾರತಮ್ಯದ ಇಂತಹ ಘಟನೆಗಳಿಂದ ದೇಶದ ಕೋಟ್ಯಂತರ ಆದಿವಾಸಿಗಳು ಹಾಗೂ ದಲಿತರು ಮಾನಸಿಕ ಆಘಾತಕ್ಕೊಳಗಾಗಿದ್ದಾರೆ. ಈ ಕೃತ್ಯ ಸಂವಿಧಾನದ ಆಶಯಗಳಿಗೆ ಧಕ್ಕೆ ಉಂಟುಮಾಡಿದ್ದು, ಸಮಾನತೆ ಇನ್ನೂ ಮರೀಚಿಕೆಯಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.
ಘಟನೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಕೃತ್ಯ ಎಸಗಿದವರನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.
ಸಂವಿಧಾನ ಹಾಗೂ ಸಮಾನತೆಯನ್ನು ನಂಬಿರುವ ಕೋಟ್ಯಂತರ ಜನರು ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಇದ್ದಾರೆ. ಇಂತಹ ಅಸಂವಿಧಾನಿಕ ಘಟನೆಗಳು ದೇಶದ ಬಗ್ಗೆ ಜಗತ್ತಿಗೆ ಯಾವ ಸಂದೇಶ ನೀಡುತ್ತವೆ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.






