ಮುಂದಿನ ಅವಧಿಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಶಿವಾನಂದ ಪಾಟೀಲ್

ಬೆಳಗಾವಿ : ‘ಮುಂದಿನ ಅವಧಿಯಲ್ಲೂ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರೇ ಇರಬಹುದು. ಇದರಲ್ಲಿ ತಪ್ಪೇನಿದೆ’ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ವಿಚಾರ ಭವಿಷ್ಯ ನುಡಿಯುವಂತಹದ್ದಲ್ಲ. ಸಿ.ಎಂ. ಹುದ್ದೆಯಲ್ಲಿ ಯಾರನ್ನು ಮುಂದುವರಿಸಬೇಕು ಮತ್ತು ಬದಲಿಸಬೇಕು ಎಂಬುದನ್ನು ಶಾಸಕಾಂಗ ಪಕ್ಷದ ಸಭೆ ಹಾಗೂ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ' ಎಂದು ಹೇಳಿದರು.
‘ಮುಖ್ಯಮಂತ್ರಿ ವಿಚಾರ ಪದೇ ಪದೇ ಚರ್ಚೆ ಆಗುತ್ತಿರುವ ಬಗ್ಗೆ ನನಗೆ ಗೊತ್ತಿಲ್ಲ. ಮಾಧ್ಯಮ ಪ್ರತಿನಿಧಿಗಳೇ ಪದೇ ಪದೆ ಪ್ರಶ್ನೆ ಕೇಳುತ್ತೀರಿ ಎಂದು ಚರ್ಚೆಯಾಗುತ್ತಿದೆ. ಅವಶ್ಯಕತೆ ಇಲ್ಲದಿರುವುದನ್ನು ನೀವು (ಮಾಧ್ಯಮದವರು) ಕೇಳಿದರೆ ಏನೂ ಉಪಯೋಗವಿಲ್ಲ' ಎಂದು ಶಿವಾನಂದ ಪಾಟೀಲ್ ತಿಳಿಸಿದರು.
ಗುರಿ ಮೀರುವ ನಿರೀಕ್ಷೆ : ಈ ವರ್ಷ 5ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ನಿರೀಕ್ಷೆಯಿದೆ. ಹಿಂದಿನ ವರ್ಷ ಬರಗಾಲವಿದ್ದ ಕಾರಣ, ಇಳುವರಿ ಮತ್ತು ಕಬ್ಬು ನುರಿಸುವಿಕೆ ಮೇಲೆ ಪರಿಣಾಮ ಬೀರಿದೆ. ಮುಂದಿನ ವರ್ಷ ನಾವು ಕಬ್ಬು ನುರಿಸುವ ಪ್ರಮಾಣದಲ್ಲಿ ಗುರಿ ಮೀರುವ ನಿರೀಕ್ಷೆಯಿದೆ' ಎಂದು ಶಿವಾನಂದ ಪಾಟೀಲ್ ತಿಳಿಸಿದರು.





