BCC ನ್ಯೂಕ್ಲಿಐ ನೀಟ್-ಸೂಪ್ 30 ಚಾಲೆಂಜ್ ಯೋಜನೆಯ ಸಾಫ್ಟ್ ಲಾಂಚ್

ಬೆಂಗಳೂರು : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ನೀಟ್ ತರಬೇತಿ ನೀಡುವ ಮಹತ್ವಾಕಾಂಕ್ಷೆಯ ‘ಬಿಸಿಸಿ ನ್ಯೂಕ್ಲಿಐ ಸೂಪರ್ 30 ಚಾಲೆಂಜ್ ಯೋಜನೆ’ಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಗುರುವಾರ ವಿಧಾನಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಉದ್ಘಾಟಿಸುವ ಮೂಲಕ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದರು.
ಬ್ಯಾರೀಸ್ ಸೆಂಟ್ರಲ್ ಕಮಿಟಿ ಬೆಂಗಳೂರು (ರಿ.) ಮತ್ತು ನ್ಯೂಕ್ಲಿಐ ಸಂಸ್ಥೆಗಳು ಜಂಟಿಯಾಗಿ ರೂಪಿಸಿರುವ ಈ ಯೋಜನೆಯು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ತಜ್ಞರ ಮಾರ್ಗದರ್ಶನದಲ್ಲಿ ಗುಣಮಟ್ಟದ ನೀಟ್ ತರಬೇತಿಯನ್ನು ಸಂಪೂರ್ಣ ಉಚಿತವಾಗಿ ಒದಗಿಸುವ ಉದ್ದೇಶ ಹೊಂದಿದೆ. ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಪ್ರತಿಭಾವಂತ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸುಗಳಿಗೆ ಅಡ್ಡಿಯಾಗಬಾರದು ಎಂಬ ಆಶಯದೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.
ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಸಚಿವ ಯು.ಟಿ.ಖಾದರ್, ಪ್ರತಿಭಾವಂತ ಮತ್ತು ಅರ್ಹ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸನ್ನು ನನಸಾಗಿಸಲು ಬ್ಯಾರೀಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಹಾಗೂ ನ್ಯೂಕ್ಲಿಐ ಸಂಸ್ಥೆಗಳು ಕೈಗೊಂಡಿರುವ ಈ ಮಹತ್ವಪೂರ್ಣ ಯೋಜನೆಯನ್ನು ಶ್ಲಾಘಿಸಿದರು. ಸಮಾಜದ ಶೈಕ್ಷಣಿಕ ಸಬಲೀಕರಣಕ್ಕೆ ಇಂತಹ ಜನಪರ ಕಾರ್ಯಕ್ರಮಗಳು ಹೆಚ್ಚಿನ ಪ್ರೇರಣೆ ನೀಡುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಯೋಜನೆಯ ಯಶಸ್ಸಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನ್ಯೂಕ್ಲಿಐ ಸಂಸ್ಥಾಪಕ ಶೇಕ್ ಬಾಷೆ, ಸ್ಟ್ರಾಟಜಿ ಡೈರೆಕ್ಟರ್ ಶಾಫಿ, ಬ್ಯಾರೀಸ್ ಸೆಂಟ್ರಲ್ ಕಮಿಟಿ ಬೆಂಗಳೂರು (ರಿ.) ಅಧ್ಯಕ್ಷ ಶಬೀರ್ ಬ್ರಿಗೇಡ್, ಉಪಾಧ್ಯಕ್ಷರಾದ ಸಾಲಿತ್, ಸಲೀಂ ಸಿ.ಎಂ., ಶಂಶು ಮತ್ತು ಗಫೂರ್ ಕೆಂಟ್, ಸಂಘಟನಾ ಕಾರ್ಯದರ್ಶಿಗಳಾದ ಸಾವದ್ ಸುಲ್ತಾನ್‍ಪಾಳ್ಯ ಮತ್ತು ಹಾರಿಸ್ ಬೆಲ್ಮ, ಖಜಾಂಚಿ ರಿಫಾಯಿ ವಸಂತನಗರ, ಸದಸ್ಯರಾದ ಶಫೀಕ್ ಬೊಳಂತೂರು, ಅಬ್ಬಾಸ್ ಸಿ.ಪಿ., ಝಮೀರ್ ಉಳ್ಳಾಲ ಮತ್ತು ಅಡ್ವೊಕೇಟ್ ಅತಾವುಲ್ಲಾ, ಕಾನೂನು ಸಲಹೆಗಾರ ಅಡ್ವೊಕೇಟ್ ಕಲಂದರ್ ಕೊಯ್ಲ, ಶಿಕ್ಷಣ ಸಂಯೋಜಕರಾದ ಅಡ್ವೊಕೇಟ್ ರಾಶಿಫ್ ನಾಯರ್ಮೂಲೆ ಮತ್ತು ಸದಕತುಲ್ಲಾ ಉಪಸ್ಥಿತರಿದ್ದರು.
ಬಿಸಿಸಿ ನ್ಯೂಕ್ಲಿಐ ನೀಟ್-ಸೂಪ್ 30 ಚಾಲೆಂಜ್ ಯೋಜನೆ ಮೂಲಕ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ವ್ಯವಸ್ಥಿತ ಪಠ್ಯಕ್ರಮ, ತಜ್ಞ ಶಿಕ್ಷಕರ ಮಾರ್ಗದರ್ಶನ, ಕೇಂದ್ರೀಕೃತ ಪರೀಕ್ಷಾ ತಯಾರಿ ಮತ್ತು ಯಶಸ್ಸು ಆಧಾರಿತ ತರಬೇತಿ ಒದಗಿಸಲಾಗುತ್ತದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಬ್ಯಾರೀಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಮನವಿ ಮಾಡಿದೆ.
‘ಶಿಕ್ಷಣದ ಕನಸುಗಳಿಗೆ ರೆಕ್ಕೆಗಳಾಗೋಣ’ ಎಂಬ ಧ್ಯೇಯವಾಕ್ಯದೊಂದಿಗೆ ಆರಂಭಗೊಂಡಿರುವ ಈ ಯೋಜನೆಯು ಪ್ರತಿಭಾವಂತ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸನ್ನು ನನಸಾಗಿಸುವ ಮಹತ್ವದ ಹೆಜ್ಜೆಯಾಗಿದೆ. ಹೆಚ್ಚಿನ ಮಾಹಿತಿಗಾಗಿ ಬಿಸಿಸಿ ಶಿಕ್ಷಣ ಸಂಯೋಜಕರಾದ ಅಡ್ವೋಕೇಟ್ ರಾಶಿಫ್ ನಾಯರ್ಮೂಲೆ ಮತ್ತು ಅಡ್ವೋಕೇಟ್ ಕಲಂದರ್ ಕೊಯ್ಲಾ ಅವರನ್ನ 70196 09247 ಹಾಗೂ 94491 17063 ಈ ಮೊಬೈಲ್ ಸಂಖ್ಯೆಗಳಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.






