ಸರ್ಕಾರ, ಸೊಸೈಟಿಗಳಿಂದ ಪಡೆದ ನಿವೇಶನದಲ್ಲಿ 5 ವರ್ಷಗಳಲ್ಲಿ ಮನೆ ಕಟ್ಟದಿದ್ದರೆ ನಿವೇಶನ ವಾಪಸ್: ಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ಬಿಡಿಎ, ಸಿಐಟಿಬಿ, ಕಾರ್ಪೊರೇಷನ್ ಅಥವಾ ಸೊಸೈಟಿಗಳಿಂದ ಪಡೆದ ನಿವೇಶನಗಳಲ್ಲಿ ಐದು ವರ್ಷಗಳೊಳಗೆ ಮನೆ ನಿರ್ಮಿಸಬೇಕು. ನಿಯಮ ಪಾಲಿಸದಿದ್ದರೆ ದುಪ್ಪಟ್ಟು ತೆರಿಗೆ ವಿಧಿಸುವುದರ ಜೊತೆಗೆ ಅಗತ್ಯವಿದ್ದರೆ ನಿವೇಶನವನ್ನೇ ಹಿಂಪಡೆಯಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದರು.
ಹೆಬ್ಬಾಳ ಜಂಕ್ಷನ್‌ನಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನಕ್ಕೆ ಚಾಲನೆ ನೀಡಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿವೇಶನಗಳನ್ನು ವರ್ಷಗಳ ಕಾಲ ಖಾಲಿ ಬಿಟ್ಟು ಕಸದ ತಾಣಗಳಾಗಲು ಅವಕಾಶ ನೀಡಲಾಗುವುದಿಲ್ಲ ಎಂದರು.
“20-30 ವರ್ಷಗಳಾದರೂ ಕೆಲವರು ಮನೆ ಕಟ್ಟಿಲ್ಲ. ಅಂತಹವರಿಗೆ ಅವರು ಪಾವತಿಸಿರುವ ಹಣವನ್ನು ಬಡ್ಡಿ ಸಮೇತ ಹಿಂದಿರುಗಿಸಿ ನಿವೇಶನವನ್ನು ಸರ್ಕಾರ ವಾಪಸ್ ಪಡೆಯಲಿದೆ. ನಿವೇಶನ ಪಡೆದವರು ಮನೆ ನಿರ್ಮಿಸಿ, ಸ್ವಚ್ಛತೆ ಕಾಪಾಡುವುದು ಅವರ ಜವಾಬ್ದಾರಿ” ಎಂದು ಹೇಳಿದರು.
ಬೆಂಗಳೂರಿನ ಸ್ವಚ್ಛತೆ ಕಾಪಾಡುವುದು ಸರ್ಕಾರದಷ್ಟೇ ನಾಗರಿಕರ ಕರ್ತವ್ಯವೂ ಆಗಿದೆ. “ಬೆಂಗಳೂರು ಸರ್ಕಾರದ ಆಸ್ತಿಯಲ್ಲ, ಪ್ರತಿಯೊಬ್ಬ ನಾಗರಿಕರ ಆಸ್ತಿ. ನಿಮ್ಮ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟರೆ ನಗರವೂ ಸ್ವಚ್ಛವಾಗಿರುತ್ತದೆ” ಎಂದು ತಿಳಿಸಿದರು.
ಕಸ ಸುರಿಯುವ ವಾಹನಗಳ ವಿರುದ್ಧ ಕಠಿಣ ಕ್ರಮ :
ನಗರದಲ್ಲಿ ನಿಗದಿತ ಸ್ಥಳಗಳ ಹೊರತಾಗಿ ಕಟ್ಟಡ ತ್ಯಾಜ್ಯ ಅಥವಾ ಕಸ ಸುರಿಯುವ ವಾಹನಗಳನ್ನು ಯಾವುದೇ ಮುಲಾಜಿಲ್ಲದೆ ಮುಟ್ಟುಗೋಲು ಹಾಕಿಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿರುವುದಾಗಿ ಸಿಎಂ ಹೇಳಿದರು. ಈ ಹಿಂದೆ ನೋಟಿಸ್ ಹಾಗೂ ಸಿಸಿಟಿವಿ ಕಣ್ಗಾವಲು ಮೂಲಕ ನಿಯಂತ್ರಣ ಸಾಧಿಸಲಾಗಿದ್ದರೂ ಮತ್ತೆ ನಿಯಮ ಉಲ್ಲಂಘನೆ ಹೆಚ್ಚಾಗಿದೆ ಎಂದು ಹೇಳಿದರು.
ಅಧಿಕಾರಿಗಳ ಮೇಲಿನ ದಾಳಿ ಸರ್ಕಾರದ ಮೇಲಿನ ದಾಳಿ :
ಶಿವಾಜಿನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿದ ಮುಖ್ಯಮಂತ್ರಿ, “ಇದು ಕೇವಲ ಅಧಿಕಾರಿಗಳ ಮೇಲಿನ ದಾಳಿಯಲ್ಲ, ಸರ್ಕಾರ, ಸಚಿವರು ಮತ್ತು ಶಾಸಕರ ಮೇಲಿನ ದಾಳಿಯಾಗಿದೆ. ಗೂಂಡಾಗಿರಿಗೆ ಸರ್ಕಾರ ಮಣಿಯುವುದಿಲ್ಲ” ಎಂದು ಎಚ್ಚರಿಸಿದರು.
ಬೀದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ :
ಬೀದಿ ವ್ಯಾಪಾರಿಗಳಿಗೆ ಸೂಕ್ತ ಸ್ಥಳಗಳನ್ನು ಗುರುತಿಸಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗುವುದು. ಆದರೆ ಪಾದಚಾರಿಗಳು ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುವ ರೀತಿಯಲ್ಲಿ ವ್ಯಾಪಾರ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಎನ್‌ಜಿಒಗಳು, ಸಂಘ-ಸಂಸ್ಥೆಗಳ ಸಹಕಾರಕ್ಕೆ ಆಹ್ವಾನ :
ಸ್ವಚ್ಛತಾ ಅಭಿಯಾನದಲ್ಲಿ ಎನ್‌ಜಿಒಗಳು ಹಾಗೂ ಸಂಘ-ಸಂಸ್ಥೆಗಳು ಒಂದೊಂದು ಪ್ರದೇಶ ಅಥವಾ ನಾಲ್ಕೈದು ರಸ್ತೆಗಳನ್ನು ದತ್ತು ಪಡೆದು ಸ್ವಚ್ಛತೆ ಕಾಪಾಡುವ ಜವಾಬ್ದಾರಿ ವಹಿಸಿದರೆ ಸರ್ಕಾರ ಸ್ವಾಗತಿಸುತ್ತದೆ ಎಂದು ಹೇಳಿದರು.
ಕಾವೇರಿ ನೀರಿನ ಕುರಿತು ಪ್ರತಿಕ್ರಿಯೆ :
ಕಾವೇರಿ ನೀರು ಹರಿಸುವ ವಿಚಾರವಾಗಿ ಮಾತನಾಡಿದ ಸಿಎಂ, “ರಾಜ್ಯದ ಒಂದು ಅಣೆಕಟ್ಟು ಇಂದು ಸಂಜೆ ವೇಳೆಗೆ ಭರ್ತಿಯಾಗುವ ಸಾಧ್ಯತೆಯಿದ್ದು, ನಂತರ ನೀರನ್ನು ಹಿಡಿದಿಡುವುದು ಕಷ್ಟವಾಗಲಿದೆ. ಒಳಹರಿವು, ನ್ಯಾಯಾಲಯದ ಬೆಳವಣಿಗೆ ಹಾಗೂ ವಿರೋಧ ಪಕ್ಷದ ನಾಯಕರು ಮತ್ತು ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್, ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಶಾಸಕ ಎಸ್.ಆರ್. ವಿಶ್ವನಾಥ್, ಜಿ.ಬಿ.ಎ. ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಮೊದಲಾದವರು ಉಪಸ್ಥಿತರಿದ್ದರು.






