ಸಚಿವ ಸಂಪುಟದಲ್ಲಿ ಯುವ ಉದ್ಯೋಗ ಸೇತು, ಭಾರತ್ ಜೋಡೊ ಯುವ ಸಂಘಕ್ಕೆ ಅನುಮೋದನೆ: ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ಸ್ವಾಗತ

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅಧಿಕಾರ ಸ್ವೀಕರಿಸಿದ ಬಳಿಕ ನಡೆಸಿದ ಮೊದಲ ಸಚಿವ ಸಂಪುಟದಲ್ಲಿ ಯುವ ಉದ್ಯೋಗ ಸೇತು, ಭಾರತ್ ಜೋಡೊ ಯುವ ಸಂಘಕ್ಕೆ ಅನುಮೋದನೆ ನೀಡಿರುವ ಕ್ರಮಕ್ಕೆ ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ.ನಸೀಮ್ ಅಹ್ಮದ್ ಸ್ವಾಗತಿಸಿದ್ದಾರೆ.
ಈ ಬಗ್ಗೆ ಪ್ರಕಟನೆಯ ಮೂಲಕ ಹೇಳಿಕೆ ನೀಡಿರುವ ಅವರು, ಸರಕಾರಿ ಹುದ್ದೆಗಳ ನೇಮಕಾತಿ ಹೆಚ್ಚು ಸಲು ನೆರವು ಹಾಗೂ ಯುವ ಉದ್ಯೋಗಾಕಾಂಕ್ಷಿಗಳು ಖಾಸಗಿ ವಲಯದ ಉದ್ಯೋಗಾವಕಾಶ ಪಡೆಯಲು ಸಾಧ್ಯವಾಗುವಂತೆ ಅವರನ್ನು ಉದ್ಯೋಗದಾತರೊಂದಿಗೆ ಸಂಪರ್ಕಿಸುವ 'ಯುವ ಉದ್ಯೋಗ ಸೇತು' ಉದ್ಯೋಗ ವಿನಿಮಯ ಕೇಂದ್ರವನ್ನು ಮುಂದಿನ 60 ದಿನಗಳ ಒಳಗಾಗಿ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ನಿರುದ್ಯೋಗಿಗಳಿಗೆ ಇದೊಂದು ಆಶಾಕಿರಣವಾದ ಬೆಳವಣಿಗೆ. ಸರಕಾರ ಇದನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲು ಮುಂದಾಗಲಿ ಎಂದು ಆಗ್ರಹಿಸಿದ್ದಾರೆ.
ಅದೇ ರೀತಿ, ಯುವಜನರಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ಭಾತೃತ್ವ, ವೈಜ್ಞಾನಿಕ ಮನೋಭಾವ, ಸಾಮಾಜಿಕ ಸಾಮರಸ್ಯ ಮತ್ತು ಸಾಮುದಾಯಿಕ ಮನೋಭಾವವನ್ನು ಉತ್ತೇಜಿಸಲು ಗ್ರಾಮ ಪಂಚಾಯತ್ ಹಾಗೂ ನಗರ ವಾರ್ಡ್ಗಳ ವ್ಯಾಪ್ತಿಯಲ್ಲಿ 10 ಸಾವಿರ ಭಾರತ್ ಜೋಡೋ ಯುವ ಸಂಘ ಕ್ಲಬ್ ಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ. ಈ ನಡೆಯನ್ನು ಕೂಡ ಸೋಲಿಡಾರಿಟಿ ಯೂತ್ ಮೂಮೆಂಟ್ ಸ್ವಾಗತಿಸುತ್ತದೆ. ಭಾರತ್ ಜೋಡೋ ಯುವ ಸಂಘಗಳ ಮೂಲಕ ಸಮಾಜದ ಎಲ್ಲ ಜನರ ನಡುವೆ ಸಾಮಾಜಿಕ ಸಾಮರಸ್ಯ ಮೂಡಿಸಲು ಇಂತಹ ಕ್ರಮ ಅನಿವಾರ್ಯವಾಗಿತ್ತು. ಅದಕ್ಕೆ ಮುನ್ನುಡಿ ಬರೆದಿರುವುದು ಶ್ಲಾಘನೀಯ. ಆದಷ್ಟು ಶೀಘ್ರವೇ ಸರಕಾರವು ಇದರ ಸ್ಥಾಪನೆಗೆ ಮುಂದಾಗಲಿ ಎಂದು ಡಾ. ನಸೀಮ್ ಅಹ್ಮದ್ ಆಗ್ರಹಿಸಿದ್ದಾರೆ.
ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ದೊಡ್ಡ ಪಾಲನ್ನು ಹೊಂದಿರುವ ಯುವಕರು ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿ, ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ಪ್ರತಿನಿಧಿತ್ವದಂತಹ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯುವಕರ ಸಮಸ್ಯೆಗಳಿಗೆ ಸಮಗ್ರ ಹಾಗೂ ವ್ಯವಸ್ಥಾತ್ಮಕ ಪರಿಹಾರ ಒದಗಿಸಲು ಕರ್ನಾಟಕ ರಾಜ್ಯ ಯುವ ಆಯೋಗದ ಸ್ಥಾಪನೆ ಕೂಡ ಅತ್ಯಾವಶ್ಯಕವಾಗಿದೆ. 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಯುವ ಆಯೋಗ ಸ್ಥಾಪಿಸುವುದಾಗಿ ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಆದರೆ ಇನ್ನೂ ಆ ಭರವಸೆ ಈಡೇರದಿರುವುದು ಯುವ ಸಮುದಾಯದಲ್ಲಿ ನಿರಾಶೆಯನ್ನು ಉಂಟುಮಾಡಿದೆ. ಅದನ್ನು ಕೂಡ ನೂತನ ಮುಖ್ಯಮಂತ್ರಿ ಜಾರಿಗೆ ಶ್ರಮಿಸಬೇಕು. ಯುವ ಆಯೋಗ ಸ್ಥಾಪನೆಗೆ ಸಂಬಂಧಿಸಿದ ಅಧಿಸೂಚನೆಯನ್ನು ಕೂಡ ಕೂಡಲೇ ಹೊರಡಿಸಬೇಕು ಎಂದು ಡಾ.ನಸೀಮ್ ಅಹ್ಮದ್ ಆಗ್ರಹಿಸಿದ್ದಾರೆ.






