ರಾಜ್ಯ ಬಜೆಟ್ ಯುವ ಜನತೆಯ ಪಾಲಿಗೆ ಸಂಪೂರ್ಣ ನಿರಾಶದಾಯಕ : ಸಾಲಿಡಾರಿಟಿ ಯೂತ್ ಮೂವ್ಮೆಂಟ್

ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ಮಂಡಿಸಿರುವ 2026-27ನೇ ಸಾಲಿನ ಬಜೆಟ್ ರಾಜ್ಯದ ಯುವ ಜನತೆಯ ಪಾಲಿಗೆ ಸಂಪೂರ್ಣ ನಿರಾಶದಾಯಕವಾಗಿದ್ದು, ಯುವ ಸಮುದಾಯದ ಬೇಡಿಕೆ, ನಿರೀಕ್ಷೆಗಳು ಹುಸಿಗೊಂಡಿವೆ ಎಂದು ಕರ್ನಾಟಕ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ರಾಜ್ಯಾಧ್ಯಕ್ಷ ಡಾ.ನಸೀಮ್ ಅಹ್ಮದ್ ತಿಳಿಸಿದ್ದಾರೆ.
ಈ ಸಂಬಂಧ ಪ್ರಕಟನೆ ನೀಡಿರುವ ಅವರು, ಮುಖ್ಯಮಂತ್ರಿಯವರ ತಮ್ಮ ದಾಖಲೆಯ 17ನೇ ಬಜೆಟ್ ರಾಜ್ಯದ ಯುವಜನತೆ ಎದುರಿಸುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳು, ಉದ್ಯೋಗದ ಅನಿಶ್ಚಿತತೆ, ಮಾದಕ ಪದಾರ್ಥಗಳ ಜಾಲ, ಸೈಬರ್ ವಂಚನೆ, ಪರಿಸರ ಮಾಲಿನ್ಯ, ಸಾಲದ ಹೊರೆ, ಹೆಚ್ಚುತ್ತಿರುವ ಒತ್ತಡ ಹಾಗೂ ಬದಲಾಗುತ್ತಿರುವ ಆಹಾರ ಮತ್ತು ಜೀವನಶೈಲಿಯಿಂದ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಗಳಂತಹ ಗಂಭೀರ ಸವಾಲುಗಳಿಗೆ ಸಮಗ್ರ ಪರಿಹಾರಗಳು ಕಾಣಿಸದಿರುವುದು ನಿರಾಶಾದಾಯಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
2023ರ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಯುವಜನರ ಸಬಲೀಕರಣಕ್ಕಾಗಿ ಹಲವಾರು ಮಹತ್ವಾಕಾಂಕ್ಷಿ ಯೋಜನೆಗಳನ್ನು ಘೋಷಿಸಿತ್ತು. ಆದರೆ ಈ ಬಾರಿಯ ರಾಜ್ಯ ಬಜೆಟ್ನಲ್ಲಿ ಆ ಘೋಷಣೆಗಳಿಗೆ ಸಂಬಂಧಿಸಿದ ಸ್ಪಷ್ಟ ಯೋಜನೆಗಳು ಅಥವಾ ಅನುದಾನಗಳ ಬಗ್ಗೆ ಯಾವುದೇ ಉಲ್ಲೇಖ ಇಲ್ಲದಿರುವುದು ಯುವಜನರಲ್ಲಿ ಆತಂಕ ಮತ್ತು ಅಸಮಾಧಾನ ಮೂಡಿಸಿದೆ. ಪ್ರಣಾಳಿಕೆಯಲ್ಲಿ ಪ್ರತಿಯೊಂದು ಪಂಚಾಯತ್ ಮತ್ತು ವಾರ್ಡ್ ಮಟ್ಟದಲ್ಲಿ ‘ಭಾರತ್ ಜೋಡೋ ಯುವ ಶಕ್ತಿ ಕೇಂದ್ರ’ಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿಗೆ ಸಹಾಯ ಮಾಡಲಾಗುವುದು ಎಂದು ಘೋಷಿಸಲಾಗಿತ್ತು. ಆದರೆ ಈ ಯೋಜನೆಗೆ ಸಂಬಂಧಿಸಿದ ಯಾವುದೇ ಪ್ರಸ್ತಾಪ ಬಜೆಟ್ನಲ್ಲಿ ಇಲ್ಲದಿರುವುದು ಪ್ರಶ್ನಾರ್ಹವಾಗಿದೆ ಎಂದು ಹೇಳಿದ್ದಾರೆ.
ಇದೇ ರೀತಿ, ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಕರ್ನಾಟಕದ ಸ್ಥಳೀಯರಿಗೆ 80% ಉದ್ಯೋಗ ಅವಕಾಶಗಳನ್ನು ಖಚಿತಪಡಿಸುವುದಾಗಿ ನೀಡಿದ ಭರವಸೆ, ಯುವಕರ ಹೊಸ ಆಲೋಚನೆಗಳಿಗೆ ಮೆಂಟರ್ಶಿಪ್, ಮಾರುಕಟ್ಟೆ ಸಂಪರ್ಕ ಮತ್ತು ಸಾಫ್ಟ್ ಲೋನ್ಗಳನ್ನು ಒದಗಿಸುವ ಯೋಜನೆ, ಹಾಗೂ ಸರಕಾರದ ಎಲ್ಲಾ ಇಲಾಖೆಗಳಲ್ಲಿಯೂ 10,000 ಪದವೀಧರರಿಗೆ ‘ಯಂಗ್ ಇಂಟರ್ನ್ಸ್ ಪ್ರೋಗ್ರಾಂ’ ನೀಡುವ ಯೋಜನೆಗಳಿಗೂ ಬಜೆಟ್ನಲ್ಲಿ ಯಾವುದೇ ಸ್ಪಷ್ಟ ಕ್ರಮಗಳು ಕಾಣಿಸಿಲ್ಲ. ಅದೇ ರೀತಿ, ಪ್ರೋಟೋಟೈಪ್ಗಳು ಮತ್ತು ನವೀನ ಉತ್ಪನ್ನಗಳಿಗೆ ರೂ.1 ಲಕ್ಷ ಸಹಾಯಧನ, 'ಯುವಕರಿಗೆ ಯುವಕರು’ ಕಾರ್ಯಕ್ರಮದ ಮೂಲಕ ತಾಲೂಕು ಮಟ್ಟದ ಯುವ ಸಂಘಟನೆಗಳಿಗೆ ವರ್ಷಕ್ಕೆ ರೂ.5 ಲಕ್ಷ ಅನುದಾನ, ಹಾಗೂ ಪ್ರತಿಯೊಂದು ತಾಲೂಕು/ನಗರದಲ್ಲಿ ಉದ್ಯೋಗ ಮತ್ತು ಶಿಕ್ಷಣ ಮಾರ್ಗದರ್ಶನಕ್ಕಾಗಿ 24×7 ಯುವ ಸಹಾಯವಾಣಿ ಸ್ಥಾಪನೆ ಕುರಿತ ಘೋಷಣೆಗಳೂ ಬಜೆಟ್ನಲ್ಲಿ ಉತ್ತರ ಇಲ್ಲ ಎಂದು ಉಲ್ಲೇಖಿಸಿದ್ದಾರೆ.
ಇದಲ್ಲದೆ, ಸರಕಾರಿ ಉದ್ಯೋಗ ನೇಮಕಾತಿಯಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ಸೂಕ್ತ ವ್ಯವಸ್ಥೆ ರೂಪಿಸುವುದು, ಹಾಗೂ ಪ್ರತಿವರ್ಷ ರಾಜ್ಯದಾದ್ಯಂತದಿಂದ 1000 ಪ್ರತಿಭಾವಂತ ಯುವ ಕ್ರೀಡಾಪಟುಗಳನ್ನು ಗುರುತಿಸಿ ಆರ್ಥಿಕ ಸಹಾಯ ನೀಡುವುದು ಎಂಬ ಭರವಸೆಗಳಿಗೂ ಸ್ಪಷ್ಟ ಅನುದಾನ ಅಥವಾ ಕಾರ್ಯಯೋಜನೆ ಪ್ರಕಟವಾಗಿಲ್ಲ. ಕ್ರೀಡೆ ಮತ್ತು ಕ್ರೀಡಾಂಗಣಗಳ ಅಭಿವೃದ್ಧಿಗೆ ನೂರಾರು ಕೋಟಿ ರೂಪಾಯಿ ಮೀಸಲಿಡಲಾಗಿದ್ದರೂ, ಯುವಜನರ ಹಕ್ಕುಗಳ ವಕಾಲತ್ತು, ಸಮಸ್ಯೆಗಳ ಅಧ್ಯಯನ ಮತ್ತು ಸಮಗ್ರ ನೀತಿ ರೂಪಣೆಗೆ ಅಗತ್ಯವಾದ ಯುವಜನ ಆಯೋಗ ಸ್ಥಾಪನೆ ಕುರಿತು ಯಾವುದೇ ಪ್ರಸ್ತಾಪ ಇಲ್ಲದಿರುವುದು, ಗ್ಯಾರಂಟಿ ಯೋಜನೆಗಳಲ್ಲಿ ಯುವ ನಿಧಿಗೆ ಅನುದಾನ ಘೋಷಿಸದಿರುವುದು ಸರಕಾರ ಯುವಜನರ ಮೂಲಭೂತ ಸಮಸ್ಯೆಗಳನ್ನು ಕಡೆಗಣಿಸುತ್ತಿರುವುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಗಳು ಕೇವಲ ಘೋಷಣೆಗಳಾಗಿಯೇ ಉಳಿಯಬಾರದು. ಪ್ರಣಾಳಿಕೆಯಲ್ಲಿ ಘೋಷಿಸಿದ ಯೋಜನೆಗಳನ್ನು ಜಾರಿಗೆ ತರುವ ಬಗ್ಗೆ ಸರಕಾರ ಸ್ಪಷ್ಟ ನಿಲುವು ಪ್ರಕಟಿಸಿ, ಯುವಜನರ ಸಮಗ್ರ ಸಬಲೀಕರಣಕ್ಕೆ ಅಗತ್ಯವಾದ ಯೋಜನೆಗಳು ಮತ್ತು ಅನುದಾನಗಳನ್ನು ತಕ್ಷಣವೇ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.







