ರಾಜ್ಯ ಸಾರಿಗೆ ನೌಕರರ ಹೋರಾಟಕ್ಕೆ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಬೆಂಬಲ
ಬೇಡಿಕೆಗಳ ಈಡೇರಿಕೆಗೆ ತಕ್ಷಣ ಕ್ರಮ ಕೈಗೊಳ್ಳಲು ಸರಕಾರಕ್ಕೆ ಒತ್ತಾಯ

ಬೆಂಗಳೂರು: ವೇತನ ಪರಿಷ್ಕರಣೆ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕ.ರಾ.ರ.ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಬೆಂಬಲ ವ್ಯಕ್ತಪಡಿಸಿದೆ.
ಜಂಟಿ ಕ್ರಿಯಾ ಸಮಿತಿಯನ್ನು ಶುಕ್ರವಾರ ಭೇಟಿಯಾಗಿರುವ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಪದಾಧಿಕಾರಿಗಳು, ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಂಘಟನೆಯ ಪರವಾಗಿ ಸಾರಿಗೆ ನೌಕರರ ಹೋರಾಟಕ್ಕೆ ಸಾಥ್ ನೀಡುವುದಾಗಿ ಭರವಸೆ ನೀಡಿದ್ದಾರೆ.
ರಾಜ್ಯ ಸರಕಾರವು ಸಾರಿಗೆ ನೌಕರರ ಬೇಡಿಕೆಗಳನ್ನು ಮಾನವೀಯ ದೃಷ್ಟಿಕೋನದಿಂದ ಪರಿಗಣಿಸಿ ಅವುಗಳ ಈಡೇರಿಕೆಗೆ ತ್ವರಿತವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮೂವ್ ಮೆಂಟ್ ರಾಜ್ಯಾಧ್ಯಕ್ಷ ಡಾ.ನಸೀಮ್ ಅಹ್ಮದ್ ಒತ್ತಾಯಿಸಿದ್ದಾರೆ.
ರಾಜ್ಯದ ಸಾರಿಗೆ ನಿಗಮಗಳ ನೌಕರರು ಕಳೆದ ಹಲವು ತಿಂಗಳಿನಿಂದ ತಮ್ಮ ವೇತನ ಹಾಗೂ ಇತರ ಹಕ್ಕುಗಳ ಈಡೇರಿಕೆಗೆ ಶಾಂತಿಯುತ ಹೋರಾಟ ನಡೆಸುತ್ತಿದ್ದು, ಈ ಹೋರಾಟವು ಇದೀಗ ಗಂಭೀರ ಹಂತ ತಲುಪಿದೆ. ಜುಲೈ 30ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಜಂಟಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ನಡೆದ ರಾಜ್ಯಮಟ್ಟದ ಉಪವಾಸ ಸತ್ಯಾಗ್ರಹದಲ್ಲಿ ನೌಕರರು ತಮ್ಮ ಆಕ್ರೋಶವನ್ನು ಬಹಿರಂಗಪಡಿಸಿದ್ದಾರೆ. ಈ ಹಿಂದೆ 2024ರ ಡಿಸೆಂಬರ್ 31ರಂದು ನೌಕರರು ನಡೆಸಿದ್ದ ಅನಿರ್ದಿಷ್ಟ ಮುಷ್ಕರವನ್ನು ಸರಕಾರದ ಮನವಿಗೆ ಸ್ಪಂದಿಸಿ ಹಿಂಪಡೆಯಲಾಗಿತ್ತು. ಆದರೆ ನಂತರ ನಡೆದ ಸಭೆಗಳಲ್ಲಿ ನೀಡಲಾದ ಭರವಸೆಗಳನ್ನು ಸರಕಾರ ಈವರೆಗೆ ಈಡೇರಿಸಿಲ್ಲ. ಇದರ ಪರಿಣಾಮವಾಗಿ ನೌಕರರಲ್ಲಿ ಅಸಮಾಧಾನ ಉಲ್ಬಣಗೊಂಡಿದ್ದು, ಜಂಟಿ ಕ್ರಿಯಾ ಸಮಿತಿ ಆಗಸ್ಟ್ 5ರಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ಘೋಷಿಸಿದೆ. ಇದರಿಂದ ರಾಜ್ಯದ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತವಾಗುವ ಅಪಾಯ ಇದೆ. ಆದ್ದರಿಂದ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲು ತಕ್ಷಣ ಮುಂದಾಗಬೇಕು ಎಂದು ಅವರು ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.







