ಹಿಂದೂ ದೇವಾಲಯಗಳಿಗೆ ದೇಣಿಗೆ ನೀಡದಂತೆ ಅಪಪ್ರಚಾರ: ದೂರು

ಬೆಂಗಳೂರು: ರಾಜ್ಯ ಸರಕಾರದ ಹಿಂದೂ ದೇವಾಲಯಗಳಿಗೆ ದೇಣಿಗೆ ನೀಡದಂತೆ SANTANI.HUDUGI (ಸನಾತನಿ ಹುಡುಗಿ) ಎಂಬ ಹೆಸರಿನಲ್ಲಿ ಅಪಪ್ರಚಾರ ಮಾಡಿ ದ್ವೇಷ ಭಾವನೆ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿ ನಗರದ ಹಲಸೂರು ಗೇಟ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ಕೆಪಿಸಿಸಿ ವಕ್ತಾರ ರಮೇಶ್ ಬಾಬು ದೂರು ನೀಡಿದ್ದಾರೆ.
ಸನಾತನಿ ಹುಡುಗಿ ಹೆಸರಿನಲ್ಲಿ ಅನಾಮದೇಯ ಒಬ್ಬ ಹೆಣ್ಣಮಗಳು ಒಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಹಿಂದೂ ಧಾರ್ಮಿಕ ಭಾವನೆಯ ಜನರು ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲಿ ಬರುವ ಹಿಂದೂ ದೇವಾಲಯಗಳಿಗೆ ದೇಣಿಗೆ ಅಥವಾ ಹಣ ನೀಡದಂತೆ ಅಪಪ್ರಚಾರ ಮಾಡಿ ಜನರಲ್ಲಿ ದ್ವೇಷ ಭಾವನೆ ಉಂಟು ಮಾಡುವುದರ ಜೊತೆಗೆ ಜನಸಾಮಾನ್ಯರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನವನ್ನು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅಪಪ್ರಚಾರದ ವಿಡಿಯೋ ಮುಖಾಂತರ ಹಿಂದೂ ದೇವಾಲಯಗಳ ಮೇಲೆ ರಾಜ್ಯ ಸರಕಾರದ ಹಿಡಿತ ತಪ್ಪಿಸಬೇಕು, ಹಿಂದೂ ದೇವಾಲಯಗಳಿಗೆ ದೇಣಿಗೆ ನೀಡುವುದು ನಿಲ್ಲಿಸಬೇಕು, ದೇವಾಲಯಗಳು ಸರಕಾರದ ಹಿಡಿತದಿಂದ ಸ್ವತಂತ್ರವಾಗಬೇಕು, ಹಣ ನೀಡುವುದನ್ನು ನಿಲ್ಲಿಸಿ, ಯಾವುದೇ ದೇವಾಲಯಗಳಿಗೆ ಭೇಟಿ ನೀಡಿದಾಗ ಆ ದೇವಾಲಯಗಳು ಸರಕಾರದ ನಿಯಂತ್ರಣದಲ್ಲಿ ಇದೆಯೇ ಇಲ್ಲವೇ ಎಂಬುದನ್ನು ಮೊದಲು ಪರಿಶೀಲಿಸಿ, ಸರಕಾರಿ ಆಡಳಿತದಲ್ಲಿರುವ ದೇವಾಲಯಗಳಾದರೆ ಕೇವಲ ಒಂದು ರೂಪಾಯಿಯನ್ನು ನೀಡಿ, ನಮ್ಮ ದೇವಾಲಯಗಳ ಹಣ ಅನ್ಯ ಧರ್ಮಗಳಿಗೂ ಖರ್ಚಾಗುತ್ತದೆ ಇತ್ಯಾದಿ ಹೇಳಿಕೆಗಳನ್ನು ಮಾಡುವುದರ ಮೂಲಕ ದ್ವೇಷವನ್ನು ಹರಡಲು ಮತ್ತು ಸಾಮಾಜಿಕ ಸಾಮರಸ್ಯಕ್ಕೆ ದಕ್ಕೆ ತರುವ ಪ್ರಯತ್ನವನ್ನು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಮತ್ತು ಆರೋಪಿಯ ಜೊತೆ ಭಾಗಿ ಆಗಿರುವ ರಾಜ್ಯ ವಿರೋಧಿ ಹಾಗೂ ಹಿಂದೂ ಧರ್ಮ ವಿರೋಧಿಗಳನ್ನು ಪತ್ತೆ ಹಚ್ಚಿ, ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಅವರು ಒತ್ತಾಯಿಸಿದ್ದಾರೆ.







